ಕೊಲೊಂಬೋ/ಮಾಲೆ: ಶ್ರೀಲಂಕಾ ಬಿಟ್ಟು ಪರಾರಿಯಾಗಿರುವ ಅಧ್ಯಕ್ಷ ಗೋಟಬಯ ರಾಜಪಕ್ಸ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಸಿಂಗಾಪುರ ತಲುಪಿರುವ ಅವರು ಇ-ಮೇಲ್ ಮೂಲಕ ತ್ಯಾಗ ಪತ್ರ ಕಳುಹಿಸಿಕೊಟ್ಟಿದ್ದಾರೆಂದು ಶ್ರೀಲಂಕಾ ಸಂಸತ್ ಸ್ಪೀಕರ್ ಮಹಿಂದಯಾಪ ಅಭೆಯ ವರ್ದೆನಾ ತಿಳಿಸಿದ್ದಾರೆ.
ಅದು ಕಾನೂನುಬದ್ಧವಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ. ಮೂಲಗಳ ಪ್ರಕಾರ ಸ್ಪೀಕರ್ ಮಹಿಂದ ರಾಜೀನಾಮೆ ನೀಡಲೇಬೇಕು ಎಂದು ಖಡಕ್ ಆಗಿ ತಾಕೀತು ಮಾಡಿದ್ದರಿಂದ ಗೋಟಬಯ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಅದಕ್ಕೆ ಪೂರಕವಾಗಿ ಮಾಲ್ಡೀವ್ಸ್ ಸಂಸತ್ ಸ್ಪೀಕರ್ ಮೊಹಮ್ಮದ್ ನಶೀದ್ ಕೂಡ ಲಂಕೆಯ ಅಧ್ಯಕ್ಷ ಸ್ಥಾನಕ್ಕೆ ಗೋಟಬಯ ರಾಜೀನಾಮೆ ನೀಡಿ ದ್ದಾರೆಂದು ತಿಳಿಸಿದ್ದು ಮಹತ್ವ ಪಡೆದಿದೆ. ಅವರು ಗೋಟಬಯ ಪರಾರಿಗೆ ಪ್ರಧಾನ ಸೂತ್ರಧಾರ.
ನಿವಾಸ ತೆರವು: ಜು. 9ರಿಂದ ಅಧ್ಯಕ್ಷರ, ಪ್ರಧಾನಿ ರೆನಿಲ್ ವಿಕ್ರಮ ಸಿಂಘೆ ಅವರ ಮನೆಯಲ್ಲಿ ಬೀಡುಬಿಟ್ಟಿದ್ದ ಪ್ರತಿಭಟನಕಾರರು ತಮ್ಮ ತಮ್ಮ ಮನೆಗೆ ತೆರಳಲಾರಂಭಿಸಿದ್ದಾರೆ. ಪ್ರಧಾನಿ ಕಚೇರಿ ಸೇರಿ ಹಲವು ಸರಕಾರಿ ಕಚೇರಿಗಳನ್ನೂ ತೆರವು ಗೊಳಿಸಲು ಅವರು ನಿರ್ಧರಿಸಿದ್ದಾರೆ. ಶಾಂತಿಯುತ ವಾಗಿ ಪ್ರತಿಭಟನೆ ಮುಂದುವರಿಸಿ ನಮ್ಮ ಗುರಿ ಸಾಧಿಸುತ್ತೇವೆ ಎಂದಿದ್ದಾರೆ ಪ್ರತಿಭಟನಾಕಾರರು.
ಬಿಗಿ ಬಂದೋಬಸ್ತ್: ಈ ನಡುವೆ, ರಾಜಧಾನಿ ಕೊಲೊಂಬೋ ಸೇರಿ ದೇಶದ ಪ್ರಮುಖ ನಗರಗಳಲ್ಲಿ ಭದ್ರತೆ ಉಸ್ತುವಾರಿಯನ್ನು ಸೇನೆ ಕೈಗೆತ್ತಿಕೊಂಡಿದೆ. ಸಂಸತ್ ಭವನಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ.
ಸಿಂಗಾಪುರದಿಂದ ಅಮೆರಿಕ? :
ದೇಶಕ್ಕೆ ಆಗಮಿಸಿರುವ ಗೋಟಬಯ ಅವರ ಖಾಸಗಿ ಭೇಟಿಗೆ ಮಾತ್ರ ಅವಕಾಶ ನೀಡಲಾಗಿದೆ. ಸರಕಾರದ ಮಟ್ಟದಲ್ಲಿ ಸ್ವಾಗತ ನೀಡಲಾಗುವುದಿಲ್ಲ ಎಂದು ಸಿಂಗಾಪುರ ಸರಕಾರ ಪ್ರಕಟಿಸಿದೆ. ಸೌದಿ ಅರೇಬಿಯಾದ ವಿಮಾನದಲ್ಲಿ ಚಾಂಗಿ ವಿಮಾನ ನಿಲ್ದಾಣಕ್ಕೆ ಅವರು ಆಗಮಿಸಿದ್ದಾರೆ. ಸಿಂಗಾಪುರದಿಂದ ಅಮೆರಿಕಕ್ಕೆ ತೆರಳಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.