ತುರುವೇಕೆರೆ: ಕೊಬ್ಬರಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ನೆರವಿಗೆ ಸರ್ಕಾರ ಧಾವಿಸಲು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಭರವಸೆ ನೀಡಿದರು. ಬೆಂಗಳೂರಿನಿಂದ ಮೇಟಿಕುರ್ಕೆಗೆ ತೆರಳುವ ಮಾರ್ಗ ಮಧ್ಯೆ ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಿ ಮಾತನಾಡಿದ ಅವರು, ಜಿಲ್ಲೆಯ ಪ್ರಮುಖ ಬೆಳೆಯಾದ ತೆಂಗು, ಕೊಬ್ಬರಿ ಬೆಲೆ ಕುಸಿತಗೊಂಡು ಈ ಭಾಗದ ರೈತರು ಸಂಕಷ್ಟದಲ್ಲಿದ್ದಾರೆ. ಕೊಬ್ಬರಿಗೆ ಬೆಂಬಲ ಬೆಲೆ ಹಾಗೂ ನಫೆಡ್ ತೆರೆಯುವ ಬಗ್ಗೆ ಜಿಲ್ಲಾ ಉಸ್ತುವಾರಿ ಮಂತ್ರಿ ಜೆ.ಸಿ.ಮಾಧು ಸ್ವಾಮಿ ಜೊತೆ ಚರ್ಚಿಸಿ ಮುಖ್ಯಮಂತ್ರಿ ಬಳಿ ಮಾತನಾಡಿ ಸೂಕ್ತ ತೀರ್ಮಾನ ತೆಗೆದು ಕೊಳ್ಳಲಾಗುವುದು ಎಂದರು.
ಸವಲತ್ತು ಬಗ್ಗೆ ತಿಳಿಸಿ: ಕೃಷಿ ಅಧಿಕಾರಿಗಳು ಕಚೇರಿಯಲ್ಲಿನ ಕೆಲಸ ಬಿಟ್ಟು ಗ್ರಾಮೀಣ ಪ್ರದೇಶಕ್ಕೆ ತೆರಳಿ ಸರ್ಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ನೀಡಬೇಕು. ಕೃಷಿ ಅಧಿಕಾರಿಗಳು ಗ್ರಾಮೀಣ ಭಾಗಕ್ಕೆ ತೆರಳುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಆದ್ದರಿಂದ ಸದ್ಯದಲ್ಲಿಯೇ ಎಲ್ಲ ಕೃಷಿ ಇಲಾಖೆ ಅಧಿಕಾರಿ ಗಳ ಸಭೆ ನೆಡೆಸಿ ಆದೇಶ ಮಾಡಲಾಗುವುದು ಎಂದರು. ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ನೀಡುವ ಯೋಜನೆ ಸದ್ಯಕಿಲ್ಲ. ಈ ಮುಂಗಾರಿನ ಹಂಗಾಮಿಗೆ ರಿಯಾಯಿತಿ ದರದಲ್ಲಿ ಜೋಳ, ರಾಗಿ ನೀಡಲಾಗುತ್ತಿದೆ. ಮುಂಗಾರಿಗೆ ಬೀಜ, ಗೊಬ್ಬರ ಸೇರಿದಂತೆ ಯಾವುದೇ ಕೊರತೆ ಇಲ್ಲ ಎಂದು ತಿಳಿಸಿದರು.
ಮಿಡತೆ ಭಯ ಬೇಡ: ಮಿಡತೆ ಬಗ್ಗೆ ಆತಂಕ ಪಡುವುದು ಬೇಡ. ದಕ್ಷಿಣ ಆಫ್ರಿಕಾದಿಂದ ಹೊರಟು ಪಾಕಿಸ್ತಾನ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯ ಮೂಲಕ ರಾಜ್ಯಕ್ಕೆ ಆಗಮಿಸಿದ್ದ ಮಿಡತೆಗಳಿಂದ ಕರ್ನಾಟಕಕ್ಕೆ ತೊಂದರೆ ಇಲ್ಲ. ರಾಜ್ಯದ ಗುಲ್ಬರ್ಗ, ಯಾದಗಿರಿ ಭಾಗಕ್ಕೆ ಆಗಮಿಸುವ ಮುನ್ಸೂಚನೆ ಇತ್ತು. ನಾವು ಸಹ ಸಕಲ ಸಿದಟಛಿತೆ ಮಾಡಿಕೊಳ್ಳಲಾಗಿತ್ತು. ಗಾಳಿಯ ಮೂಲಕ ಮಿಡತೆಗಳು ಬರುವುದರಿಂದ ಗಾಳಿ ಈಶಾನ್ಯ ದಿಕ್ಕಿಗೆ ತಿರುಗಿದ್ದರಿಂದ ಅದೃಷ್ಟವಶಾತ್ ನಮ್ಮ ರೈತರಿಗೆ ಯಾವುದೇ ಭಯವಿಲ್ಲ ಎಂದು ತಿಳಿಸಿದರು.
ಸರ್ಕಾರ ಸುಭದ್ರವಾಗಿದೆ: ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ. ಇರುವುದು ಕಾಂಗ್ರೆಸ್, ಜೆಡಿಎಸ್‌ನಲ್ಲಿ ಮಾತ್ರ. ಲಾಕ್ ಡೌನ್ ಹಿನ್ನೆಲೆ ಹೋಟೆಲ್‌ಗಳಿಲ್ಲದ್ದರಿಂದ ಬೆಂಗಳೂರಿನಲ್ಲಿ ಶಾಸಕರು ಸೇರಲು ಆಗುತ್ತಿಲ. ಯಾರೋ ಒಬ್ಬ ಶಾಸಕರ ಮನೆಯಲ್ಲಿ ಊಟಕ್ಕೆ ಸೇರಿದರೆ ಹೊರತು ಸಭೆ ಯಾವುದೇ ಗುಂಪುಗಾರಿಕೆ ಮಾಡಲಿಕ್ಕಲ್ಲ. ಸರ್ಕಾರ ಸುಭದ್ರವಾಗಿದೆ. ನಾವು ಬಂದ ಮೇಲೆ ಇನ್ನು ಬಲಿಷ್ಠವಾಗಿದೆ. ಸಣ್ಣ ಪುಟ್ಟ ಗೊಂದಲಗಳಿದ್ದರೆ ನಿವಾರಣೆಯಾಗುತ್ತದೆ ಎಂದರು. ಬಿಜೆಪಿ ತಾಲೂಕು ಅಧ್ಯಕ್ಷ ದುಂಡಾರೇಣಕಪ್ಪ ನೇತೃತ್ವದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ನೀಡಿ ಇಲ್ಲವೇ ನಫೆಡ್ ಕೇಂದ್ರ ಪ್ರಾರಂಭಿಸಿ ಎಂದು ಸಚಿವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಬಿಜೆಪಿ ವತಿಯಿಂದ ಹಸಿರು ಶಾಲು ಹೊದಿಸಿ ಸನ್ಮಾನಿಸಲಾಯಿತು. ಎಪಿಎಂಸಿ ಸದಸ್ಯ ವಿ.ಟಿ.ವೆಂಕಟ ರಾಮಯ್ಯ, ಪಟ್ಟಣ ಪಂಚಾಯಿತಿ ಸದಸ್ಯರಾದ ಚಿದಾನಂದ್, ಅಂಜನ್‌ಕುಮಾರ್, ಪ್ರಭಾಕರ್, ಮುಖಂಡರಾದ ಅರಳಿಕೆರೆ ಶಿವಯ್ಯ, ರಾಮಣ್ಣ, ವಿ.ಬಿ.ಸುರೇಶ್, ಎಡಗಿಹಳ್ಳಿ ವಿಶ್ವನಾಥ್, ಪ್ರಕಾಶ್, ಮಂಜಣ್ಣ, ಸೋಮು, ಯೋಗಾನಂದ್, ಶಿವಬಸವಯ್ಯ, ದಿನೇಶ್, ಜನಾರ್ದನ್, ರವಿ, ಶಂಕರಯ್ಯ, ವಸಂತಕುಮಾರ್, ಸಾಗರ್ ಇದ್ದರು.