Advertisement

ಮುಷ್ಕರ ಬಹುತೇಕ ಖಚಿತ: ಕರಾವಳಿಯಲ್ಲೂ ಕಂದಾಯ, ಆರೋಗ್ಯ, ಸಾರಿಗೆ ಸೇವೆ ವ್ಯತ್ಯಯ ಸಾಧ್ಯತೆ…

12:55 AM Mar 01, 2023 | Team Udayavani |

ಮಂಗಳೂರು/ಉಡುಪಿ: ತಮ್ಮ ಬೇಡಿಕೆಗಳಿಗೆ ಸರಕಾರ ಇದುವರೆಗೆ ಮಣಿಯದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಮಾ. 1ರಿಂದ ನಡೆಸಲುದ್ದೇಶಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ಬಹುತೇಕ ಖಚಿತವಾಗಿದೆ.

Advertisement

ಸಂಘಕ್ಕೆ 55 ಇತರ ವೃಂದ ಸಂಘಟನೆಗಳೂ ಬೆಂಬಲ ಘೋಷಿಸಿವೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲೂ ಸರಕಾರಿ ಶಾಲಾ ಕಾಲೇಜು, ಮಂಗಳೂರು ಮಹಾನಗರ ಪಾಲಿಕೆ, ಉಡುಪಿ ನಗರಸಭೆ, ವಿವಿಧ ಪುರಸಭೆ, ಪಟ್ಟಣ ಪಂಚಾಯತ್‌ ಮತ್ತಿತರ ಸ್ಥಳೀಯ ಸಂಸ್ಥೆಗಳು, ಸರಕಾರಿ ಆಸ್ಪತ್ರೆಗಳು, ಸಾರಿಗೆ ಇಲಾಖೆ ಸಹಿತ ಬಹುತೇಕ ಎಲ್ಲ ಸರಕಾರಿ ಸೇವೆಗಳಲ್ಲಿ ವ್ಯತ್ಯಯವಾಗುವ ಆತಂಕ ಎದುರಾಗಿದೆ.

ಒಪಿಡಿ ಇಲ್ಲ
ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗ ಕಾರ್ಯನಿರ್ವಹಿಸುವುದಿಲ್ಲ, ಆದರೆ ತುರ್ತು ಸೇವಾ ವಿಭಾಗಗಳಲ್ಲಿ ಸಿಬಂದಿ ಕಪ್ಪು ಪಟ್ಟಿ ಧರಿಸಿ ಕೆಲಸ ನಿರ್ವಹಿಸುವರು. ಸರಕಾರಿ ನೌಕರರ ವೇತನ ಪರಿಷ್ಕರಣೆ ಕುರಿತು ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡದಿರುವುದು, ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದು ಪಡಿಸುವಂತೆ ಆಗ್ರಹಿಸಿ ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ.

ಘೋಷಣೆ, ಪ್ರತಿಭಟನೆ ಇಲ್ಲ
ಸರಕಾರಿ ನೌಕರರು ಮಾ. 1ರಂದು ಕಚೇರಿಗೆ ಆಗಮಿಸದೆ ಮುಷ್ಕರ ನಡೆಸಲಿದ್ದಾರೆ. ಆದರೆ ಎಲ್ಲೂ ಸರಕಾರದ ವಿರುದ್ಧ ಘೋಷಣೆ ಕೂಗುವುದು, ಧರಣಿ, ಪ್ರತಿಭಟನೆ ನಡೆಸುವುದಿಲ್ಲ. ಕಚೇರಿಗೆ ಆಗಮಿಸುವವರ ಮನವೊಲಿಕೆ ಮಾಡಿ ಮುಷ್ಕರಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಸಂಘದ ದ.ಕ. ಜಿಲ್ಲಾಧ್ಯಕ್ಷ ಪಿ.ಕೆ. ಕೃಷ್ಣ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಅಂಪಾರು ದಿನಕರ ಶೆಟ್ಟಿ ತಿಳಿಸಿದ್ದಾರೆ.

ತಮ್ಮದು ನಿಗಮವಾದ್ದರಿಂದ ಕೆಎಸ್ಸಾರ್ಟಿಸಿಯ ವರು ಬೆಂಬಲ ಸೂಚಿಸಿಲ್ಲ, ಆದ್ದರಿಂದ ಬಸ್‌ ಸೇವೆ ಅಬಾಧಿತವಾಗಿರುತ್ತದೆ. ಶಾಲಾ ಕಾಲೇಜಿಗೆ ಯಾವುದಾದರೂ ಪರೀಕ್ಷೆ ನಡೆಯಬೇಕಾಗಿದ್ದರೆ ಮುಂದೂಡಬೇಕಾಗುತ್ತದೆ, ಆದರೆ ಕೆಪಿಟಿಸಿಎಲ್‌, ಮೆಸ್ಕಾಂ ಸಿಬಂದಿ ಮುಷ್ಕರಕ್ಕೆ ಬೆಂಬಲ ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ.

Advertisement

ಉಡುಪಿ ನಗರ ಹಾಗೂ ಮಂಗಳೂರು ನಗರದಲ್ಲಿ ಕಸ ವಿಲೇವಾರಿಯ ವಿಭಾಗದಲ್ಲಿ ಸರಕಾರಿ ನೌಕರರು ಕಾರ್ಯನಿರ್ವಹಿಸುವುದರಿಂದ ತ್ಯಾಜ್ಯ ವಿಲೇವಾರಿ ಕೂಡ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶದಲ್ಲೂ ಇದು ಮರುಕಳಿಸಬಹುದು.

ಗ್ರಾ.ಪಂ. ಸೇವೆ ವ್ಯತ್ಯಯ
ಪಿಡಿಒ, ಗ್ರಾ.ಪಂ. ಕಾರ್ಯದರ್ಶಿಗಳು ಬೆಂಬಲ ವ್ಯಕ್ತಪಡಿಸಿರುವುದರಿಂದ ಗ್ರಾ.ಪಂ.ಗಳಲ್ಲಿ ಸೇವೆ ಇರುವುದಿಲ್ಲ. ಆಪರೇಟರ್, ಬಿಲ್‌ ಸಂಗ್ರಹ ಇತ್ಯಾದಿ ಸೇವೆಗಳು ಎಂದಿನಂತೆ ನಡೆಯಲಿದೆ.

ಪದವಿ ಪರೀಕ್ಷೆ ಮುಂದೂಡಿಕೆ
ಮಂಗಳೂರು, ಫೆ. 28: ಸರಕಾರಿ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಬುಧವಾರ ನಡೆಯಲಿದ್ದ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಮಂಗಳೂರು ವಿವಿ ಕುಲಸಚಿವ (ಆಡಳಿತ) ಪ್ರೊಙ ಕಿಶೋರ್‌ ಕುಮಾರ್‌ ಸಿ.ಕೆ. ಉದಯವಾಣಿಗೆ ತಿಳಿಸಿದ್ದಾರೆ.

ಶಾಲಾ ಕಾಲೇಜು ಬಂದ್‌ ಸಾಧ್ಯತೆ
ಶಾಲಾ ಶಿಕ್ಷಕರು, ಪಿಯುಸಿ, ಪದವಿ ಉಪನ್ಯಾಸಕ, ಪ್ರಾಧ್ಯಾಪಕರು ಬಂದ್‌ಗೆ ಬೆಂಬಲ ಸೂಚಿಸಿರುವುದರಿಂದ ಉಡುಪಿ ಜಿಲ್ಲೆಯಲ್ಲಿ ಶಾಲೆ, ಕಾಲೇಜುಗಳು ಮಾ.1ರಂದು ಬಹುತೇಕ ಬಂದ್‌ ಆಗುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ.

ಸರಕಾರಿ ನೌಕರರ ಮನವೊಲಿಸುವ ಕಾರ್ಯ ಮಾಡುತ್ತಿದ್ದೇವೆ. ಈಗಾಗಲೇ ವಿವಿಧ ಸಂಘಟನೆಯವರು ಮನವಿ ಸಲ್ಲಿಸಿದ್ದಾರೆ. ಸರಕಾರದ ಹಂತದಲ್ಲಿ ಚರ್ಚೆಯಾಗುತ್ತಿರುವುದರಿಂದ ಜಿಲ್ಲಾ ಹಂತದಲ್ಲಿ ಯಾವುದೇ ನಿರ್ಧಾರ ಸಾಧ್ಯವಿಲ್ಲ.
– ಕೂರ್ಮಾ ರಾವ್‌ ಎಂ. / ರವಿಕುಮಾರ್‌ ಎಂ.ಆರ್‌., ಜಿಲ್ಲಾಧಿಕಾರಿ, ಉಡುಪಿ ಮತ್ತು ದ.ಕ. ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next