Advertisement

ಅಮೀನಗಡ ಸರ್ಕಾರಿ ಆಸ್ಪತ್ರೆಗಿಲ್ಲ ಖಾಯಂ ವೈದ್ಯರು! ಇಲ್ಲಿಗೆ ಬಂದರೆ ನೀಡುತ್ತಾರೆ ಬರಿ ಮಾತ್ರೆ

01:28 PM Sep 19, 2020 | sudhir |

ಅಮೀನಗಡ: ಹದಿನೈದು ಸಾವಿರಕ್ಕೂ ಹೆಚ್ಚು ಜನರು ವಾಸಿಸುವ ಕರದಂಟು ಖ್ಯಾತಿ ಅಮೀನಗಡ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕಳೆದ ಐದು ವರ್ಷಗಳಿಂದ ಖಾಯಂ ವೈದ್ಯರಿಲ್ಲ. ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲೂ ವೈದ್ಯರಿಲ್ಲದೇ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಹೌದು, ಅಮೀನಗಡ ಪಟ್ಟಣ 2011ರ ಜನಗಣತಿ ಪ್ರಕಾರ 15,076 ಜನಸಂಖ್ಯೆ ಇದ್ದು 5 ಸಾವಿರಕ್ಕೂ ಹೆಚ್ಚು ಮನೆಗಳಿವೆ. 16 ಜನ ಪ.ಪಂ ಸದಸ್ಯರಿದ್ದಾರೆ. ಆದರೆ, ಪಟ್ಟಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಎರಡು ತಿಂಗಳಿಂದ ವೈದ್ಯರಿಲ್ಲದೇ ರೋಗಿಗಳು ಪರದಾಡುವಂತಾಗಿದೆ. ಈ ಆಸ್ಪತ್ರೆಗೆ ಐದು ವರ್ಷಗಳಿಂದ ಕಾಯಂ ವೈದ್ಯರು ಕೂಡಾ ನೇಮಕವಾಗಿಲ್ಲ. ಒಂದು ಕಡೆ ವೈದ್ಯರಿಲ್ಲದ ಆಸ್ಪತ್ರೆ, ಮತ್ತೂಂದು ಕಡೆ ಕೋವಿಡ್ ಭೀತಿ, ಇದರಿಂದ ಪಟ್ಟಣ ಸೇರಿದಂತೆ ಸುತ್ತಲಿನ ಎರಡು ಉಪ ಕೇಂದ್ರದ ಸಾವಿರಾರು ರೋಗಿಗಳು ಪರದಾಡುವುದು ಮಾತ್ರ ತಪ್ಪಿಲ್ಲ.

ಬಾರದ ವೈದ್ಯರು: ಕೋವಿಡ್ ಸಂಕಷ್ಟದ ಸಮಯದಲ್ಲಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಎರಡು ತಿಂಗಳಾದರು ವೈದ್ಯರು ಬಾರದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಅವಲಂಬನೆಯಾದ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಆಸ್ಪತ್ರೆಗೆ ಬಂದ ರೋಗಿಗಳಿಗೆ ಕೇವಲ ಮಾತ್ರೆ ನೀಡಿ ಕಳುಹಿಸಲಾಗುತ್ತಿದೆ. ಆಸ್ಪತ್ರೆಗೆ ಬರುವ ಗರ್ಭಿಣಿಯರು, ಹಿರಿಯ ನಾಗರಿಕರು ಹಾಗೂ ಬಡ ರೋಗಿಗಳು ವೈದ್ಯರಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ. ಆದರಿಂದ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಪಟ್ಟಣಕ್ಕೆ ಕೂಡಲೇ ವೈದ್ಯರನ್ನು ನೇಮಕ ಮಾಡಬೇಕು ಎಂಬುದು ಇಲ್ಲಿನ ಜನರ ಒತ್ತಾಯ.

ಇದನ್ನೂ ಓದಿ : ಕೂಳೂರು: ತಡೆಗೋಡೆ ಕುಸಿದು ಓರ್ವ ಕಾರ್ಮಿಕ ಸಾವು , ಇಬ್ಬರು ಅಪಾಯದಿಂದ ಪಾರು

ಕಾಯಂ ವೈದ್ಯರಿಲ್ಲ: ಪಟ್ಟಣವು ಗ್ರಾಪಂನಿಂದ ಪಪಂ ಮೇಲ್ದರ್ಜೆ ಪಡೆದುಕೊಂಡು ಐದೂವರೆ ವರ್ಷ ಕಳೆದರೂ ಕಾಯಂ ವೈದ್ಯರಿಲ್ಲ. ತಾತ್ಕಾಲಿಕವಾಗಿ ಬಂದ ವೈದ್ಯರು ಕೂಡಾ 6 ತಿಂಗಳ ಅಥವಾ ವರ್ಷದೊಳಗೆ ಬಿಟ್ಟು ಹೋಗುವ ಪರಂಪರೆ ಮುಂದುವರಿದಿದೆ. ಇದರಿಂದ ರೋಗಿಗಳು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕಾಯಂ ವೈದ್ಯರನ್ನು ನೇಮಿಸಿ: ಕಾಯಿಲೆ ಮನುಷ್ಯರಿಗೆ ಹೇಳಿ, ಕೇಳಿ ಬರುವುದಿಲ್ಲ. ಕಾಯಿಲೆ ಬಂದಾಗ ಚಿಕಿತ್ಸೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ವೈದ್ಯರಿದ್ದರೆ ಒಳಿತು, ಇಲ್ಲವಾದಲ್ಲಿ ರೋಗಿ ಪಾಡು ಹೇಳತೀರದು. ಪಟ್ಟಣ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮದ ಜನರದ್ದು ಇದೇ ಪರಿಸ್ಥಿತಿಯಾಗಿದೆ. ಕಳೆದ ಎರಡು ತಿಂಗಳಿಂದ ರೋಗಿಗಳ ಕಷ್ಟ ಹೇಳತೀರದ್ದಾಗಿದೆ. ಅಪಘಾತ, ಹಾವು ಕಚ್ಚಿದರೆ, ವಿಷ ಸೇವಿಸಿದರೆ ಸೇರಿದಂತೆ ಜೀವಕ್ಕೆ ತಕ್ಷಣಕ್ಕೆ ಹಾನಿಯಾಗುವಂತ ಘಟನೆ ನಡೆದರೆ ತುರ್ತು ಚಿಕಿತ್ಸೆ ಸಿಗುವುದು ದೂರದ ಮಾತು. ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆ ಅಥವಾ ತಾಲೂಕು ಕೇಂದ್ರಗಳಿಗೆ ತೆರಳಬೇಕು. ಆದ್ದರಿಂದ ಸರ್ಕಾರಿ ಆಸ್ಪತ್ರೆಗೆ ಅವಲಂಬನೆಯಾಗಿರುವ ರೋಗಿಗಳ ಸಮಸ್ಯೆಬಗೆಹರಿಸಲು ಕ್ಷೇತ್ರದ ಜನಪ್ರತಿನಿಧಿಗಳು, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಅಮೀನಗಡ ಸರ್ಕಾರಿ ಪ್ರಾಥಮೀಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರನ್ನು ನೇಮಕ ಮಾಡಿ ಪಟ್ಟಣ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳ ಸಾವಿರಾರು ಬಡ ರೋಗಿಗಳಿಗೆ ಅನುಕೂಲ ಮಾಡಬೇಕು ಎಂಬ
ಒತ್ತಾಯ ಕೇಳಿ ಬಂದಿದೆ.

ಅಮೀನಗಡದಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯರು ಉನ್ನತ ಅಭ್ಯಾಸಕ್ಕಾಗಿ ಹೋಗಿದ್ದಾರೆ. ಇದರಿಂದ ಕಳೆದ ಎರಡು ತಿಂಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲ. ಕಮತಗಿ ಪಟ್ಟಣದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಮೂರು ದಿನ ಅಮೀನಗಡ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ತಿಳಿಸಲಾಗಿದೆ. ಅವರು ಒಂದು ವಾರದಲ್ಲಿ ತಮ್ಮ ಸೇವೆಗೆ ಹಾಜರಾಗುತ್ತಾರೆ.
– ಡಾ| ಪ್ರಶಾಂತ ತುಂಬಗಿ,

– ಎಚ್‌.ಎಚ್‌. ಬೇಪಾರಿ

Advertisement

Udayavani is now on Telegram. Click here to join our channel and stay updated with the latest news.

Next