ಕೊಂಡ್ಲಹಳ್ಳಿ: ಕೊಂಡ್ಲಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಈರಣ್ಣ ಮರದ ಕ್ಷೇತ್ರ ಹಾಗೂ ಬಿ.ಜಿ. ಕೆರೆ ಗ್ರಾಪಂ ವ್ಯಾಪ್ತಿಯ ಮುತ್ತಿಗಾರಹಳ್ಳಿ ಗ್ರಾಮದ ಕೆರೆಯಂಗಳದಲ್ಲಿ ಗೋಶಾಲೆ ಆರಂಭಿಸಲಾಗಿದೆ. ಆದರೆ ಈ ಗೋಶಾಲೆಗಳ ನಿರ್ವಹಣೆಗೆ ನೇಮಿಸಲಾಗಿದ್ದ ಕೂಲಿ ಕಾರ್ಮಿಕರಿಗೆ ಕಳೆದ ಐದು ತಿಂಗಳುಗಳಿಂದ ಕೂಲಿ ಹಣವನ್ನೇ ಪಾವತಿ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಗೋಶಾಲೆಗಳಲ್ಲಿ ದನ ಕರುಗಳಿಗೆ ಮೇವು ವಿತರಿಸಲು, ಜಾನುವಾರುಗಳ ಸಗಣಿ ತೆಗೆಯುವುದು ಇತರೆ ಕೆಲಸಕ್ಕಾಗಿ ಈರಣ್ಣಮರದ ಗೋಶಾಲೆಯಲ್ಲಿ 14 ಹಾಗೂ ಮುತ್ತಿಗಾರಹಳ್ಳಿ ಗೋಶಾಲೆಯಲ್ಲಿ 17 ಕೂಲಿ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿತ್ತು. ಈ ಕೆಲಸಗಾರರಿಗೆ ಐದು ತಿಂಗಳುಗಳಿಂದ ಕೂಲಿಯನ್ನೇ ಪಾವತಿ ಮಾಡಿಲ್ಲ. ಹಾಗಾಗಿ ಕಳೆದ ಜುಲೈ ತಿಂಗಳ ಮಧ್ಯಭಾಗದಿಂದ ಈ ಕೆಲಸಗಾರರು ಕೆಲಸಕ್ಕೆ ಬರುತ್ತಿಲ್ಲ. ಕೂಲಿ ಹಣಕ್ಕಾಗಿ ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್‌ಗೆ ಅಲೆದಾಡಿದರೂ ಪ್ರಯೋಜನವಾಗುತ್ತಿಲ್ಲ.
ಮುತ್ತಿಗಾರಹಳ್ಳಿ ಹಾಗು ಈರಣ್ಣಮರ ಗೋಶಾಲೆಗಳಲ್ಲಿ ಕೆಲಸಗಾರರು ಬಾರದೇ ಇರುವುದರಿಂದ ಜಾನುವಾರುಗಳ ಕಾಲ ಬುಡದಲ್ಲೇ ಸಗಣಿ, ಕಸ, ಮೇವು ಬಿದ್ದು ಸ್ವಚ್ಛತೆ ಮರೀಚಿಕೆಯಾಗಿದೆ. ಎಲ್ಲೆಂದರಲ್ಲಿ ಸಗಣಿ ಬಿದ್ದು
ವ್ಯರ್ಥವಾಗುತ್ತಿದೆ. ಕೆಲಸಗಾರರಿಂದ ಸಗಣಿಯನ್ನು ತೆಗೆಸಿ ಹಾಕಿದ್ದರೆ ಹೆಚ್ಚಿನ ಸಗಣಿ ಸಂಗ್ರಹವಾಗುತ್ತದೆ. ಸಗಣಿ ಹರಾಜಾಗಿದ್ದರೆ ಸರ್ಕಾರಕ್ಕೆ ಆದಾಯವೂ ಬರುತ್ತಿತ್ತು. ಕೂಲಿ ಕಾರ್ಮಿಕರು ಇಲ್ಲದೇ ಇರುವುದರಿಂದ ರೈತರೇ ತಮ್ಮ ಜಾನುವಾರುಗಳಿಗೆ ಮೇವು ಹಾಕಬೇಕಾಗಿದೆ.
ಯಾವುದೇ ಕೂಲಿ ಕೆಲಸಕ್ಕೆ ಹೋದರೂ ವಾರಕ್ಕೊಮ್ಮೆಯಾದರೂ ಕೂಲಿ ಬಾಬ್ತು ಸಿಗುತ್ತದೆ. ಗೋಶಾಲೆಯಲ್ಲಿ ಐದು ತಿಂಗಳಾದರೂ ಕೂಲಿ ಹಣ ಪಾವತಿಸದಿದ್ದರೆ ಕಾರ್ಮಿಕರ ಪಾಡೇನು ಎನ್ನುವ ಪ್ರಶ್ನೆ ಉದ್ಭವಿಸಿದೆ. ಸಂಬಂಧಿಸಿದ ಅಧಿಕಾರಿಗಳು ಕೂಲಿ ಹಣ ನೀಡಲು ಕೂಡಲೇ ಗಮನ ನೀಡಬೇಕಿದೆ.
•ಕೊಂಡ್ಲಹಳ್ಳಿ ರಾಮಚಂದ್ರಪ್ಪ