ಸರಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದ 2013ರ ಮಾರ್ಗಸೂಚಿಗಳ ಪ್ರಕಾರ ಸರಕಾರಿ ನೌಕರರ ವರ್ಗಾವಣೆಗಳಲ್ಲಿ ರಾಜಕೀಯ ಒತ್ತಡ ನಿಷಿದ್ಧ. ಆದರೆ 2021-22ನೇ ಸಾಲಿಗೆ ಸರಕಾರಿ ನೌಕರರ ವರ್ಗಾವಣೆ ಅಧಿಕಾರವನ್ನು ಸರಕಾರ ನೇರವಾಗಿ ಸಚಿವರ ಕೈಗೆ ಕೊಟ್ಟಿರುವುದು ವಿಪರ್ಯಾಸ.
ಸರಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಆಡಳಿತ ವ್ಯವಸ್ಥೆಯ ಬಹುಮುಖ್ಯ ಹಂತ. ಆಡಳಿತ ಯಂತ್ರದ ಪಾರದರ್ಶಕ ಕಾರ್ಯನಿರ್ವಹಣೆಗೆ ವರ್ಗಾವಣೆ ಪ್ರಕ್ರಿಯೆಯೂ ಅಷ್ಟೇ ಪಾರದರ್ಶಕ ಮತ್ತು ಹಸ್ತಕ್ಷೇಪಗಳಿಂದ ಮುಕ್ತವಾಗಿರಬೇಕು. ಅದರಲ್ಲೂ ಮುಖ್ಯವಾಗಿ ಅಧಿಕಾರಿ/ನೌಕರರ ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಇರಕೂಡದು. ಆದರೆ ಇದು ಎಲ್ಲ ಸರಕಾರಗಳಲ್ಲೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನಡೆದುಕೊಂಡು ಬಂದಿದೆ.
2021-22ನೇ ಸಾಲಿಗೆ ಬಿ ಮತ್ತು ಸಿ ಗ್ರೂಪ್ ನೌಕರರು ಮತ್ತು ಅಧಿಕಾರಿ ಗಳಿಗೆ ಅನ್ವಯವಾಗುವಂತೆ ಒಂದು ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ನ್ನು ಮೀರದಂತೆ ಸಾರ್ವತ್ರಿಕ ವರ್ಗಾ ವಣೆ ಮಾಡಲು ಆಯಾ ಇಲಾಖೆಯ ಸಚಿವರಿಗೆ ಅಧಿಕಾರ ನೀಡಿ ಸರಕಾರ ಮಾರ್ಗ ಸೂಚಿಗಳನ್ನು ಹೊರಡಿಸಿರುವುದು ಸಾಕಷ್ಟು ಜಿಜ್ಞಾಸೆಗಳನ್ನು ಹುಟ್ಟು ಹಾಕಿದೆ. ಜುಲೈ 22ರೊಳಗೆ ವರ್ಗಾವಣೆ ಪೂರ್ಣಗೊಳಿಸಬೇಕು ಎಂದು ಸೀಮಿತ ಕಾಲಾವಧಿ ನೀಡಿರುವುದು ವರ್ಗಾವಣೆ ಪ್ರಕ್ರಿಯೆ ತ್ವರಿತವಾಗಲು ಒತ್ತಡಗಳು, ಲಾಬಿಗಳು ನಡೆಯುವುದನ್ನು ಅಲ್ಲಗಳೆಯುವಂತಿಲ್ಲ. ಪಾರ ದರ್ಶ ಕತೆ ನೀರಿಕ್ಷಿಸುವುದು ಕಷ್ಟ, ಭ್ರಷ್ಟಾಚಾರ, ಸ್ವಜನಪಕ್ಷಪಾತ ನಡೆದರೆ ಅಚ್ಚರಿ ಪಡುವಂತಿಲ್ಲ. “ಸರಕಾರಿ ನೌಕರನು ವರ್ಗಾವಣೆಯನ್ನು ಹಕ್ಕೆಂದು ಪ್ರತಿಪಾದಿಸುವಂತಿಲ್ಲ. ವರ್ಗಾವಣೆಗಳ ಬಗ್ಗೆ ರಾಜಕೀಯ ಒತ್ತಡವನ್ನು ತರು ವುದು ನಿಷೇಧಿಸಲಾಗಿದೆ. ಯಾವುದೇ ಸರಕಾರಿ ನೌಕರನು ತನ್ನನ್ನು ಯಾವುದೇ ನಿರ್ದಿಷ್ಟ ಹುದ್ದೆಗೆ ವರ್ಗಾಯಿಸಲು ಒತ್ತಡ ತಂದಲ್ಲಿ ಅಂತಹ ನೌಕರನನ್ನು ಕೋರಿದ ಸ್ಥಳಕ್ಕೆ ವರ್ಗಾವಣೆಗೊಳ್ಳದಂತೆ ನೋಡಿಕೊಳ್ಳತಕ್ಕದ್ದು ಎಂದು ಸರಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ 2013ರಲ್ಲಿ ಹೊರಡಿಸಲಾದ ಹೊಸ ಮಾರ್ಗಸೂಚಿಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಸರಕಾರಿ ನೌಕರರ ವರ್ಗಾವಣೆ ಕುರಿತಂತೆ ಹಾರನಹಳ್ಳಿ ರಾಮಸ್ವಾಮಿ ಅಧ್ಯಕ್ಷತೆಯ ಆಡಳಿತ ಸುಧಾರಣ ಆಯೋಗ 2001ರಲ್ಲಿ ನೀಡಿದ್ದ ವರದಿ ಯಲ್ಲಿ ಮಾಡಲಾಗಿದ್ದ ಶಿಫಾರಸುಗಳಿಗೆ ಅನ್ವಯವಾಗಿ ವರ್ಗಾವಣೆಗೆ ವಿಸ್ತೃತ ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು. ಅದರಂತೆ ಪ್ರತೀ ವರ್ಷ ಮಾಡ ಬೇಕಾದ ವರ್ಗಾವಣೆಗಳಿಗೆ ಸೂಚನೆಗಳನ್ನು ನೀಡುತ್ತ ಬರಲಾಗಿದೆ. ಆದರೆ ಸರಕಾರಿ ನೌಕರರನ್ನು ಒಂದೇ ಸ್ಥಳದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಒಂದು ನಿರ್ದಿಷ್ಟ ಅವಧಿಗೆ ಮುಂದುವರಿಸಿರುವುದರಿಂದ ಅವರು ಇಲಾಖಾ ಚಟುವಟಿಕೆಗಳ ಬಗ್ಗೆ ವಾಸ್ತವಿಕ ಮತ್ತು ಸಮಂಜಸ ಜ್ಞಾನ ಪಡೆದು ಇಲಾ ಖೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಉದ್ದೇಶಿತ ಫಲಿ ತಾಂಶಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರಿ ನೌಕರರ ವರ್ಗಾವಣೆಗಳನ್ನು ನಿಯಂತ್ರಿಸುವುದು ಆವಶ್ಯಕವೆಂದು ಕಂಡು ಬಂದ ಹಿನ್ನೆಲೆಯಲ್ಲಿ ಹಾಗೂ ಆಡಳಿತ ಸುಧಾರಣ ಆಯೋಗದ ಶಿಫಾರಸಿನಂತೆ ಆಡಳಿತದಲ್ಲಿ ಹೆಚ್ಚಿನ ಹೊಣೆಗಾರಿಕೆ ಮತ್ತು ಪಾರದರ್ಶಕತೆ ತರುವುದು ಅಗತ್ಯವಾಗಿದೆ ಎಂದು ಮನಗಂಡ ಹಿನ್ನೆಲೆಯಲ್ಲಿ 2013ರಲ್ಲಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಯಿತು.
ಸರಕಾರಿ ನೌಕರರ ವರ್ಗಾವಣೆ ಅಧಿಕಾರವನ್ನು ಸಚಿವರಿಗೆ ನೀಡಿರುವ ಹಿಂದೆ ಸರಕಾರದ ಉದ್ದೇಶವೇನಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಕೊರೊನಾ ಕಾರಣಕ್ಕೆ ಕಳೆದ ವರ್ಷವೂ ನಿಯಮಿತವಾಗಿ ವರ್ಗಾವಣೆ ನಡೆದಿಲ್ಲ. ಈಗ ವರ್ಗಾವಣೆಗೆ ಅವಕಾಶ ಕೊಟ್ಟು ಅದರ ಅಧಿಕಾರವನ್ನು ಸಚಿವರಿಗೆ ಕೊಟ್ಟಿರು ವುದರಿಂದ ವರ್ಗಾವಣೆ ಪ್ರಕ್ರಿಯೆಯನ್ನು ನಿಯಂತ್ರಿಸುವುದು ಅಷ್ಟೊಂದು ಸುಲಭವಲ್ಲ. ಮುಂದೆ ಆಗುವ ಎಲ್ಲ ಎಡರುತೊಡರುಗಳಿಗೆ ಸರಕಾರವೇ ಹೊಣೆ ಹೊರಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.