ಬೆಂಗಳೂರು: ಸತತವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಏರಿಕೆ ಅನಿವಾರ್ಯ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಸಾರಿಗೆ ಸಂಸ್ಥೆಯ ನಾಲ್ಕು ವಿಭಾಗಗಳಲ್ಲಿ ಏರಿಕೆ ಅನಿವಾರ್ಯ. ಶೇ.18ರಷ್ಟು ದರ ಏರಿಕೆ ಮಾಡಬೇಕೆಂಬ ಶಿಫಾರಸು ಇದೆ. ಅದನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ಪೆಟ್ರೋಲ್, ಡೀಸೆಲ್ ದರವೂ ಏರುತ್ತಿದೆ. ಸಾರಿಗೆ ಇಲಾಖೆಯೂ ನಷ್ಟದಲ್ಲಿದೆ. ಖಾಸಗಿ ಬಸ್ ಗಳು ದರ ಏರಿಸುತ್ತಲೇ ಇವೆ. ರಾಜ್ಯದ ಎಲ್ಲೆಡೆ ಸರ್ಕಾರಿ ಬಸ್ ಸೇವೆ ಒದಗಿಸುತ್ತೇವೆ. ಈ ಮೂಲಕ ಖಾಸಗಿಯವರಿಗೆ ಕಡಿವಾಣ ಹಾಕಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ 21 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗಿದೆ. ನಾವು ಈ ಸಂದರ್ಭದಲ್ಲಿ ಸರ್ಕಾರಿ ಬಸ್ ಟಿಕೆಟ್ ದರ ಏರಿಕೆ ಮಾಡಬೇಕಾಗಿರುವುದು ಅನಿವಾರ್ಯ ಎಂದು ಹೇಳಿದರು.
ಇಂದಿನ ಪೆಟ್ರೋಲ್ ದರದಲ್ಲಿ 39 ಪೈಸೆ ಹಾಗೂ ಡೀಸೆಲ್ ದರದಲ್ಲಿ 32ಪೈಸೆ ಏರಿಕೆಯಾಗಿದೆ. ಇದರೊಂದಿಗೆ ಒಂದು ಲೀಟರ್ ಪೆಟ್ರೋಲ್ ಬೆಲೆ 82 ರೂಪಾಯಿ, ಒಂದು ಲೀಟರ್ ಡೀಸೆಲ್ ಬೆಲೆ 75 ರೂಪಾಯಿಗೆ ಏರಿಕೆಯಾಗಿದೆ.