Advertisement

ಪ್ರತಿ ಹಳ್ಳಿಗೂ ಸರಕಾರಿ ಬಸ್‌ ಓಡಿಸಲು ಕ್ರಮ

09:52 AM May 05, 2022 | Team Udayavani |

ಮುಂಡಗೋಡ: ರಾಜ್ಯದ ಪ್ರತಿ ಹಳ್ಳಿಯಲ್ಲೂ ಸಾರಿಗೆ ಸಂಸ್ಥೆ ಬಸ್‌ ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

Advertisement

ಬುಧವಾರ ಪಟ್ಟಣದ ನೂತನ ಬಸ್‌ ನಿಲ್ದಾಣ ಉದ್ಘಾಟನೆ ಹಾಗೂ ಡಿಪೋ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸಾರಿಗೆ ಇಲಾಖೆಯಲ್ಲಿ ಅನೇಕ ಬದಲಾವಣೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಜನ ಗ್ರಾಮದಿಂದ ಪಟ್ಟಣಕ್ಕೆ ಅಲ್ಲಿಂದ ಬೇರೆ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಲು ಸಂಪರ್ಕ ಬಹಳ ಮುಖ್ಯ. ಆ ಸಂಪರ್ಕವನ್ನು ಜೋಡಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ರಾಜ್ಯದಲ್ಲಿರುವ ಪ್ರತಿಯೊಂದು ಗ್ರಾಮಗಳಿಗೂ ಸರ್ಕಾರದ ಬಸ್‌ ಓಡಾಡುವ ವ್ಯವಸ್ಥೆ ಕಲ್ಪಿಸಲು ಸರಕಾರ ಬದ್ಧವಾಗಿದೆ ಎಂದರು.

ಇಲಾಖೆ ಈಗಾಗಲೆ ಬಹಳಷ್ಟು ನಷ್ಟದಲ್ಲಿದೆ. ನಷ್ಟ ಸರಿದೂಗಿಸಲು ಅನೇಕ ಸುಧಾರಣೆ ಮಾಡಲಾಗಿದೆ. ಮುಖ್ಯಮಂತ್ರಿಗಳು ಶ್ರೀನಿವಾಸ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು ಅನೇಕ ಬದಲಾವಣೆ ತರಲು ತೀರ್ಮಾನಿಸಲಾಗಿದೆ. ಮುಂದಿನ ದಿನದಲ್ಲಿ ಸಾರಿಗೆ ಇಲಾಖೆಯನ್ನು ಲಾಭದತ್ತ ಕೊಂಡೊಯ್ಯುವ ಕಾರ್ಯ ಮಾಡಲಾಗುವುದು ಎಂದರು.

ಮುಖ್ಯಮಂತ್ರಿ ಬೊಮ್ಮಾಯಿ ಅವರು ತೆಗೆದುಕೊಂಡ ಪ್ರಮುಖ ನಿರ್ಧಾರಗಳಿಂದ ಅಭಿವೃದ್ಧಿ ಕಾರ್ಯ ವೇಗ ಪಡೆದಿದೆ. ಸಾರಿಗೆ ಇಲಾಖೆಯಿಂದ ಈ ಭಾಗದಲ್ಲಿ ನೂತನ ಬಸ್‌ ನಿಲ್ದಾಣಗಳ ಲೋಕಾರ್ಪಣೆ, ಬಸ್‌ ಡಿಪೋ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯುತ್ತಿದೆ. ಮುಂದಿನ ದಿನದಲ್ಲಿ ಗಡಿ ಭಾಗದ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ನೀಡಿ ಜನರ ಸಂಪರ್ಕಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಅನೇಕ ವರ್ಷಗಳಿಂದ ಈ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾಗಿ ನನೆಗುದಿಗೆ ಬಿದ್ದ ಯೋಜನೆಗಳಿಗೆ ಸಚಿವ ಹೆಬ್ಟಾರ ಕಾಯಕಲ್ಪ ಕೊಡುವ ಕಾರ್ಯ ಮಾಡುತ್ತಿದ್ದಾರೆ ಎಂದರು.

Advertisement

ಕಾರ್ಮಿಕ ಸಚಿವ ಹೆಬ್ಟಾರ ಮಾತನಾಡಿ, ಬಹಳ ಕಷ್ಟಪಟ್ಟು ಮಂಜೂರಾಗಿರುವ ಡಿಪೋ ಇದಾಗಿದೆ. 2016 ನೇ ಸಾಲಿನಲ್ಲಿ ಮುಂಡಗೋಡ ಸುತ್ತ-ಮುತ್ತ 7 ಡಿಪೋ ಇವೆ ಎಂಬ ಕಾರಣಕ್ಕೆ ಪ್ರಸ್ತಾವನೆ ರದ್ದಾಯಿತು. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ನಾನು ಸಂಸ್ಥೆ ಅಧ್ಯಕ್ಷನಾದ ನಂತರ ಇದೊಂದು ವಿಶೇಷ ಪ್ರಕರಣವೆಂದು ಮನವರಿಕೆ ಮಾಡಿ ಪುನಃ ಮುಂಡಗೋಡಿಗೆ ಡಿಪೋ ಮಂಜೂರು ಮಾಡಲಾಯಿತು. ವಿಶೇಷವಾಗಿ ಉತ್ತರಕನ್ನಡ ಜಿಲ್ಲೆ ಗುಡ್ಡಗಾಡು ಪ್ರದೇಶ. ಹಳ್ಳಿಗಳು ಹೆಚ್ಚು. ಬಸ್‌ ಇಲ್ಲದೇ ಜನ, ವಿದ್ಯಾರ್ಥಿಗಳು ಪರದಾಡುತ್ತಾರೆ. ಇದನ್ನೆಲ್ಲ ಗಮನಿಸಿ ಡಿಪೋ ಆರಂಭಿಸಲು ಸರಕಾರ ಮುಂದಾಗಿದೆ ಎಂದರು.

ಮುಂಡಗೋಡ ಜನರ ಶತಮಾನದ ಕನಸು ನನಸಾಗುತ್ತಿದೆ. ಮುಂಡಗೋಡಿಗೆ ಬಸ್‌ ಇಲ್ಲದ ಕನಸಿಗೆ ಶಾಶ್ವತ ಪರಿಹಾರ ಸಿಗುವಂತೆ ಸಾರಿಗೆ ಸಚಿವರು ಅಧಿಕಾರಿಗೆ ಮತ್ತು ಗುತ್ತಿಗೆದಾರರಿಗೆ ಆದಷ್ಟು ಬೇಗ ಕೆಲಸಕ್ಕೆ ಚಾಲನೆ ನೀಡುವಂತೆ ಸೂಚಿಸಬೇಕು. ಬರುವ 2023 ನೇ ಸಾಲಿನಲ್ಲಿ ಈ ಡಿಪೋದಲ್ಲಿ ಬಸ್‌ ಓಡಾಡುವಂತಾಗಬೇಕು ಎಂದರು.

ವಾಕರಸಾ ಸಂಸ್ಥೆಯ ಅಧ್ಯಕ್ಷ ವಿ.ಎಸ್‌. ಪಾಟೀಲ ಮಾತನಾಡಿ, ಬಹಳ ದಿನಗಳ ಕನಸು ಇಂದು ಈಡೇರಿದೆ. ಕೊರೊನಾ ಲಾಕ್‌ಡೌನ್‌ಗೂ ಮೊದಲು ಸಂಸ್ಥೆ ವ್ಯಾಪ್ತಿಯ ಬಸ್‌ಗಳು ನಿತ್ಯ ಕನಿಷ್ಟ 17 ಲಕ್ಷ ಕಿ.ಮಿ ಸಂಚರಿಸುತ್ತಿದ್ದವು. ಸುಮಾರು 22 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಆದರೆ ಲಾಕ್‌ಡೌನ್‌ ನಂತರ ಬಹಳ ನಷ್ಟ ಅನುಭವಿಸಿತು. ಲಾಕ್‌ಡೌನ ನಂತರ ದಿನ ನಿತ್ಯ 50 ರಿಂದ 75 ಲಕ್ಷ ರೂ. ನಷ್ಟವಾಗುತ್ತಿದೆ. ಆದರೆ ಸರಕಾರ ಜನರ ಹಿತದೃಷ್ಟಿಯಿಂದ ಎಲ್ಲ ಕಡೆ ಬಸ್ಸಿನ ವ್ಯವಸ್ಥೆ ಕಲ್ಪಿಸಿದೆ. ಸಾರಿಗೆ ಸಂಸ್ಥೆ ಬಡವರ ಮಧ್ಯಮ ವರ್ಗದ ಜನರ ಮುಖ್ಯ ಸಂಸ್ಥೆಯಾಗಿದೆ. ಇದರಲ್ಲಿ ಹೆಚ್ಚು ವಿದ್ಯಾರ್ಥಿಗಳಿಗೆ ಪಾಸ್‌ ನೀಡಲಾಗಿದೆ. ಜನ ಹೆಚ್ಚೆಚ್ಚು ಬಸ್‌ಗಳಲ್ಲಿ ಪ್ರಯಾಣಿಸಬೇಕು ಎಂದರು.

ತಾಲೂಕಿಗೆ ಇದೇ ಮೊದಲ ಬಾರಿ ಭೇಟಿ ನೀಡಿದ ಸಚಿವ ಶ್ರೀರಾಮುಲು ಹಾಗೂ ಸಚಿವ ಹೆಬ್ಟಾರ್‌ ಅವರನ್ನು ತಾಲೂಕು ವಾಲ್ಮೀಕಿ ಸಮಾಜ, ದಲಿತ ಸಂಘರ್ಷ ಸಮಿತಿ ಭೋವಿ ಸಮಾಜ ಹಾಗೂ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದಿಂದ ಸನ್ಮಾನಿಸಲಾಯಿತು.

ಪ.ಪಂ. ಅಧ್ಯಕ್ಷೆ ರೇಣುಕಾ ಹಾವೇರಿ, ಯುವ ಮುಖಂಡ ವಿವೇಕ ಹೆಬ್ಟಾರ, ಮುಖಂಡರಾದ ಎಲ್‌.ಟಿ. ಪಾಟೀಲ, ರವಿಗೌಡ ಪಾಟೀಲ, ಉಮೇಶ ಬಿಜಾಪುರ, ನಾಗಭೂಷಣ ಹಾವಣಗಿ, ಗುಡ್ಡಪ್ಪ ಕಾತೂರ, ರವಿ ಹಾವೇರಿ, ತಹಶೀಲ್ದಾರ ಶ್ರೀಧರ ಮುಂದಲಮನಿ, ಸಾರಿಗೆ ಇಲಾಖೆ ಅದಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು. ಎಸ್‌ ಪಟ್ಟಣಶೆಟ್ಟಿ ನಿರೂಪಿಸಿದರು. ಎನ್‌. ಎಚ್‌. ಹಿರೇಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next