Advertisement
ಇನ್ನು ಹಿರಿಯ ಚಿತ್ರ ಸಾಹಿತಿ ದೊಡ್ಡರಂಗೇ ಗೌಡ, ಬಿಜಾಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಸಹೋದರರಾದ ರುದ್ರಪಟ್ಟಣಂ ನಾರಾ ಯಣ ಸ್ವಾಮಿ ತಾರಾನಾಥನ್ ಮತ್ತು ತ್ಯಾಗರಾಜನ್, ಸಮಾಜ ಸೇವಕಿಯರಾದ ಡಾ| ಸೂಲಗಿತ್ತಿ ನರಸಮ್ಮ, ಸೀತಮ್ಮ ಜೋಡಟ್ಟಿ, ಬಾಗಲಕೋಟೆಯ ಸೂಫಿ ಸಾಧಕ, ಕನ್ನಡ ಕಬೀರರೆಂದು ಖ್ಯಾತರಾದ ಇಬ್ರಾಹಿಂ ಸುತಾರ್, ಸಂಗೀತ ವಿದ್ವಾಂಸ ಆರ್. ಸತ್ಯನಾರಾಯಣ ಅವರಿಗೆ ಪದ್ಮಶ್ರೀ ಗೌರವ ದಕ್ಕಿದೆ.
ಗುರುವಾರ ರಾತ್ರಿ ಕೇಂದ್ರ ಗೃಹ ಸಚಿವಾಲಯ ಒಟ್ಟು 85 ಮಂದಿ ಸಾಧಕರಿಗೆ ಪ್ರಶಸ್ತಿ ಘೋಷಣೆ ಮಾಡಿದೆ. ವಿಶೇಷವೆಂದರೆ, ಈ ಬಾರಿಯೂ ಸರಕಾರ ‘ಎಲೆ ಮರೆಯ ಕಾಯಿಯಂಥ ಸಾಧಕ’ರನ್ನೇ ಗುರುತಿಸಿ ಪ್ರಶಸ್ತಿ ನೀಡಿದೆ. ಇವರಲ್ಲದೆ, ವಿಜ್ಞಾನಿ ಹಾಗೂ ಬೊಂಬೆ ತಯಾರಕ ಅರವಿಂದ್ ಗುಪ್ತಾ, ಚಿಕಿತ್ಸಕಿ ಲಕ್ಷ್ಮೀ ಕುಟ್ಟಿ, ಗೋಂದ್ ಕಲಾವಿದ ಭಜ್ಜು ಶ್ಯಾಮ್ ಹಾಗೂ 98ರ ವಯಸ್ಸಿನ ಸಾಮಾಜಿಕ ಕಾರ್ಯಕರ್ತ ಸುಧಾಂಶು ಬಿಸ್ವಾಸ್, ಬೌದ್ಧ ಗುರು ಯಶಿ ದೊಧೇನ್ ಹಾಗೂ ‘ಪ್ಲಾಸ್ಟಿಕ್ ರಸ್ತೆಯ ಅನ್ವೇಷಕ’ ಎಂ.ಆರ್. ರಾಜಗೋಪಾಲ್ ಅವರಿಗೂ ಈ ಬಾರಿಯ ಪದ್ಮ ಪ್ರಶಸ್ತಿಗಳು ಲಭಿಸಿವೆ. ಈ ಬಾರಿಯ ಪದ್ಮ ಪ್ರಶಸ್ತಿಗಳಿಗೆ ಸುಮಾರು 15,700 ಜನರು ಅರ್ಜಿ ಹಾಕಿದ್ದು, ಇವರಲ್ಲಿ 73 ಜನರಿಗೆ ಪದ್ಮಶ್ರೀ, ಒಂಭತ್ತು ಸಾಧಕರಿಗೆ ಪದ್ಮಭೂಷಣ ಹಾಗೂ ಮೂವರಿಗೆ ಪದ್ಮವಿಭೂಷಣ ಪ್ರಶಸ್ತಿಗಳು ಲಭಿಸಿವೆ. ಪ್ರಶಸ್ತಿ ಸಂದ ಬಗ್ಗೆ ಉದಯವಾಣಿ ಜತೆ ಸಂತಸ ಹಂಚಿಕೊಂಡಿರುವ ರುದ್ರಪಟ್ಟಣಂ ಸೋದರರು, “ಕಳೆದೈದು ದಶಕಗಳ ನಮ್ಮ ಸೇವೆಗೆ ಸಂದ ಶ್ರೇಷ್ಠ ಪ್ರಶಸ್ತಿ ಇದಾಗಿದೆ. ಪ್ರಶಸ್ತಿಯಿಂದ ನಮ್ಮ ಜವಾಬ್ದಾರಿ ಹೆಚ್ಚಿದೆ’ ಎಂದಿದ್ದಾರೆ. ಕೇಂದ್ರ ಸರಕಾರ ತಡವಾಗಿಯಾದರೂ ನನ್ನನ್ನು ಗುರುತಿಸಿರುವುದು ಕನ್ನಡಕ್ಕೆ ಸಂದ ಗೌರವ. ಈ ಪ್ರಶಸ್ತಿ ಹಳ್ಳಿ ಹುಡುಗನಿಗೆ ದಿಲ್ಲಿ ಕಿರೀಟ ತೊಡಿಸಿದಂತಾಗಿದೆ ಎಂದು ದೊಡ್ಡರಂಗೇಗೌಡ ಹೇಳಿದ್ದಾರೆ. ಈ ಮಧ್ಯೆ, ಈ ಬಾರಿಯ ಪ್ರಶಸ್ತಿ ಪಟ್ಟಿಯಲ್ಲಿ ಸಿನಿಮಾ ಮಂದಿ ಹೆಚ್ಚು ಕಡಿಮೆ ಕಾಣೆಯಾಗಿದ್ದಾರೆ.
Related Articles
ಈ ಬಾರಿಯೂ ಕೇಂದ್ರ ಸರಕಾರ ಹೆಚ್ಚು ಪ್ರಸಿದ್ಧಿಯಾದವರಿಗೆ ಪ್ರಶಸ್ತಿ ನೀಡಲು ಹೋಗದೇ, ಎಲ್ಲೋ ದೂರದಲ್ಲಿ ತಮ್ಮ ಪಾಡಿಗಿರುವಂಥವರನ್ನೇ ಹುಡುಕಿ ಗೌರವಿಸಿದೆ. ಇದರಲ್ಲಿ ಕರ್ನಾಟಕದ ಸೂಲಗಿತ್ತಿ ನರಸಮ್ಮ, ಸೀತಮ್ಮ ಜೋಡಟ್ಟಿಯವರೇ ಉದಾಹರಣೆ.
Advertisement
– 16 ಅನಿವಾಸಿ ಭಾರತೀಯರು, ಮೂವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ.
– 2009ರಲ್ಲೇ ಪದ್ಮಭೂಷಣಕ್ಕೆ ಭಾಜನರಾಗಿದ್ದ ಇಳಯರಾಜ ಅವರಿಗೆ, ಈ ಬಾರಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.