Advertisement

ಸರಕಾರಿ ಬಸ್ಸು ಸೇವೆ, ಹಕ್ಕುಪತ್ರಕ್ಕಾಗಿ ಆಗ್ರಹ; ಉಪ್ಪು ನೀರು ತಡೆಗೋಡೆಗೆ ಬೇಡಿಕೆ

11:42 PM Sep 14, 2019 | Sriram |

ಕೋಟ: ಕೋಡಿ ಗ್ರಾ.ಪಂ.ನ ಗ್ರಾಮಸಭೆಯು ಸೆ. 13ರಂದು ಗ್ರಾ.ಪಂ. ಅಧ್ಯಕ್ಷೆ ರಂಜಿನಿ ಅಧ್ಯಕ್ಷತೆಯಲ್ಲಿ ಇಲ್ಲಿನ ಸ.ಹಿ.ಪ್ರಾ. ಶಾಲೆ ಸಭಾಂಗಣದಲ್ಲಿ ಜರಗಿತು.
ಗ್ರಾ.ಪಂ. ವ್ಯಾಪ್ತಿಯ ಸುಮಾರು 400 ಕುಟುಂಬಗಳಿಗೆ ಹಕ್ಕುಪತ್ರದ ಸಮಸ್ಯೆ ಇದ್ದು ಸರಕಾರದ ಮಟ್ಟದಲ್ಲಿ ಹೋರಾಟ ನಡೆಯುತ್ತಿದೆ. ಸಮಸ್ಯೆಗಳನ್ನು ಬಗೆಹರಿಸಿ ಶೀಘ್ರವಾಗಿ ಎಲ್ಲ ಫಲಾನುಭವಿಗಳಿಗೂ ಹಕ್ಕುಪತ್ರ ಸಿಗುವಂತೆ ವ್ಯವಸ್ಥೆಯಾಗಬೇಕು ಎಂದು ಗ್ರಾಮಸªರು ಮನವಿ ಮಾಡಿದರು.

Advertisement

ಸರಕಾರಿ ಬಸ್ಸು ಸೇವೆಗೆ ಆಗ್ರಹ
ಕೋಟದಿಂದ ಕೋಡಿತಲೆ ತನಕ ಸರಕಾರಿ ಬಸ್ಸು ಸೇವೆ ಆರಂಭವಾಗಬೇಕೆನ್ನುವುದು ಹಲವು ವರ್ಷಗಳ ಬೇಡಿಕೆಯಾಗಿದೆ. ಆದರೆ ಇದುವರೆಗೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ನಮ್ಮ ಮನವಿಯನ್ನು ಆಲಿಸಿ ಬಸ್ಸು ವ್ಯವಸ್ಥೆ ಮಾಡುತ್ತಾರೆ ಎನ್ನುವ ಭರವಸೆ ಇದೆ. ಆದ್ದರಿಂದ ಗ್ರಾಮಸಭೆ ಈ ಕುರಿತು ನಿರ್ಣಯ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಲಕ್ಷ್ಮಣ ಸುವರ್ಣ ಮನವಿ ಮಾಡಿದರು.

ಉಪ್ಪು ನೀರು ತಡೆಗೋಡೆ ರಚನೆಗೆ ಮನವಿ
ಹೊಳೆಯ ಉಪ್ಪು ನೀರು ನುಗ್ಗಿ ನೂರಾರು ಎಕ್ರೆ ಕೃಷಿಭೂಮಿಯಲ್ಲಿ ಬೆಳೆದ ಬೆಳೆ ನಾಶವಾಗುತ್ತಿದೆ. ಆದ್ದರಿಂದ ಇದಕ್ಕೆ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರುವುದಾಗಿ ಭರವಸೆ ಕೇಳಿಬಂತು.

ಕೋಡಿ ಹೊಸ ಬೆಂಗ್ರೆ ಅಂಗನವಾಡಿಗೆ ನೂತನ ಕಟ್ಟಡಕ್ಕೆ ಹಣ ಮಂಜೂರಾಗಿ ಎರಡು ಬಾರಿ ವಾಪಸಾಗಿದೆ. ಈ ಬಾರಿ ಮತ್ತೆ ಅನುದಾನ ಮಂಜೂರಾಗಿದೆ. ಆದರೆ ದಾರಿ ಸಮಸ್ಯೆ ಇದ್ದು ಪಂಚಾಯತ್‌ನವರು ಬಗೆಹರಿಸಿಕೊಡಬೇಕು ಎಂದು ಶಿಶು ಕಲ್ಯಾಣ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದರು. ಪಂ. ವ್ಯಾಪ್ತಿಯಲ್ಲಿ ಸರಕಾರಿ ಜಾಗದಲ್ಲಿ ಎಲ್ಲೆಲ್ಲಿ ರಸ್ತೆ ಅಗತ್ಯವಿದೆ ಎಂದು ಗುರುತಿಸಿ ರಸ್ತೆ ನಿರ್ಮಿಸಬೇಕು. ಈಗಾಗಲೇ ಈ ಸರಕಾರಿ ಜಾಗದ ಹಕ್ಕುಪತ್ರಕ್ಕಾಗಿ ಹೋರಾಟ ನಡೆಯುತ್ತಿದ್ದು ಮುಂದೆ ಹಕ್ಕುಪತ್ರ ದೊರೆತ ಮೇಲೆ ಶಾಶ್ವತವಾಗಿ ರಸ್ತೆ ನಿರ್ಮಿಸಲು ಸಾಧ್ಯವಾಗುವುದಿಲ್ಲ ಎಂದು ಗ್ರಾಮಸ್ಥರಾದ ಆಣ್ಣಪ್ಪ ಕುಂದರ್‌ ತಿಳಿಸಿದರು.

ಪಡಿತರ ಚೀಟಿ ತಿದ್ದುಪಡಿ
ಗ್ರಾ.ಪಂ.ನಲ್ಲೇ ಮಾಡಿ
ಪಡಿತರ ಚೀಟಿಯಲ್ಲಿನ ಹೆಚ್ಚಿನ ತಿದ್ದುಪಡಿಗಾಗಿ ತಾಲೂಕು ಕಚೇರಿಗೆ ತೆರಳಬೇಕಿದೆ. ಆದರೆ ಅಲ್ಲಿ ಸಾಕಷ್ಟು ಸಮಸ್ಯೆಗಳಿರುವುದರಿಂದ ಅಲೆದಾಡಬೇಕಾಗುತ್ತದೆ. ಆದ್ದರಿಂದ ಎಲ್ಲ ತಿದ್ದುಪಡಿಯನ್ನು ಗ್ರಾ.ಪಂ. ಕಚೇರಿಯಲ್ಲೇ ಮಾಡುವಂತೆ ವ್ಯವಸ್ಥೆಗೊಳಿಸಬೇಕು ಮತ್ತು ಕ್ಯಾಂಪ್‌ಗ್ಳನ್ನು ಮಾಡಬೇಕು ಎಂಬ ಸಲಹೆ ನೀಡಿದರು. ಜತೆಗೆ ರಸ್ತೆ ಸಮಸ್ಯೆ, ದಾರಿದೀಪದ ಸಮಸ್ಯೆ ಬಗ್ಗೆ ಸಭೆಯಲ್ಲಿ ವಿಷಯ ಪ್ರಸ್ತಾವವಾಯಿತು.

Advertisement

ಕೆಲವು ಸಮಸ್ಯೆಗಳ ಕುರಿತು ಚರ್ಚಿಸಲು ಸಂಬಂಧಪಟ್ಟ ಇಲಾಖಾಧಿಕಾರಿಗಳು ಉಪಸ್ಥಿತರಿ ರುವಂತೆ ಹಲವು ದಿನಗಳ ಹಿಂದೆ ಮನವಿ ಮಾಡಲಾಗಿದೆ. ಆದರೂ ಅಧಿಕಾರಿಗಳು ಗೈರಾಗಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.ಅಂತವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಮೇಲಧಿಕಾರಿಗಳಲ್ಲಿ ಮನವಿ ಮಾಡುವಂತೆ ಸೂಚಿಸಿದರು.

ಗ್ರಾಮಸ್ಥರ ಪರವಾಗಿ ಶಂಕರ ಬಂಗೇರ, ಜಯರಾಮ್‌ ರೋಡ್ರಿಗಸ್‌, ರೆಮಾಂಡ್‌, ಮಹಾಬಲ ಕುಂದರ್‌, ವಿನೋದ ಚರ್ಚೆ ನಡೆಸಿದರು.

ಪಶು ವೈದ್ಯ ಇಲಾಖೆಯ ಅಧಿಕಾರಿ ಡಾ| ಅರುಣ್‌ ಕುಮಾರ್‌ ಶೆಟ್ಟಿ ಸಭೆಯ ಸಮನ್ವಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪಿಡಿಒ ಬೆನ್ನಿ ಕ್ವಾಡ್ರಸ್‌ ನಿರೂಪಿಸಿದರು. ಉಪಾಧ್ಯಕ್ಷ ಪ್ರಭಾಕರ ಮೆಂಡನ್‌, ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೇಶಕ ಕೃಷ್ಣ ಹಾಗೂ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು. ಇಲಾಖಾಧಿಕಾರಿಗಳು ಇಲಾಖಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಆಯುಷ್ಮಾನ್‌ ಯೋಜನೆ ಕುರಿತು ಪ್ರಸ್ತಾವ
ಆಯುಷ್ಮಾನ್‌ ಯೋಜನೆಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಸಿಗದ ಸೌಲಭ್ಯಗಳನ್ನು ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿದೆ. ಇದರಿಂದಾಗಿ ಕಿಡ್ನಿ ಮುಂತಾದ ಸಮಸ್ಯೆಗಳಿದ್ದಾಗ ರೋಗಿಯು ಗಂಭೀರಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಎದುರಾದರು ಯೋಜನೆಯಿಂದ ಯಾವುದೇ ಪ್ರಯೋಜನ ಸಿಗುತ್ತಿಲ್ಲ. ಹೀಗಾಗಿ ಇದೊಂದು ವಿಫಲ ಯೋಜನೆಯಂತಾಗಿದೆ ಎಂದು ನೊಂದ ಫಲಾನುಭವಿಯೋರ್ವರು ವಿವರಿಸಿದರು ಹಾಗೂ ಎಲ್ಲಾ ಸಮಸ್ಯೆಗಳಿಗೂ ಯೋಜನೆಯಡಿ ಪ್ರಯೋಜನ ಸಿಗಬೇಕು ಎಂದು ಮನವಿ ಮಾಡಿದರು.

ಆರೋಗ್ಯ ಕೇಂದ್ರದಲ್ಲಿ ಸೂಕ್ತ ಸೌಲಭ್ಯಕ್ಕೆ ಆಗ್ರಹ ಕೋಡಿ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು ಹಾಗೂ ಇಲ್ಲಿ ಖಾಯಂ ವೈದ್ಯರು, ಎಲ್ಲಾ ಔಷಧಗಳು ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಬೇಡಿಕೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next