ಬಾಲಿ: ಕೊರೊನಾಮುಕ್ತವಾಗುವತ್ತ ಜಗತ್ತು ಹೆಜ್ಜೆಯಿಟ್ಟಿದೆ. ಈಗ ಅರ್ಥವ್ಯವಸ್ಥೆಯನ್ನು ಹಳಿಗೆ ತರುವುದೇ ದೇಶಗಳ ಗುರಿ. ಅದಕ್ಕೆ ಇಂಡೋನೇಷ್ಯಾ ವಿಶೇಷವಾದ ಕ್ರಮ ತೆಗೆದುಕೊಂಡಿದೆ.
ತನ್ನ ದೇಶದ ಬಾಲಿ ಪ್ರಾಂತ್ಯವನ್ನೇ ಕೇಂದ್ರವಾಗಿಟ್ಟುಕೊಂಡು ವಿದೇಶಿ ಪ್ರವಾಸಿಗಳನ್ನು ಸೆಳೆಯಲು ಒಂದು ವಿಶೇಷ ವೀಸಾ ಘೋಷಣೆ ಮಾಡಿದೆ.
5 ವರ್ಷಗಳ ಅವಧಿಗೆ, 10 ವರ್ಷಗಳ ಅವಧಿಗೆ “ಸೆಕೆಂಡ್ ಹೋಮ್’ (2ನೇ ಮನೆ) ವೀಸಾವನ್ನು ಪ್ರಕಟಿಸಿದೆ. ಇದು ಕ್ರಿಸ್ಮಸ್ ಹೊತ್ತಿಗೆ ಜಾರಿಯಾಗಲಿದೆ. ಹಾಗಂತ ಎಲ್ಲರೂ ಇದಕ್ಕೆ ಅರ್ಜಿ ಹಾಕಲು ಸಾಧ್ಯವಿಲ್ಲ. ನಿಮ್ಮ ಖಾತೆಯಲ್ಲಿ ಕನಿಷ್ಠ 1 ಕೋಟಿ ರೂ. ಇರಲೇಬೇಕು!
ಅಂತಹವರು ಅರ್ಜಿ ಹಾಕಿದರೆ ಬಾಲಿಯ ಸುಂದರ ದ್ವೀಪಗಳಲ್ಲಿ, ಸಮುದ್ರತೀರಗಳಲ್ಲಿ ನಿಮಗೆ ಎಷ್ಟು ಬೇಕೋ ಅಷ್ಟು ದಿನಗಳು ವಾಸ ಮಾಡಬಹುದು. ಅಲ್ಲೇ ಇದ್ದುಕೊಂಡು ಕಚೇರಿ ಕೆಲಸಗಳನ್ನೂ ಮಾಡಬಹುದು!
Related Articles
ಅರ್ಥವಾಗಲಿಲ್ಲವಾ? ಕೊರೊನಾನಂತರ ಎಲ್ಲ ಕಡೆ ಮನೆಯಿಂದಲೇ ಕೆಲಸ ಪದ್ಧತಿ ಶುರುವಾಗಿದೆಯಲ್ಲ, ಅಂತಹವರು ಬೇರೆಬೇರೆ ದೇಶಗಳಿಗೆ, ಪ್ರವಾಸಿ ತಾಣಗಳಿಗೆ ಹೋಗಿ, ಅಲ್ಲಿಂದಲೇ ಕೆಲಸ ಮಾಡಲು ಬಯಸುತ್ತಾರೆ. ಇಂತಹ ಡಿಜಿಟಲ್ ಅಲೆಮಾರಿಗಳೇ ಇಂಡೋನೇಷ್ಯಾ ಸರ್ಕಾರದ ನೇರ ಗುರಿ!