Advertisement

ವಿಶ್ವ ಮಾನವನೆಡೆಗೆ ಒಯ್ಯುವ ಶಿಕ್ಷಣ ಸಿಗಲಿ: ಭೀಮೇಶ್ವರ ಜೋಶಿ

02:38 PM Apr 16, 2018 | Team Udayavani |

ಆಲಂಕಾರು: ಯಾಂತ್ರಿಕ ಬದುಕಿಗೆ ಪ್ರೇರಣೆ ನೀಡುವ ಯಂತ್ರಮಾನವನೆಡೆಗೆ ಸಾಗುವ ಶಿಕ್ಷಣದಿಂದ ದೂರ ಸರಿದು ವಿಶ್ವ ಮಾನವನೆಡೆಗೆ ಕೊಂಡೊಯ್ಯುವ ಶಿಕ್ಷಣ ಬೇಕಾಗಿದೆ ಎಂದು ಹೊರನಾಡು ಅನ್ನ ಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ| ಜಿ. ಭೀಮೇಶ್ವರ ಜೋಶಿ ನುಡಿದರು.

Advertisement

ಆಲಂಕಾರು ಶ್ರೀ ಭಾರತೀ ಶಾಲಾ ರಜತ ಮಹೋತ್ಸವ ಸಮಿತಿ ವತಿಯಿಂದ ರಜತ ಸಂಭ್ರಮದ ಹಿನ್ನೆಲೆಯಲ್ಲಿ ನಿರ್ಮಾಣವಾಗಲಿರುವ ಕಟ್ಟಡಗಳ ಕಾಮಗಾರಿಗಳಿಗೆ ಶಿಲ್ಯಾಸ ನೆರವೇರಿಸಿ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಬದಲಾವಣೆಯ ಯುಗದಲ್ಲಿದ್ದೇವೆ. ಬದಲಾವಣೆ ಜಗದ ನಿಯಮವಾದರೂ ನಾವು ನಮ್ಮ ಹಿರಿಯರು ಪಾಲಿಸಿದ ಮೂಲ ತಣ್ತೀವನ್ನು ದೂರವಿಟ್ಟು ಬದಲಾವಣೆ ಆಗುವುದರಿಂದ ಸಮಾಜಕ್ಕೆ ಅಪಾಯವಿದೆ. ನಮ್ಮಲ್ಲಿ ಶಿಕ್ಷಣಕ್ಕೆ ಕೊರತೆಯಿಲ್ಲ. ಆದರೆ ಅದು ಉದ್ಯೋಗ ಹಾಗೂ ವ್ಯಾವಹಾರಿಕ ಚಿಂತನೆಯಿಂದ ಮಾತ್ರ ಕೂಡಿದೆ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣದ ಕೊರತೆ ಎಲ್ಲೆಡೆ ಕಾಣುತ್ತಿದೆ. ಇಂತಹ ಕಾಲಘಟ್ಟದಲ್ಲಿ ಭಾರತೀಯ ಸಂಸ್ಕೃತಿ ಆಧಾರಿತ ಶಿಕ್ಷಣ ನೀಡುವ ಭಾರತೀ ಶಾಲೆಯಂತಹ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದರು.

ವಿಡಿಯೋ ಬಿಡುಗಡೆ
ಶ್ರೀ ಭಾರತೀ ಶಾಲೆ ನಡೆದು ಬಂದ ದಾರಿ ವಿಡಿಯೋ ಬಿಡುಗಡೆಗೊಳಿಸಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೃಷ್ಣ ಭಟ್‌ ಕೊಂಕೋಡಿ ಮಾತನಾಡಿ, ಮಾತೃಭಾಷೆಯಲ್ಲಿ ಹಾಗೂ ಸ್ವಂತ ಊರಲ್ಲಿ ಮಾತ್ರ ಮಕ್ಕಳಿಗೆ ಒತ್ತಡ ರಹಿತವಾಗಿ ಶಿಕ್ಷಣ ದೊರೆಯುತ್ತದೆ. ಉತ್ತಮ ಸಂಸ್ಕಾರ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ಪಂಚಮುಖಿ  ಶಿಕ್ಷಣದತ್ತ ಹೆತ್ತವರು ಒಲವು ತೋರಿಸುತ್ತಿದ್ದಾರೆ ಎಂದರು. 

ಶಾಲೆಯ ಅನ್ನಪೂರ್ಣ ಪಾಕಶಾಲೆ ಕೊಠಡಿಗೆ ಅನುದಾನ ನೀಡುವಂತೆ ಮನವಿ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ರಾಮಚಂದ್ರ ಭಟ್‌ ಕೂಡೂರು ಕಟ್ಟಡ ನಿಧಿಗೆ ಒಂದು ಲಕ್ಷ ರೂ. ಚೆಕ್‌ ಹಸ್ತಾಂತರಿಸಿದರು. ರಜತ ಸಮಿತಿಯ ಗೌರವ ಉಪಾಧ್ಯಕ್ಷ ಎಸ್‌.ಕೆ. ಆನಂದ ಮಾತನಾಡಿದರು. ಶಾಲಾ ಸಂಚಾಲಕ ಈಶ್ವರ ಗೌಡ ಪಜ್ಜಡ್ಕ, ರಜತಮಹೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣ ಕುಮಾರ್‌ ಅತ್ರಿಜಾಲ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಭಾರತೀ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಡಾ| ಸುರೇಶ್‌ ಕುಮಾರ್‌ ಕೂಡೂರು ಸ್ವಾಗತಿಸಿದರು. ರಜತ ಸಮಿತಿಯ ಕಾರ್ಯದರ್ಶಿ ಪ್ರವೀಣ್‌ ಆಳ್ವ ವಂದಿಸಿದರು. ಶಿಕ್ಷಕ ಚಂದ್ರಹಾಸ ಕೆ.ಸಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next