ಬೆಂಗಳೂರು: ಕಾರ್, ಬೈಕ್‌ಗಳಲ್ಲಿ ಬಂದು ಕದ್ದು ಮುಚ್ಚಿ ರಸ್ತೆ ಬದಿ, ಖಾಲಿ ನಿವೇಶನ, ಚರಂಡಿಗಳಲ್ಲಿ ಕಸ ಎಸೆಯುವವರಿಗೆ ಇನ್ನು ಮುಂದೆ ಶಿಕ್ಷೆ ತಪ್ಪಿದ್ದಲ್ಲ. ಮಾರ್ಷಲ್ಗಳ ನೇಮಕಕ್ಕೆ ಸರ್ಕಾರ ಅನುಮೋದನೆ ನೀಡಿದ್ದು, ಕಸ ವಿಂಗಡಿಸದ ನಾಗರಿಕರೂ ದಂಡ ತೆರಬೇಕಾಗುತ್ತದೆ ಎಚ್ಚರ…
ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರು ಹಾಗೂ ತ್ಯಾಜ್ಯ ವಿಂಗಡಣೆಗೆ ಮುಂದಾಗದ ನಾಗರಿಕರಿಗೆ ದಂಡ ವಿಧಿಸಲು ಮಾರ್ಷಲ್ಗಳ ನೇಮಕ ಕುರಿತಂತೆ ಪಾಲಿಕೆಯಿಂದ ಕಳುಹಿಸಿದ್ದ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿ ಆದೇಶ ಹೊರಡಿಸಿದೆ. ಹೀಗಾಗಿ ಇನ್ನು ಮುಂದೆ ಎಲ್ಲೆಂದರಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದರೆ ದಂಡ ತೆರಬೇಕಾಗುತ್ತದೆ.
ಮಧ್ಯರಾತ್ರಿ ಹಾಗೂ ಬೆಳಗಿನ ಜಾವ ನಗರದ ಬಹುತೇಕ ಭಾಗಗಳಲ್ಲಿ ಕಸ ತುಂಬಿದ ಕವರ್‌ಗಳನ್ನು ಕಾರು, ಬೈಕ್‌ಗಳಲ್ಲಿ ಬರುವ ಸಾರ್ವಜನಿಕರು ಕಾಲುವೆ, ಖಾಲಿ ನಿವೇಶನ ಮತ್ತು ಚರಂಡಿಗಳಲ್ಲಿ ಬಿಸಾಡಿ ಹೋಗುವುದು ಸಾಮಾನ್ಯವಾಗಿದೆ. ಜತೆಗೆ ಮಾಂಸದ ಅಂಗಡಿಗಳು, ವಾಣಿಜ್ಯ ಮಳಿಗೆಗಳು ಸಹ ವ್ಯಾಪಾರ – ವಹಿವಾಟು ಮುಗಿಸಿ ರಾತ್ರಿ ವೇಳೆ ತ್ಯಾಜ್ಯ ತುಂಬಿದ ಚೀಲಗಳನ್ನು ರಸ್ತೆಬದಿ ಎಸೆದು ಹೋಗುತ್ತಿದ್ದಾರೆ. ಇದರಿಂದ ರಾತ್ರಿ ಬೆಳಗಾಗುವುದರೊಳಗೆ ಕೆಲವೆಡೆ ರಾಶಿಗಟ್ಟಲೇ ತ್ಯಾಜ್ಯ ಬಿದ್ದಿರುತ್ತದೆ.
ಇಂತಹ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಪಾಲಿಕೆಯಿಂದ ಮಾರ್ಷಲ್ಗಳನ್ನು ನೇಮಿಸಿಕೊಳ್ಳ ಲಾಗುತ್ತಿದೆ. ಅದರಂತೆ ತ್ಯಾಜ್ಯ ಎಸೆಯುವವರು ಹಾಗೂ ವಿಂಗಡಣೆ ಮಾಡದವರಿಗೆ ದಂಡ ವಿಧಿಸುವ ಅಧಿಕಾರವನ್ನು ಮಾರ್ಷಲ್ಗಳಿಗೆ ನೀಡಲಾಗುತ್ತದೆ. ಜತೆಗೆ ಟ್ರಾಫಿಕ್ ಪೊಲೀಸ್ ಮಾದರಿಯಲ್ಲಿ ಸ್ಥಳದಲ್ಲಿಯೇ ದಂಡ ಹಾಕುವ ಎಲೆಕ್ಟ್ರಾನಿಕ್ ಯಂತ್ರವನ್ನೂ ಸಹ ನೀಡಲಾಗುತ್ತದೆ.
ವಾರ್ಡ್‌ಗೆ ಒಬ್ಬರು ಮಾರ್ಷಲ್: ಬಿಬಿಎಂಪಿ ವತಿಯಿಂದ ಪ್ರತಿಯೊಂದು ವಾರ್ಡ್‌ಗೆ ಒಬ್ಬರು ಮಾರ್ಷಲ್ಗಳಂತೆ 198 ಮಂದಿ ಹಾಗೂ ಹೆಚ್ಚುವರಿಯಾಗಿ 35 ಮಾರ್ಷಲ್ಗಳನ್ನು ನೇರವಾಗಿ ಸೈನಿಕ್ ಕಲ್ಯಾಣ ಇಲಾಖೆಯಿಂದ ನೇಮಿಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪಾಲಿಕೆಯ ಪ್ರಸ್ತಾವನೆಗೆ ಸರ್ಕಾರ ಅನುಮತಿ ಕೊಟ್ಟಿದ್ದು, ಅಧಿಕೃತ ಆದೇಶವಷ್ಟೇ ಬಾಕಿಯಿದೆ. ಆದೇಶದ ಬಂದ ಕೂಡಲೇ ಮಾರ್ಷಲ್ಗಳನ್ನು ನೇಮಿಸಿ ಕೊಂಡು ತರಬೇತಿ ನೀಡಲು ಪಾಲಿಕೆ ಸಜ್ಜಾಗಿದೆ.
ಆ್ಯಪ್ ಆಧಾರಿತ ಕಣ್ಗಾವಲು ವ್ಯವಸ್ಥೆ: ಪಾಲಿಕೆಯಿಂದ ನೇಮಿಸಿಕೊಳ್ಳಲು ಉದ್ದೇಶಿಸಿರುವ ಮಾರ್ಷಲ್ಗಳಿಗಾಗಿ ವಿಶೇಷ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಅದರಂತೆ ಮಾರ್ಷಲ್ಗಳು ಕಸ ಎಸೆಯುವವರನ್ನು ಹಿಡಿದಾಗ ಅವರ ಭಾವಚಿತ್ರ, ವಾಹನಚಿತ್ರವನ್ನು ಫೋಟೋ ತೆಗೆದು ಅಪ್‌ಲೋಡ್ ಮಾಡಬೇಕಾಗುತ್ತದೆ. ಇದರೊಂದಿಗೆ ಸಾರ್ವಜನಿಕರು ಕಸ ಸುರಿಯುತ್ತಿರುವ ಬಗ್ಗೆ ದೂರು ನೀಡಿದಾಗ, ಕೂಡಲೇ ಆ ವಾರ್ಡ್‌ನ ಮಾರ್ಷಲ್ಗೆ ಸಂದೇಶ ಹೋಗುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದರು.
ನೇಮಕಾತಿಗೆ 4 ಜಿ ಅನುಮತಿ: ಕ್ಲೀನ್ ಅಪ್ ಮಾರ್ಷಲ್, ಜೂನಿಯರ್ ಕಮಿಷನ್ ಅಧಿಕಾರಿ ಹಾಗೂ ಉಪಮುಖ್ಯ ಅಧಿಕಾರಿಗಳನ್ನು ರಾಜ್ಯ ಸೈನಿಕ ಕಲ್ಯಾಣ ಇಲಾಖೆ ಹಾಗೂ ರೀ ಸೆಟಲ್ಮೆಂಟ್ ಇಲಾಖೆ ಮೂಲಕ ನೇರ ನೇಮಕಾತಿಗೆ 4 ಜಿ ವಿನಾಯಿತಿ ನೀಡಲಾಗಿದೆ. ಇದರಿಂದ ಟೆಂಡರ್ ಆಹ್ವಾನ ನೀಡದೆ ಸೈನಿಕ ಕಲ್ಯಾಣ ಇಲಾಖೆ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಬಹುದಾಗಿದೆ. ಎರಡು ವರ್ಷದ ಅವಧಿಗೆ ನಿವೃತ್ತ ಸೇನಾ ಸಿಬ್ಬಂದಿಯನ್ನು ಸೇವೆಗೆ ಪಾಲಿಕೆ ಪಡೆದುಕೊಳ್ಳಲಿದೆ.