Advertisement

ತಕ್ಕ ಉತ್ತರ: ಸೇನೆಗೆ ಸ್ವಾತಂತ್ರ್ಯ

12:59 AM Jun 22, 2020 | Sriram |

ಹೊಸದಿಲ್ಲಿ: ಚೀನದ ಜತೆಗಿನ 3,500 ಕಿಲೋಮೀಟರ್‌ ಉದ್ದದ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಚೀನದ ಸೇನೆಯು (ಪಿಎಲ್‌ಎ) ಇನ್ನು ಮುಂದೆ ಯಾವುದೇ ದುಸ್ಸಾಹಸಕ್ಕೆ ಕೈಯಿಕ್ಕಿದರೆ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ಸಶಸ್ತ್ರ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯವನ್ನು ಕೇಂದ್ರ ಸರಕಾರ ನೀಡಿದೆ. ಅಲ್ಲದೆ, ಸನ್ನಿವೇಶ ಆಧರಿಸಿ ಶಸ್ತ್ರಾಸ್ತ್ರಗಳನ್ನು ಉಪಯೋಗಿಸುವುದಕ್ಕೆ ಕೂಡ ಅನುಮತಿ ನೀಡಲಾಗಿದೆ.

Advertisement

ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರು ರವಿವಾರ ದಿಲ್ಲಿಯಲ್ಲಿ ಮೂರೂ ಸೇನಾ ಪಡೆಗಳ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಹಾಗೂ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆ ಮುಖ್ಯಸ್ಥರ ಜತೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಚೀನದ ಪ್ರಚೋದನೆಗೆ ತಕ್ಕ ಪ್ರತ್ಯುತ್ತರವನ್ನು ನೀಡಲು ಸೇನಾಪಡೆಗಳಿಗೆ ಸ್ವಾತಂತ್ರ್ಯ ಕೊಡಲಾಗಿದೆ ಎಂದು ಪ್ರಧಾನಿ ಮೋದಿ ಶುಕ್ರವಾರದ ಸರ್ವಪಕ್ಷಗಳ ಸಭೆಯಲ್ಲಿ ಹೇಳಿದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.
ರಾಜನಾಥ್‌ ಸಿಂಗ್‌ ನಡೆಸಿದ ಸಭೆಯಲ್ಲಿ ಭೂಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ, ನೌಕಾಪಡೆ ಮುಖ್ಯಸ್ಥ ಕರಮ್‌ಬೀರ್‌ ಸಿಂಗ್‌ ಮತ್ತು ಏರ್‌ ಚೀಫ್ ಮಾರ್ಷಲ್‌ ಆರ್‌.ಕೆ.ಎಸ್‌. ಭದೌರಿಯಾ ಪಾಲ್ಗೊಂಡಿದ್ದರು.

ಸೇನೆಗೆ ಸ್ವಾತಂತ್ರ್ಯ
ಗಾಲ್ವಾನ್‌ ಕಣಿವೆಯಷ್ಟೇ ಅಲ್ಲದೆ ಚೀನದೊಂದಿಗೆ ಹಂಚಿಕೊಂಡಿರುವ 3,500 ಕಿ.ಮೀ. ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಭಾರತ ಸೇನೆಯು “ತಕ್ಕ’ ಉತ್ತರವನ್ನೇ ನೀಡ ಬಹುದಾಗಿದೆ. ಲಡಾಖ್‌ ಬಳಿಯ ಗಾಲ್ವಾನ್‌ ಘಟನೆ ನಡೆದ ಬಳಿಕ ಭಾರತೀಯ ಸೇನೆಯು ಆ ಪ್ರದೇಶದಲ್ಲಿ ಹೆಚ್ಚುವರಿ ಯುದ್ಧ ವಿಮಾನಗಳು, ಸೇನಾ ಪಡೆಗಳನ್ನು ರವಾನಿಸಿದೆ. ಲೇಹ್‌ ಮತ್ತು ಶ್ರೀನಗರದಲ್ಲಿರುವ ವಾಯು ನೆಲೆಗಳಿಗೆ ಸುಖೋಯ್‌ 30 ಎಂಕೆಐ, ಜಾಗ್ವಾರ್‌, ಮಿರಾಜ್‌ 2000 ಯುದ್ಧ ವಿಮಾನಗಳನ್ನು ರವಾನಿಸಿದೆ. ಭದ್ರತೆಗೆ ಧಕ್ಕೆ ಒದಗುವ ಸಂದರ್ಭಗಳನ್ನು ಎದುರಿಸಲು ನಾವು ಸರ್ವ ಸನ್ನದ್ಧರಾಗಿದ್ದೇವೆ ಎಂದು ವಾಯುಪಡೆ ಮುಖ್ಯಸ್ಥ ಭದೌರಿಯಾ ತಿಳಿಸಿದ್ದಾರೆ.

ಶಸ್ತ್ರಾಸ್ತ್ರ ಖರೀದಿಗೆ 500 ಕೋ.ರೂ.
ಅಗತ್ಯ ಸನ್ನಿವೇಶ ಎದುರಿಸುವ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಸರಕಾರವು ನಿರ್ಣಾಯಕ ಶಸ್ತ್ರಾಸ್ತ್ರ ಮತ್ತು ಸೇನಾ ಸಾಮಗ್ರಿಗಳನ್ನು ಖರೀದಿಸಲು ಸೇನಾಪಡೆಗಳಿಗೆ ಆರ್ಥಿಕ ಅಧಿಕಾರವನ್ನೂ ಒದಗಿಸಿದೆ.

ಪೂರ್ಣ ಪ್ರಮಾಣದ ಯುದ್ಧ ಅಥವಾ ಸೀಮಿತ ಸಂಘರ್ಷ ಸ್ಥಿತಿಯನ್ನು ಎದುರಿಸುವುದಕ್ಕಾಗಿ ಸೇನಾಪಡೆ ಗಳು 500 ಕೋ.ರೂ.ಗಳ ವರೆಗಿನ ಖರೀದಿಯನ್ನು ನಡೆಸಬಹುದಾಗಿದೆ. ಇದರಡಿ ಭೂ ಸೇನೆ, ವಾಯುಪಡೆ ಮತ್ತು ನೌಕಾ ಪಡೆಗಳು ಸರಕಾರದ ಅನುಮತಿಗೆ ಕಾಯದೆ “ಎಮರ್ಜೆನ್ಸಿ ರಿಕ್ವಾಯರ್‌ವೆುಂಟ್‌ ಪ್ರೊಸೀಜರ್‌’ ಅಡಿಯಲ್ಲಿ ನೇರವಾಗಿ 500 ಕೋಟಿ ರೂ. ವರೆಗಿನ ಮೌಲ್ಯದ ಅಗತ್ಯ ಶಸ್ತ್ರಾಸ್ತ್ರ ಅಥವಾ ಯುದ್ಧ ಪರಿಕರಗಳನ್ನು ಕೊಳ್ಳಬಹುದು.

Advertisement

ಗಾಲ್ವಾನ್‌ನಂಥ ಘಟನೆಗಳು ಮರುಕಳಿಸಿದರೆ ಮುಲಾಜಿಲ್ಲದೆ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಿ ಎಂದೂ ಸೇನೆಗೆ ಸೂಚಿಸಲಾಗಿದೆ. ಜತೆಗೆ 3,500 ಕಿ.ಮೀ. ಉದ್ದದ ವಾಸ್ತವ ನಿಯಂತ್ರಣ ರೇಖೆಯ ಬಳಿ ಯಾವುದೇ ನಿಯಮಬಾಹಿರ ಕೃತ್ಯಗಳು ನಡೆದರೂ ಅದಕ್ಕೆ ಸ್ವವಿವೇಚನೆಯ ಪ್ರತ್ಯುತ್ತರ ನೀಡುವ ಸ್ವಾತಂತ್ರ್ಯವನ್ನೂ ಕಲ್ಪಿಸಲು ನಿರ್ಧರಿಸಲಾಗಿದೆ.

ಎರಡೂ ದೇಶಗಳ ನಡುವೆ 1996 ಮತ್ತು 2005ರಲ್ಲಿ ಮಾಡಿಕೊಳ್ಳಲಾಗಿದ್ದ ಒಪ್ಪಂದದ ಪ್ರಕಾರ, ಗಡಿಯಲ್ಲಿ ಘರ್ಷಣೆ ಸಂಭವಿಸಿದರೆ ಎರಡೂ ಕಡೆಗಳ ಸೈನಿಕರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತಿರಲಿಲ್ಲ.

ಗಡಿಯಲ್ಲಿ ಚೀನ ಮತ್ತಷ್ಟು ಕಿತಾಪತಿ
ಗಾಲ್ವಾನ್‌ ನದಿಯ ಆಚೆ ದಡದಲ್ಲಿ ಚೀನ ಸೇನೆ ಜೂ. 9ರಿಂದ 16ರ ವರೆಗೆ ಹೆಚ್ಚು ಸೇನೆಯನ್ನು ಜಮಾವಣೆ ಮಾಡಿರುವುದು ಉಪಗ್ರಹ ಚಿತ್ರಗಳಿಂದ ತಿಳಿದುಬಂದಿದೆ. ಅಲ್ಲಿ ವಾಹನಗಳ ಓಡಾಟ ಹೆಚ್ಚಿದ್ದು, ಬುಲ್ಡೋಜರ್‌ನಂಥ ಕಟ್ಟಡ ನಿರ್ಮಾಣ ಯಂತ್ರೋಪಕರಣಗಳನ್ನೂ ನೆಲೆಗೊಳಿಸಲಾಗಿದೆ. ಗಾಲ್ವಾನ್‌ ನದಿ ದಡದ ಉದ್ದಕ್ಕೂ ಸೈನಿಕರಿಗಾಗಿ ಟೆಂಟ್‌ಗಳನ್ನು ನಿರ್ಮಿಸಲಾಗಿದೆ. ಜೂ. 16ರ ಹೊತ್ತಿಗೆ ಅಲ್ಲಿ ಸುಮಾರು 200ಕ್ಕಿಂತಲೂ ಹೆಚ್ಚು ಟ್ರಕ್‌ಗಳು ಜಮಾವಣೆಗೊಂಡಿರುವುದು ತಿಳಿದುಬಂದಿದೆ.

ಉಪಗ್ರಹ ಚಿತ್ರಗಳಿಂದ ತಿಳಿದು ಬರುವ ಮತ್ತೆರಡು ಮಹತ್ವದ ವಿಚಾರಗಳೇನೆಂದರೆ, ಜೂ. 15ರಂದು ನಡೆದಿದ್ದ ಭಾರತ-ಚೀನ ಸೈನಿಕರ ಘರ್ಷಣೆಯ ಸ್ಥಳದಲ್ಲಿ ಕಟ್ಟಡ ನಿರ್ಮಾಣ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು. ಬುಲ್ಡೋಜರ್‌ಗಳ ನೆರವಿನಿಂದ ಗಾಲ್ವಾನ್‌ ನದಿಯ ಹರಿವಿಗೆ ಅಡ್ಡಿಪಡಿಸಿ ನೀರು ಭಾರತ ಪ್ರವೇಶಿಸದಂತೆ ಮಾಡಲಾಗಿದೆ.

ಚೀನದ 40ಕ್ಕೂ ಹೆಚ್ಚು ಸೈನಿಕರ ಸಾವು
ಚೀನದ 40ಕ್ಕೂ ಹೆಚ್ಚು ಸೈನಿಕರು ಸತ್ತಿದ್ದಾರೆ ಎಂದು ರಾಜ್ಯ ಹೆದ್ದಾರಿ ಮತ್ತು ಸಾರಿಗೆ ಸಚಿವ ಮತ್ತು ನಿವೃತ್ತ ಸೇನಾ ಮುಖ್ಯಸ್ಥ, ನಿವೃತ್ತ ಜನರಲ್‌ ವಿ.ಕೆ. ಸಿಂಗ್‌ ಹೇಳಿದ್ದಾರೆ. ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ ಎಂದರೆ ಚೀನದ 40 ಸೈನಿಕರು ಸತ್ತಿರಲೇ ಬೇಕು. ಏಕೆಂದರೆ ನಮ್ಮವರು ಎಂದಿಗೂ ಒಬ್ಬರ ಬಲಿದಾನಕ್ಕೆ ಪ್ರತಿಯಾಗಿ ಇಬ್ಬರನ್ನು ಆಹುತಿ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.

ಶೀಘ್ರ 2,000 ಸಿಬಂದಿ ರವಾನೆ
ಭಾರತ-ಚೀನ ಗಡಿ ಭಾಗದಲ್ಲಿರುವ ಭಾರತೀಯ ಸೇನೆಗೆ ಹೆಚ್ಚುವರಿ ಬಲವಾಗಿ ಇಂಡೊ-ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ (ಐಟಿಬಿಪಿ) ಪಡೆಯ 2,000 ಯೋಧರನ್ನು ರವಾನಿಸಲು ನಿರ್ಧರಿಸಲಾಗಿದೆ. ದೇಶದ ನಾನಾ ಪ್ರಾಂತ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಐಟಿಬಿಪಿ ಯೋಧರನ್ನು ಒಗ್ಗೂಡಿಸಿ 20 ಬೆಟಾಲಿಯನ್‌ಗಳಲ್ಲಿ ಹಂಚಿಕೆ ಮಾಡಿ ಅವರನ್ನು ಲಡಾಖ್‌ಗೆ ಸದ್ಯದಲ್ಲೇ ರವಾನಿಸಲು ತೀರ್ಮಾನಿಸಲಾಗಿದೆ.

ಐಟಿಬಿಪಿ ಯೋಧರು ಭಾರತ-ಚೀನ ನಡುವಿನ ವಾಸ್ತವ ನಿಯಂತ್ರಣ ರೇಖೆಯಲ್ಲಿ ಬರುವ ಕಾರಂಕೋರಂ ಪಾಸ್‌ನಿಂದ ಲಡಾಖ್‌ನಲ್ಲಿರುವ ಜಚೇಪ್‌ ಲಾ ಪೋಸ್ಟ್‌ ವರೆಗಿನ 3,488 ಕಿ.ಮೀ. ಸರಹದ್ದನ್ನು ಕಾಯುತ್ತಾರೆ. ವಾಸ್ತವ ನಿಯಂತ್ರಣ ರೇಖೆಗೆ ಲಡಾಖ್‌ ಕೇಂದ್ರಾಡಳಿತ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳ ಗಡಿ ಪ್ರದೇಶಗಳೂ ಹೊಂದಿಕೊಂಡಿವೆ.

ಚೀನೀ ವಸ್ತು ಆಮದು ತಡೆಗೆ ಕ್ರಮ
ಚೀನದ ವಸ್ತುಗಳ ಆಮದಿನ ಮೇಲಣ ಅವಲಂಬನೆಯನ್ನು ತಪ್ಪಿಸಿ ಆತ್ಮನಿರ್ಭರ ಭಾರತ ಪರಿಕಲ್ಪನೆಯನ್ನು ಪ್ರವರ್ಧಿಸಲು ಪ್ರಧಾನಮಂತ್ರಿ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆಯ ನಡೆದಿದೆ ಎಂದು ಉನ್ನತ ಮೂಲಗಳು ಹೇಳಿವೆ. ಚೀನದಿಂದ ಆಮದಾಗುತ್ತಿರುವ ವಸ್ತುಗಳು ಮತ್ತು ಕಚ್ಚಾವಸ್ತುಗಳ ವಿವರಗಳನ್ನು ಮಾತ್ರವಲ್ಲದೆ ಇವುಗಳ ಆಮದು ಸ್ಥಗಿತವಿಚಾರದಲ್ಲಿ ಸಲಹೆ ಮತ್ತು ಸೂಚನೆಗಳನ್ನು ಕೂಡ ಒದಗಿಸುವಂತೆ ಉದ್ಯಮ ರಂಗಕ್ಕೆ ಸೂಚಿಸಲಾಗಿದೆ ಎಂದು ಅವು ಹೇಳಿವೆ.

ಹೆಚ್ಚುವರಿ ಇಂಧನ
ಗಡಿ ಭಾಗದಲ್ಲಿ ಸೇನಾಪಡೆಗಳ ಚಟುವಟಿಕೆ ಹೆಚ್ಚಿದ್ದು, ಇಂಧನ ಅಗತ್ಯವನ್ನು ಪೂರೈಸುವುದಕ್ಕಾಗಿ ಸರಕಾರಿ ಸ್ವಾಮ್ಯದ ಇಂಧನ ಕಂಪೆನಿಗಳು ಲಡಾಖ್‌ಗೆ ಹೆಚ್ಚುವರಿ ಇಂಧನ ಸರಬರಾಜು ಮಾಡಲಾರಂಭಿಸಿವೆ. ಇಂಧನ ದಾಸ್ತಾನು ಸಾಮರ್ಥ್ಯವನ್ನು ಕೂಡ ಹೆಚ್ಚಿಸಲಾಗಿದೆ. ಭಾರತೀಯ ಸೇನೆಯು
ಯುದ್ಧ ವಿಮಾನಗಳನ್ನು ಮುಂಚೂಣಿ ಸ್ಥಾನಗಳಲ್ಲಿ ನೆಲೆಗೊಳಿಸಿರುವುದರಿಂದ ಯುದ್ಧ ವಿಮಾನಗಳ ಇಂಧನ ಸರಬರಾಜನ್ನು ಕೂಡ ವೃದ್ಧಿಸಲಾಗಿದೆ.

ಇತ್ಯರ್ಥಕ್ಕೆ ಪ್ರಯತ್ನ : ಟ್ರಂಪ್‌
ಭಾರತ ಮತ್ತು ಚೀನ ನಡುವೆ ಎದ್ದಿರುವ ಸಂಘರ್ಷ ಕ್ಲಿಷ್ಟಕರ ಪರಿಸ್ಥಿತಿಯಾಗಿದ್ದು ಅದನ್ನು ತಿಳಿಗೊಳಿಸಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ. ನಾವು ಭಾರತ ಮತ್ತು ಚೀನ ನಾಯಕರೊಂದಿಗೆ ಮಾತನಾಡಿದ್ದೇನೆ. ಉಭಯ ದೇಶಗಳ ಗಡಿಯಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದೇವೆ. ಎರಡೂ ದೇಶಗಳ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಪ್ರಯತ್ನಗಳು ಸಾಗಿವೆ ಎಂದು ಅವರು ಹೇಳಿದ್ದಾರೆ.

ಟೆಕ್ಸಾಸ್‌ನ ರಿಪಬ್ಲಿಕನ್‌ ಸಂಸದ ಲ್ಯಾನ್ಸ್‌ ಗುಡೆನ್‌ ಮಾತನಾಡಿ, ಚೀನವು ನಂಬಿಕೆಗೆ ಅರ್ಹವಲ್ಲ. ಅಲ್ಲಿನ ಚೀನ ಕಮ್ಯೂನಿಸ್ಟ್‌ ಪಾರ್ಟಿ (ಸಿಸಿಪಿ) ತನ್ನ ಮಾತಿಗೆ ಬದ್ಧವಾಗಿರುವುದಿಲ್ಲ. ಗಡಿಯಲ್ಲಿ ಅದು ಭಾರತಕ್ಕೆ ನೀಡುತ್ತಿರುವ ತೊಂದರೆ ಆಕ್ಷೇಪಾರ್ಹ. ಸದ್ಯದಲ್ಲೇ ಟ್ರಂಪ್‌-ಮೋದಿ ಅವರ ಸ್ನೇಹ ಈ ಸಮಸ್ಯೆಯನ್ನು ಇತ್ಯರ್ಥಗೊಳಿಸಲಿದೆ ಎಂಬ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next