Advertisement

ಸರಿ ಎಂದ್ರು ಕೆಲವರು..ಸರಿಯಲ್ಲವೆಂದ್ರು ಹಲವರು!

05:25 PM Dec 20, 2018 | |

ಯಾವುದೇ ದೇವಸ್ಥಾನಕ್ಕೆ ಹೋದರೂ ಪ್ರಸಾದ ಸ್ವೀಕರಿಸಿ ಹೋಗೋಣ ಎಂದು ಗಂಟೆಗಟ್ಟಲೇ ಭಕ್ತರು ಕಾಯುತ್ತಾರೆ. ದೇವರಿಗೆ ನೀಡುವ ಗೌರವವನ್ನು ಭಕ್ತರು ಪ್ರಸಾದಕ್ಕೂ ನೀಡುತ್ತಾರೆ. ಆದರೆ, ಇಂತಹ ಪ್ರಸಾದ ವ್ಯವಸ್ಥೆ ಇನ್ನು, ಸರ್ಕಾರದ ಪರೀಕ್ಷೆಯ ವ್ಯಾಪ್ತಿಗೆ ಒಳಪಡಲಿದೆ. ಇದಕ್ಕೆ ಹಲವರು ಸರಿ ಎಂದರೆ, ಇನ್ನೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಚಾಮರಾಜನಗರ ಕೊಳ್ಳೇಗಾಲ ತಾಲೂಕಿನ ಸುಳ್ವಾಡಿಯಲ್ಲಿ ಪ್ರಸಾದ ಸ್ವೀಕರಿಸಿ ಹಲವರು ಮೃತಪಟ್ಟ ಹಿನ್ನೆಲೆಯಲ್ಲಿ ಸರ್ಕಾರ, ಇಂತಹವೊಂದು ನಿರ್ಧಾರಕ್ಕೆ ಬಂದಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ದೇವಸ್ಥಾನದಲ್ಲಿ ನೀಡುವ ಅನ್ನಪ್ರಸಾದ ಇನ್ಮುಂದೆ ಆರೋಗ್ಯ ಪರಿವೀಕ್ಷಕರಿಂದ ಪರೀಕ್ಷೆಗೊಳಪಡಲಿದೆ.

ಒಂದು ಕಡೆ ನಿರಂತರ ಪ್ರಸಾದ: ದಕ್ಷಿಣ ಕರ್ನಾಟಕದಲ್ಲಿ ಇರುವಂತೆ ದೊಡ್ಡ ದೇವಸ್ಥಾನಗಳು ಹಾಗೂ ನಿರಂತರ ಪ್ರಸಾದದ ವ್ಯವಸ್ಥೆ ಇರುವ ದೇವಸ್ಥಾನಗಳು ಜಿಲ್ಲೆಯಲ್ಲಿ ಅಷ್ಟೊಂದಿಲ್ಲ. ಸದ್ಯ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದಡಿ ಕೂಡಲಸಂಗಮದಲ್ಲಿ ಭಕ್ತರಿಗೆ ನಿರಂತರ ಪ್ರಸಾದದ ವ್ಯವಸ್ಥೆ ಇದೆ. ಅದನ್ನು ಬಿಟ್ಟರೆ ಜಿಲ್ಲೆಯಲ್ಲಿ ಇಂತಹ ವ್ಯವಸ್ಥೆ ಇಲ್ಲ. ಖಾಸಗಿ ದೇವಸ್ಥಾನಗಳಲ್ಲಿ ಭಕ್ತರೇ ಸ್ವಯಂ ಪ್ರೇರಣೆಯಿಂದ ಪ್ರಸಾದದ ವ್ಯವಸ್ಥೆ (ಹುಣ್ಣಿಮೆ, ಜಾತ್ರೆಯಂದು ಹೆಚ್ಚು) ಮಾಡುವ ಸಂಪ್ರದಾಯ ಜಿಲ್ಲೆಯಲ್ಲಿದೆ.

1167 ಮುಜರಾಯಿ ದೇವಸ್ಥಾನ: ಮುಜರಾಯಿ ಇಲಾಖೆಯಡಿ ಜಿಲ್ಲೆಯಲ್ಲಿ ಒಟ್ಟು 1167 ದೇವಸ್ಥಾನಗಳಿವೆ. ಆದಾಯ ಇರುವ ದೇವಸ್ಥಾನಗಳು ಹಾಗೂ ಆದಾಯವಿಲ್ಲದ ದೇವಸ್ಥಾನಗಳು ಎಂಬ ಎರಡು ಭಾಗಗಳು ಇಲಾಖೆಯಲ್ಲಿದ್ದು, ಆದಾಯ ಇರುವ ದೇವಸ್ಥಾನಗಳಲ್ಲಿ ಎ ಮತ್ತು ಬಿ ಗುಂಪಿನಡಿ ಇಲಾಖೆ ಗುರುತಿಸುತ್ತದೆ. ಎ ಗುಂಪಿನಡಿ ತುಳಸಿಗೇರಿ ದೇವಸ್ಥಾನವಿದ್ದು, ಬಾದಾಮಿಯ ಬನಶಂಕರಿ ದೇವಸ್ಥಾನವೂ ಮುಜರಾಯಿ ಇಲಾಖೆಗೆ ಪಡೆಯಲಾಗಿತ್ತು. ಆದರೆ, ಇದಕ್ಕೆ ಟ್ರಸ್ಟ್‌ನವರು ವಿರೋಧ ವ್ಯಕ್ತಪಡಿಸಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ ಎ ಕೆಟಗರಿ ಅಡಿ ತುಳಸಿಗೇರಿ ದೇವಸ್ಥಾನ ಮಾತ್ರವಿದೆ. ಇನ್ನು ಆದಾಯವಿಲ್ಲದ ದೇವಸ್ಥಾನಗಳು 1167 ಇವೆ. ಬಾಗಲಕೋಟೆ ತಾಲೂಕಿನಲ್ಲಿ 191, ಬಾದಾಮಿ-171, ಬೀಳಗಿ-112, ಜಮಖಂಡಿ-344, ಮುಧೋಳ-164, ಹುನಗುಂದ ತಾಲೂಕಿನಲ್ಲಿ 181 ದೇವಸ್ಥಾನಗಳು ಇಲಾಖೆಯಲ್ಲಿವೆ.

ಪ್ರತಿ ದೇವಸ್ಥಾನಕ್ಕೂ ತದ್‌ಜೀಕ ಭತ್ಯೆ!: ಜಿಲ್ಲೆಯ ಆದಾಯವಿಲ್ಲದ ಮುಜರಾಯಿ ಇಲಾಖೆಯ ಸಿ ಶ್ರೇಣಿಯ ದೇವಸ್ಥಾನಗಳಿಗೆ ಸರ್ಕಾರವೇ ತದ್‌ಜೀಕ್‌ ಭತ್ಯೆ ನೀಡುತ್ತದೆ. ಅದು ಪ್ರತಿದಿನ ಎಣ್ಣೆ-ದೀಪ, ಪೂಜೆ- ಪುನಸ್ಕಾರ ನಡೆಸಲು ಬಳಸಬೇಕು. ಜಿಲ್ಲಾಧಿಕಾರಿಗಳು, ಆಯಾ ತಾಲೂಕಿನ ತಹಶೀಲ್ದಾರ್‌ಗೆ ಒಂದು ದೇವಸ್ಥಾನಕ್ಕೆ ವಾರ್ಷಿಕ ರೂ. 48 ಸಾವಿರದಂತೆ ಮುಜರಾಯಿ ಇಲಾಖೆ ಅನುದಾನ ಬಿಡುಗಡೆ ಮಾಡುತ್ತಾರೆ. ಆಯಾ ತಹಶೀಲ್ದಾರರು, ತಮ್ಮ ತಾಲೂಕಿನ ದೇವಸ್ಥಾನಗಳಿಗೆ ಈ ಅನುದಾನ ಬಿಡುಗಡೆ ಮಾಡಬೇಕು. 1167 ದೇವಸ್ಥಾನಗಳಿಗೂ ತಲಾ 48 ಸಾವಿರ ಅನುದಾನ ದೇವಸ್ಥಾನಗಳಿಗೆ ವಾರ್ಷಿಕ ಹೋಗುತ್ತದೆ. ಅದೇ ಹಣದಲ್ಲಿ ಪೂಜಾರಿಗಳು ಎಣ್ಣೆ, ದೀಪ, ಪೂಜೆ ಪುನಸ್ಕಾರ ಕೈಗೊಳ್ಳಬೇಕು. ಆದರೆ, ಇದು ಎಷ್ಟರ ಮಟ್ಟಿಗೆ ಸದ್ಬಳಕೆಯಾಗುತ್ತದೆ ಎಂಬ ಪ್ರಶ್ನೆಯೂ ಕೆಲವರಲ್ಲಿದೆ.

Advertisement

ಪ್ರಸಾದ ಎಂಬುದು ಭಕ್ತರಲ್ಲಿ ಭಾವನಾತ್ಮಕ ಸಂಬಂಧ ಬೆಳೆಸುವ ಪವಿತ್ರ ಸ್ಥಾನ ಪಡೆದಿದೆ. ಇದರ ಮೇಲೆ ಯಾರೂ ಸಂದೇಹ ಪಡಬಾರದು. ಆದರೆ, ಈಚಿನ ದಿನಗಳಲ್ಲಿ ಪ್ರಸಾದದಲ್ಲೂ ವಿಷ ಬೆರೆಯುವ ಪ್ರಕರಣ ನಡೆದಾಗ, ಭಕ್ತರ ಹಿತದೃಷ್ಟಿಯಿಂದ ಸರ್ಕಾರ ಹೊಸ ನಿರ್ಧಾರ ಕೈಗೊಂಡಿರುವುದು ಸೂಕ್ತ.
 ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ,
 ಕೂಡಲಸಂಗಮ

ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆಗೂ ಮುನ್ನ ಪರೀಕ್ಷೆ ಮಾಡಬೇಕೆಂಬ ಸರ್ಕಾರದ ಆದೇಶ ತಲುಪಿಲ್ಲ. 20 ಅಂಶಗಳ ಆಧಾರದ ಮೇಲೆ ಪ್ರಸಾದ ವ್ಯವಸ್ಥೆ ಉಸ್ತುವಾರಿ ಮಾಡಬೇಕೆಂಬುದನ್ನು ಮಾಧ್ಯಮಗಳ ಮೂಲಕ ಕೇಳಿದ್ದೇವೆ. ಇದು ಇನ್ನೂ ವಿಧಾನಸಭೆಯಲ್ಲಿ ಚರ್ಚೆಯ ಹಂತದಲ್ಲಿದೆ. ಈ ಕುರಿತು ಸರ್ಕಾರದ ಆದೇಶ ತಲುಪಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. 
 ಕೆ.ಜಿ. ಶಾಂತಾರಾಮ್‌, ಜಿಲ್ಲಾಧಿಕಾರಿ

ಭಾರತೀಯ ಸಂಸ್ಕೃತಿಯಲ್ಲಿ ಪ್ರಸಾದಕ್ಕೆ ಪವಿತ್ರ ಸ್ಥಾನವಿದೆ. ಪ್ರಸಾದ ಪಡೆದರೆ ಮನಸ್ಸು-ಭಾವನೆ ಶುದ್ಧವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಆದರೆ, ಈಚಿನ ದಿನಗಳಲ್ಲಿ ಪ್ರಸಾದಕ್ಕೇ ವಿಷ ಬೆರೆಸುವ ಪ್ರಕರಣ ನಡೆದಿರುವುದು ತುಂಬಾ ನೋವುಂಟು ಮಾಡಿದೆ. ಇಂತಹ ಘಟನೆ ನಡೆಯದಂತೆ ತಡೆಯುವುದು ಒಂದೆಡೆಯಾದರೆ, ತಪ್ಪಿಸ್ಥರಿಗೆ ಒಮ್ಮೆ ಕಠಿಣ ಶಿಕ್ಷೆ ಕೊಟ್ಟರೆ ಘಟನೆ ಮರುಕಳಿಸುವುದಿಲ್ಲ. ಪ್ರಸಾದದ ಮೇಲೂ ಕಂಡವರ ಕಣ್ಣು ಬೀಳುತ್ತಿರುವುದು, ಸರ್ಕಾರದ ಮಧ್ಯಪ್ರವೇಶ ಬೇಸರದ ಸಂಗತಿ. ಪ್ರಸಾದಕ್ಕೆ ಅನುಮತಿ ಹೆಸರಲ್ಲಿ ಹಣ ಕೀಳುವ ಪರಿಪಾಠವಾಗುವ ಆತಂಕವಿದೆ.  
ರಾಘವೇಂದ್ರ ಕುಲಕರ್ಣಿ,
ಸಾಮಾಜಿಕ ಕಾರ್ಯಕರ್ತ

„ಶ್ರೀಶೈಲ ಕೆ. ಬಿರಾದಾರ 

Advertisement

Udayavani is now on Telegram. Click here to join our channel and stay updated with the latest news.

Next