Advertisement

ಆಗ ಸೆನ್ಸ್‌; ಈಗ ಲೆನ್ಸ್‌

06:00 AM Jun 22, 2018 | |

ಸಾಮಾನ್ಯವಾಗಿ ಜಗ್ಗೇಶ್‌ ಅವರು ಯಾವುದಾದರೂ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋದರೆ, ಹೊಸಬರಿಗೆ ಶುಭ ಹಾರೈಸುವ ಜೊತೆಗೆ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಈ ಬಾರಿಯೂ ಅದೇ ಆಯಿತು.

Advertisement

“ಗೋಸಿ ಗ್ಯಾಂಗ್‌’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮಕ್ಕೆ ಜಗ್ಗೇಶ್‌, ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅತಿಥಿಯಾಗಿ ಬಂದಿದ್ದರು. ಹಂಸಲೇಖಾ ಅವರನ್ನು ನೋಡಿದ ಜಗ್ಗೇಶ್‌, ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದ ಸಂದರ್ಭವನ್ನು ತಮ್ಮದೇ ಶೈಲಿಯಲ್ಲಿ ಹೇಳುತ್ತಾ, ನಗೆಬುಗ್ಗೆಗೆ ಕಾರಣರಾದರು. ಜೊತೆಗೆ “ಗೋಸಿ ಗ್ಯಾಂಗ್‌’ ಸಿನಿಮಾಕ್ಕೆ ಶುಭಕೋರಿದರು.

“ಈಗ ಸಿನಿಮಾ ಟ್ರೆಂಡ್‌ ಬದಲಾಗಿದೆ. ನಮ್ಮ ಕಾಲದಲ್ಲಿ ಚಿತ್ರಗಳನ್ನು ಕುಟುಂಬ ಸಮೇತರಾಗಿ ನೋಡುತ್ತಿದ್ದರು. ಈಗ ಕಾಲ ಬದಲಾಗಿದೆ.

24-60ರ ವಯೋಮಾನದವರು ಹೆಚ್ಚಾಗಿ ಸಿನಿಮಾ ನೋಡುತ್ತಿರುವುದರಿಂದ ಈಗ ಅವರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಬೇಕಾಗಿದೆ. ಕೇವಲ ಸಿನಿಮಾ ನಿರ್ಮಾಣ ಮಾಡಿದರೆ ಸಾಲದು. ಅದಕ್ಕೆ ತಕ್ಕಂತೆ ಪ್ರಚಾರವೂ ಬೇಕು. ನನಗೆ ಚಿತ್ರರಂಗ ಎಲ್ಲವನ್ನು ನೀಡಿದೆ. ಅದರಂತೆ ಚಿತ್ರರಂಗಕ್ಕೆ ಬರುವ ಹೊಸಬರನ್ನು ಪ್ರೋತ್ಸಾಹಿಸಿ’ ಎಂದು “ಗೋಸಿ ಗ್ಯಾಂಗ್‌’ಗೆ ಶುಭಕೋರಿದರು ಜಗ್ಗೇಶ್‌.

ಚಿತ್ರದ ಆಡಿಯೋ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, “ಕಲಾವಿದರಿಗೆ ಬದಟಛಿತೆ ಇರಬೇಕು. ಆಗ ಕಲೆಗೆ ಬೆಲೆ ಸಿಗುತ್ತದೆ. ಸಿನಿಮಾ ಪ್ರೀತಿಯಿಂದ ಮಾತ್ರ ಇದು ಸಾಧ್ಯ ಎಂದ ಅವರು, ಹಿಂದೆ ನಾವು ಸೆನ್ಸ್‌ ಮೂಲಕ ಕೆಲಸ ಮಾಡುತ್ತಿದ್ದರೆ ಈಗಿನವರು ಲೆನ್ಸ್‌ ಮೂಲಕ ಹೋಗುತ್ತಾರೆ. “ಗೋಸಿ ಗ್ಯಾಂಗ್‌’ ಸಿನಿಮಾಕ್ಕೆ ಒಳ್ಳೆಯದಾಗಲಿ, ಜನರಿಗೆ ಗೋ ಸೀ ಸಿನಿಮಾ ಆಗಲಿ ಎಂದು ಶುಭಕೋರಿದರು.

Advertisement

“ಗೋಸಿ ಗ್ಯಾಂಗ್‌’ ಚಿತ್ರವನ್ನು ರಾಜು ದೇವಸಂದ್ರ ನಿರ್ದೇಶಿಸಿದ್ದು, ನಿಘಂಟಿನಲ್ಲಿರುವ ಪದವನ್ನು ಬಳಸಿ ಟೈಟಲ್‌ ಇಡಲಾಗಿದೆಯಂತೆ. ಎಲ್ಲಾ ಓಕೆ “ಗೋಸಿ’ ಎಂದರೇನು, ಗೋಸಿ ಹುಡುಗರು ಎಂದು ಯಾಕೆ ಕರೆಯುತ್ತಾರೆಂಬ ಪ್ರಶ್ನೆಗೆ ಉತ್ತರ ಬೇಕಾದರೆ ಸಿನಿಮಾ ನೋಡಬೇಕು ಎಂಬುದು ನಿದೇಶಕರ ಮಾತು.

ಅಂದಹಾಗೆ, ಇದೊಂದು ಥ್ರಿಲ್ಲರ್‌ ಸಿನಿಮಾವಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಅವರದು. ಈ ಚಿತ್ರವನ್ನು ಕೆ.ಶಿವಕುಮಾರ್‌ ನಿರ್ಮಿಸಿದ್ದು, ಮಗನ ಸಿನಿಮಾ ಆಸಕ್ತಿಗಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಅವರದೇ ಕಥೆ ಇದೆ.

ಚಿತ್ರದಲ್ಲಿ ನಿರ್ಮಾಪಕರ ಪುತ್ರ ಅಜೇಯ್‌ ಕಾರ್ತಿಕ್‌ ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು. ಚಿತ್ರದಲ್ಲಿ ಯತಿರಾಜ್‌ ಜಗ್ಗೇಶ್‌, ಅನುಷಾ ರೈ, ಮೋನಿಕಾ,ಸೋನು ಪಾಟೀಲ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next