Advertisement

ಸಾಲ ನೀಡಲು ಹಿಂದೇಟು ಹಾಕಿದರೆ ಸರಕಾರದ ಖಾತೆ ವರ್ಗ: ಡಾ|ನವೀನ್‌

02:14 AM Mar 26, 2021 | Team Udayavani |

ಉಡುಪಿ: ಸಾಲ ನೀಡಲು ಹಿಂದೇಟು ಹಾಕುವ ಬ್ಯಾಂಕ್‌ಗಳಲ್ಲಿರುವ ಸರಕಾರದ ಖಾತೆಗಳನ್ನು ವರ್ಗಾವಣೆ ಮಾಡುವುದಾಗಿ ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ಎಚ್ಚರಿಸಿದ್ದಾರೆ.

Advertisement

ಜಿ.ಪಂ. ಸಭಾಂಗಣದಲ್ಲಿ ಗುರುವಾರ ತ್ತೈಮಾಸಿಕ ಬ್ಯಾಂಕಿಂಗ್‌ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲಿಸಿದ ಅವರು,  ಸಾಲ ವಿತರಣೆಯನ್ನು ಪರಿಣಾಮಕಾರಿ ಯಾಗಿ ಮಾಡ ಬಹುದೆಂಬ ಕುರಿತು ನಿರ್ದಿಷ್ಟವಾದ ಕ್ರಿಯಾ ಯೋಜನೆ ರೂಪಿಸಬೇಕು. ಠೇವಣಿ ಮುಂಗಡ ಅನುಪಾತವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳ ಬೇಕು. ಮುಂದಿನ  ಸಭೆಯಲ್ಲಿ ನಿರ್ದಿಷ್ಟ ಸಾಧನೆ ವರದಿ ಸಿಗಬೇಕು ಎಂದರು.

ಶಿಕ್ಷಣ ಸಾಲ ವಿಳಂಬದಿಂದ ತೊಂದರೆ :

ವಿದ್ಯಾರ್ಥಿಗಳ ಶಿಕ್ಷಣ ಸಾಲ ವಿಳಂಬದ ಕುರಿತು ಅಸಮಾಧಾನ ಸೂಚಿಸಿದ ಭಟ್‌, ಸಕಾಲದಲ್ಲಿ ಸಾಲ ಬಿಡುಗಡೆ ಮಾಡದಿದ್ದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗುತ್ತದೆ.  ದುರ್ಬಲ ವರ್ಗ ದವರಿಗೆ ಸಾಲ ನೀಡಲು ಹಿಂದೇಟು ಹಾಕಿದರೆ ಬ್ಯಾಂಕ್‌ ವಿರುದ್ಧ ಕ್ರಮ ಜರಗಿಸ ಬೇಕಾಗುತ್ತದೆ. ಜಿಲ್ಲೆಯಲ್ಲಿ ಠೇವಣಿ ಪ್ರಮಾಣ ಹೆಚ್ಚಿಗೆ ಇದ್ದು ಸಾಲದ ಪ್ರಮಾಣ ಕಡಿಮೆ ಇದೆ. ಇಂತಹ ಬ್ಯಾಂಕ್‌ಗಳಲ್ಲಿ ಸರಕಾರದ ಖಾತೆಗಳನ್ನು ಇರಿಸಿಕೊಳ್ಳುವುದು ಏಕೆ ಎಂದು ಪ್ರಶ್ನಿಸಿದರು.

ಗೈರಾದವರಿಗೆ ನೋಟಿಸ್‌ : 

Advertisement

ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ಅಧಿಕಾರಿಗಳು ಗೈರಾಗಿರುವುದನ್ನು ಗಮನಿ ಸಿದ ಸಿಇಒ, ಅವರಿ ನೋಟಿಸ್‌ ಹೊರಡಿಸಲು ಸೂಚಿಸಿದರು.

10,117.28 ಕೋ.ರೂ. ಗಾತ್ರದ ಜಿಲ್ಲಾ ಸಾಲ ಯೋಜನೆಯ ಹೊತ್ತಗೆಯನ್ನು ಸಿಇಒ ಬಿಡುಗಡೆಗೊಳಿಸಿದರು. ನಬಾರ್ಡ್‌ ಎಜಿಎಂ ಸಂಗೀತ ಕರ್ತಾ ಸಾಲ ವಿತರಣೆಯ ಕ್ಷೇತ್ರವಾರು ಗುರಿಗಳನ್ನು ವಿವರಿಸಿದರು. ಪ್ರಾದೇಶಿಕ ಪ್ರಬಂಧಕರಾದ ಕೆನರಾ ಬ್ಯಾಂಕ್‌ನ ಲೀನಾ ಪೀಟರ್‌ ಪಿಂಟೋ, ಕೆ. ಕಾಳಿ, ಯೂನಿಯನ್‌ ಬ್ಯಾಂಕ್‌ನ ಡಾ| ವಾಸಪ್ಪ ಉಪಸ್ಥಿತರಿದ್ದರು. ಜಿಲ್ಲಾ ಅಗ್ರಣಿ ಬ್ಯಾಂಕ್‌ ಪ್ರಬಂಧಕ ರುದ್ರೇಶ್‌ ಡಿ.ಸಿ. ಅವರು ಡಿಸೆಂಬರ್‌ ಅಂತ್ಯದ ತ್ತೈಮಾಸಿಕದಲ್ಲಿ ಆದ ಠೇವಣಿ ಸಂಗ್ರಹ, ಸಾಲ ವಿತರಣೆಯ ವಿವರಗಳನ್ನು ಮಂಡಿಸಿದರು.

ವಿಮಾ ಯೋಜನೆ ಜಾಗೃತಿಗೆ ಸೂಚನೆ :

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿ (ಪಿಎಂಎಸ್‌ಬಿವೈ) 12 ರೂ. ಮತ್ತು  ಪ್ರಧಾನಮಂತ್ರಿ ಜೀವನ್‌ ಜ್ಯೋತಿ ವಿಮಾ ಯೋಜನೆಯಡಿ (ಪಿಎಂಜೆಜೆಬಿವೈ) 330 ರೂ. ಪಾವತಿಸಿ ಯೋಜನೆಯ ಫ‌ಲಾನುಭವಿಗಳಾದ ಹಲವು ಮಂದಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಈ ಖಾತೆದಾರರಿಗೆ ಅವರ ಮರಣದ ಅನಂತರ ವಿಮಾ ಹಣವನ್ನು ವಾರಸುದಾರರಿಗೆ ನೀಡುವ ಕುರಿತಂತೆ ಬ್ಯಾಂಕ್‌ಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ತಿಳಿಸಿದರು.

1,086 ಮಂದಿ ಮಾತ್ರ ಪ್ರಯೋಜನ ಪಡೆದಿದ್ದಾರೆ. ಪಿಎಂಎಸ್‌ಬಿವೈಗೆ 3,27,617 ಮತ್ತು ಪಿಎಂಜೆಜೆಬಿವೈಗೆ 2,98,812 ನೊಂದಣಿ ಆಗಿದೆ. ಯೋಜನೆಯ ಸೌಲಭ್ಯವನ್ನು ಅರ್ಹ ಎಲ್ಲರಿಗೆ ಒದಗಿಸಬೇಕು. ಬ್ಯಾಂಕ್‌ ಖಾತೆ ತೆರೆಯುವಾಗಲೇ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ಗೆ ಸೂಚಿಸಿದರು. ಬ್ಯಾಂಕ್‌ಗಳಲ್ಲಿ ಜನಧನ ಖಾತೆ ಮತ್ತು ಶೂನ್ಯ ಶಿಲ್ಕಿನ ಖಾತೆ ಇವೆರಡರಲ್ಲಿ ಜನಧನ ಖಾತೆಯ ಸೌಲಭ್ಯ ಹೆಚ್ಚಿಗೆ ಇರುತ್ತದೆ. ಇದರ ಬಗ್ಗೆ ಜನರಿಗೆ ಗೊತ್ತಿರುವುದಿಲ್ಲ. ಬ್ಯಾಂಕ್‌ನವರು ತಿಳಿಸಬೇಕು ಎಂದು ಸಭಿಕರೊಬ್ಬರು  ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next