ಉಡುಪಿ: ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢಶಾಲೆಯ ಎಲ್ಲ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬಂದಿಯನ್ನು ಶಿಕ್ಷಣ ಸಂಸ್ಥೆಯ ಅನುಮತಿಯಿಲ್ಲದೆ ಡಿಡಿಪಿಐ ಕಚೇರಿಯಿಂದ ನೇರ ಕೌನ್ಸೆಲಿಂಗ್ ನಡೆಸಿ ಅವರನ್ನು ಬೇರೆ ಕಡೆಗೆ ವರ್ಗಾಯಿಸುತ್ತಿರುವ ನೀತಿ ಖಂಡಿಸಿ ಶಾಲಾ ಆಡಳಿತ ಮಂಡಳಿ ಹಾಗೂ ಸ್ಥಳೀಯರು ಒಟ್ಟಾಗಿ ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪಂಚನಬೆಟ್ಟು ವಿದ್ಯಾವರ್ಧಕ ಆಡಳಿತ ಸಮಿತಿ ಅಧ್ಯಕ್ಷ ಎ. ನರಸಿಂಹ ತಿಳಿಸಿದ್ದಾರೆ.
8ನೇ ತರಗತಿಗೆ 22 ವಿದ್ಯಾರ್ಥಿಗಳು ಸೇರ್ಪಡೆ
ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಮಾರು 29 ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ಬಂದಿದೆ.
ಪ್ರಸ್ತುತ ಶಿಕ್ಷಣ ಸಂಸ್ಥೆಯಲ್ಲಿ 42 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗಾಗಿ ಪಂಚನಬೆಟ್ಟು ವಿದ್ಯಾವರ್ಧಕ ಸಂಘದಿಂದ ಉಚಿತ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಬಾರಿ 8ನೇ ತರಗತಿಗೆ 22 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ ಎಂದರು.
ಕ್ಷೇತ್ರ ಶಿಕ್ಷಣ ಉಪ ನಿರ್ದೇಶಕ ಅವರು 2019-20ನೇ ಸಾಲಿನಲ್ಲಿ ಶಾಲೆ ಪ್ರಾರಂಭಕ್ಕೆ ಅನುಮತಿ ನೀಡಿದ್ದಾರೆ. ಆದರೆ ಇದೀಗಾ ಏಕಾಏಕಿಯಾಗಿ ಶಾಲೆಯ ಎಲ್ಲ 5 ಶಿಕ್ಷಕ ಹಾಗೂ 1 ಸಿಬಂದಿಯನ್ನು ಬೇರೆಕಡೆ ವರ್ಗಾಯಿಸಲು ಕೌನ್ಸೆಲಿಂಗ್ ಮಾಡುವ ಮೂಲಕ ವಿದ್ಯಾರ್ಥಿ ಗಳ ಭವಿಷ್ಯಕ್ಕೆ ತೊಂದರೆಯುಂಟು ಮಾಡುತ್ತಿದ್ದಾರೆ ಎಂದರು.
ಆಡಳಿತ ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸದಸ್ಯ ಸಂದೇಶ್, ಅಶೋಕ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯ ಉಪಸ್ಥಿತರಿದ್ದರು.
ತರಗತಿಗೆ 25 ವಿದ್ಯಾರ್ಥಿಗಳಿರಬೇಕು
ಸರಕಾರದ ನಿಯಮಾನುಸಾರ ಅನುದಾನಿತ ಶಾಲೆಯ ಪ್ರತಿ ತರಗತಿಯಲ್ಲಿ 25 ವಿದ್ಯಾರ್ಥಿಗಳು ಇರಬೇಕು. ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಅಷ್ಟು ವಿದ್ಯಾರ್ಥಿಗಳಿಲ್ಲ. ಇದರಿಂದಾಗಿ ಕಳೆದ ವರ್ಷ ಸರಕಾರಿ ಅನುದಾನಿತ ಶಾಲೆಯ ಮಾನ್ಯತೆ ಕಳೆದುಕೊಂಡಿದೆ. ಇದರಿಂದಾಗಿ ಶಿಕ್ಷಕರಿಗೆ ಸರಕಾರದಿಂದ ವೇತನ ಪಾವತಿಯಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬಂದಿಯನ್ನು ಕರೆಸಿ ಅವರಿಗೆ ಈ ಬಗ್ಗೆ ಕೌನ್ಸಿಲಿಂಗ್ ನಡೆಸಲಾಗಿದೆ.
-ಶೇಷಶಯನ ಕಾರಿಂಜ, ಡಿಡಿಪಿಐ, ಉಡುಪಿ ಜಿಲ್ಲೆ