ಹೊಸದಿಲ್ಲಿ: ಸೆಪ್ಟಂಬರ್ 1ರಿಂದ ದೇಶಾದ್ಯಂತ ಶಾಲೆಗಳನ್ನು ಪುನರಾರಂಭಿಸುವ ಚಿಂತನೆಗೆ ಕೇಂದ್ರ ಆರೋಗ್ಯ ಇಲಾಖೆ ಸಹಮತ ವ್ಯಕ್ತಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಮಾನವ ಸಂಪದಭಿವೃದ್ಧಿ ಇಲಾಖೆ ಸೆ. 1ರಿಂದ ಶಾಲೆ ಆರಂಭಿಸುವ ಬಗ್ಗೆ ಒಲವು ವ್ಯಕ್ತಪಡಿಸಿತ್ತು.
ಆದರೆ ಆ. 30ರ ಹೊತ್ತಿಗೆ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 30 ಲಕ್ಷ ಮುಟ್ಟಲಿದೆ.
ಹಾಗಾಗಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಹಿತದೃಷ್ಟಿಯನ್ನು ನೋಡಿಕೊಂಡು ಶಾಲೆಗಳನ್ನು ಆರಂಭಿಸಬೇಕು ಎಂಬ ಅಭಿಪ್ರಾಯವನ್ನು ಆರೋಗ್ಯ ಇಲಾಖೆ ಹೊಂದಿದೆ.
ವಿದೇಶಗಳಲ್ಲಿ ಶಾಲೆ, ಕಾಲೇಜು ಪುನರಾರಂಭಿಸಿದ ಬಳಿಕ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಕೋವಿಡ್ 19 ಸೋಂಕು ತಗಲಿದ್ದರಿಂದ ಶಾಲೆಗಳನ್ನು ಮತ್ತೆ ಮುಚ್ಚಲಾಯಿತು ಎಂದು ಸಚಿವಾಲಯ ಹೇಳಿದೆ.