Advertisement
ಮುಖ್ಯಮಂತ್ರಿ ಸಹಾಯಧನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 22 ಸಾವಿರಕ್ಕೂ ಮಿಕ್ಕಿ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಅರ್ಜಿ ಸಲ್ಲಿಸಿದ್ದರು. ಜಿಲ್ಲೆಯಲ್ಲಿ ಸುಮಾರು 18 ಸಾವಿರ ಮಂದಿ ಆಟೋ ಚಾಲಕರಿದ್ದು, ಮಂಗಳೂರು ನಗರದಲ್ಲಿಯೇ ಸುಮಾರು 9 ಸಾವಿರ ಮಂದಿ ಚಾಲಕರಿದ್ದಾರೆ. ಅಲ್ಲದೆ, ಜಿಲ್ಲೆಯಲ್ಲಿ 5 ಸಾವಿರ ಮಂದಿ ಟ್ಯಾಕ್ಸಿ ಚಾಲಕರು ಫಲಾನುಭವಿಗಳಿದ್ದಾರೆ.ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಸೇವಾ ಸಿಂಧೂ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಈ ಸಮಯದಲ್ಲಿ ಅರ್ಜಿದಾರರಿಗೆ ಕೆಲವೊಂದು ಗೊಂದಲ ಉಂಟಾಗಿತ್ತು. ಕೆಲವು ಬಾರಿ ಪೋರ್ಟಲ್ ಸರ್ವರ್ ಸಮಸ್ಯೆ ಉಂಟಾದರೆ, ಆಧಾರ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸನ್ಸ್‌ನಲ್ಲಿ ಅರ್ಜಿದಾರರ ಹೆಸರಿನ ಪದ ಬೇರೆ ಬೇರೆ ಇದ್ದರೆ ಆ ಅರ್ಜಿ ಸ್ವೀಕೃತಗೊಳ್ಳುತ್ತಿರಲಿಲ್ಲ. ಇನ್ನು, ಮಾಹಿತಿಯೆಲ್ಲ ತುಂಬಿದ ಬಳಿಕ ಕೊನೆಗೆ ಸಲ್ಲಿಕೆ ಮಾಡುವ ವೇಳೆ ವೆಬ್‌ಸೈಟ್‌ನಲ್ಲಿ ಎರರ್ ಎಂದು ತೋರಿಸುತ್ತಿತ್ತು. ಈ ಕಾರಣಕ್ಕೆ ಕೆಲವು ಆಟೋ ಮತ್ತು ಟ್ಯಾಕ್ಸಿ ಚಾಲಕರು ಸಹಾಯಧನ ಪಡೆಯಲು ವಂಚಿತರಾಗಿದ್ದರು.
ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರು ಈ ಬಗ್ಗೆ “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ “ದಕ್ಷಿಣ ಕನ್ನಡ ಜಿಲ್ಲೆಯ ಶೇ.90ರಷ್ಟು ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಸರಕಾರದ ಸಹಾಯಧನ ಸಿಕ್ಕಿಲ್ಲ. ಈ ಬಗ್ಗೆ ಈಗಾಗಲೇ ಸರಕಾರದ ಗಮನಕ್ಕೆ ತಂದಿದ್ದೇನೆ. ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಸರಕಾರ ಹೇಳುತ್ತಿದ್ದು, ಕೂಡಲೇ ಫಲಾನುಭವಿಗಳಿಗೆ ಹಣ ತಲುಪಬೇಕು ಎಂದು ತಿಳಿಸಿದ್ದಾರೆ.