ಹುಬ್ಬಳ್ಳಿ: ಅಧಿಕಾರ ಶಾಶ್ವತ ಅಲ್ಲ.ಆದರೆ ಮೀಸಲು ಹೆಚ್ಚಳ ಮತ್ತು ಒಳ ಮೀಸಲಾತಿ ಮೂಲಕ ನಿಮ್ಮ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದೇನೆ. ನೋವುಂಡ ಸಮುದಾಯಕ್ಕೆ ನ್ಯಾಯ, ಅವಕಾಶ ಒದಗಿಸುವ ಸಣ್ಣ ಕೆಲಸ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೀಸಲು ಹೆಚ್ಚಳ, ಒಳಮೀಸಲಾತಿ ನೀಡಿಕೆ ನಿಟ್ಟಿನಲ್ಲಿ ಇಲ್ಲಿನ ನೆಹರು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳ, ಒಳಮೀಸಲು ಅಸಾಧ್ಯ ಎಂದಿದ್ದರು ಅದನ್ನು ಸಾಧ್ಯವಾಗಿ ತೋರಿಸಿದ್ದೇನೆ. 70 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಗೆ ಯಾಕೆ ಸಾಶ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.
ತಾಕತ್ತು ಇದ್ದರೆ ಮೀಸಲು ಹೆಚ್ಚಳ, ಒಳ ಮೀಸಲು ಕುರಿತಾಗಿ ತನ್ನ ನಿಲುವೇನು ಎಂಬುದನ್ನು ಕಾಂಗ್ರೆಸ್ ಸ್ಪಷ್ಟ ಪಡಿಸಬೇಕೆಂದು ಒತ್ತಾಯಿಸಿದರು.
ಯಾರಿಗೂ ಅನ್ಯಾಯವಾಗದಂತೆ ಮೀಸಲು ಹೆಚ್ಚಳ, ಒಳ ಮೀಸಲು ನೀಡಿದ್ದೇನೆ. ಬಂಜಾರ, ಭೋವಿ ಸೇರಿ ಆರು ಸಮಾಜಗಳನ್ನು ಮೀಸಲು ಪಟ್ಟಿಯಿಂದ ತೆಗೆಯುತ್ತಾರೆ ಎಂಬ ಕಾಂಗ್ರೆಸ್ ಅಪ್ರಚಾರ ನಂಬಬೇಡಿ ಎಂದು ಸಮಾಜಗಳಿಗೆ ಮನವಿ ಮಾಡಿದರಲ್ಲದೆ, ಮೀಸಲು ತೆಗೆಯದ ರೀತಿನಲ್ಲಿ ಆದೇಶ ಹೊರಡಿಸಿದ ಪ್ರತಿಯನ್ನು ಪ್ರದರ್ಶಿಸಿದರು.
ದಲಿತರಿಗೆ 1 ಕೋಟಿ ರೂ.ವರೆಗಿನ ಕಾಮಗಾರಿಗಳನ್ನು ಗುತ್ತಿಗೆ ನೀಡಲು ಕ್ರಮ ಕೈಗೊಂಡಿದ್ದೇನೆ. ಇಲ್ಲಿವರೆಗೆ ದಲಿತರನ್ನು ಮತಬ್ಯಾಂಕ್ ಮಾಡಿಕೊಂಡು ಅಧಿಕಾರ ಅನುಭವಿಸಿದ ಕಾಂಗ್ರೆಸ್ ಸಮುದಾಯಕ್ಕೆ ಅನ್ಯಾಯ, ವಂಚನೆ ಮಾಡಿದ್ದು, ಕಾಂಗ್ರೆಸ್ ಬಗ್ಗೆ ಎಚ್ಚರವಾಗಿರಬೇಕು, ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಂಕರ ಪಾಟೀಲ ಮುನೇನಕೊಪ್ಪ, ಸಂಸದ ರಮೇಶ ಜಿಗಜಿಣಗಿ, ಮುನಿಸ್ವಾಮಿ, ಹಲವು ಶಾಸಕರು, ಮುಖಂಡರ ಇದ್ದರು. ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರನ್ನು ಸನ್ಮಾನಿಸಲಾಯಿತು.