Advertisement

ಗೋರಿಗುಡ್ಡೆ: ನಿತ್ಯ ಅಪಘಾತ; ಸುರಕ್ಷಿತ ಸಂಚಾರ ಸವಾಲು

08:44 PM Aug 21, 2021 | Team Udayavani |

ಮಹಾನಗರ: ರಾಷ್ಟ್ರೀಯ ಹೆದ್ದಾರಿ 66ರ ಪಂಪ್‌ವೆಲ್‌-ಎಕ್ಕೂರು ನಡುವೆ ಪ್ರತಿನಿತ್ಯವೆಂಬಂತೆ ಅಪಘಾತ ಗಳು ಸಂಭವಿಸಿತ್ತಿದ್ದು ಸರ್ವಿಸ್‌ ರಸ್ತೆ ಇಲ್ಲದಿ ರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಸರ್ವಿಸ್‌ ರಸ್ತೆ ನಿರ್ಮಾಣಕ್ಕೆ ಗುಡ್ಡ ವೊಂದು ಅಡ್ಡವಾಗಿ ನಿಂತಿದೆ.

Advertisement

ಪಂಪ್‌ವೆಲ್‌ನಿಂದ ಎಕ್ಕೂರು ಕಡೆಗೆ ಸುಮಾರು ಒಂದೂವರೆ ಕಿ.ಮೀ. ಉದ್ದಕ್ಕೆ ಮಾತ್ರ ಸರ್ವಿಸ್‌ ರಸ್ತೆ ನಿರ್ಮಾಣವಾಗಿದೆ. ಗುಡ್ಡ ಇರುವುದರಿಂದ ಸರ್ವಿಸ್‌ ರಸ್ತೆ ಯನ್ನು ಅಲ್ಲಿಗೆ ಸ್ಥಗಿತಗೊಳಿಸಲಾಗಿದೆ. ಪರಿಣಾಮವಾಗಿ ಈ ಪ್ರದೇಶ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ.

ಗೋರಿಗುಡ್ಡೆ ಜಂಕ್ಷನ್‌ ಬಳಿ ಹೆದ್ದಾರಿ ಅಗಲವೇ ಕಿರಿದಾಗಿದೆ. ಅಲ್ಲದೆ ಇಲ್ಲಿ ಹೆದ್ದಾರಿ ನಿರ್ಮಾಣ ಸಮರ್ಪಕವಾಗಿ ನಡೆದಿಲ್ಲ. ಇಲ್ಲಿ 4-5 ಕಡೆಗಳಿಂದ ವಾಹನಗಳ ಬಂದು ಸೇರುತ್ತವೆ. ವಿರುದ್ಧ ದಿಕ್ಕಿನಿಂದಲೂ ವಾಹನಗಳು ಮುನ್ನುಗ್ಗುತ್ತವೆ. ಪಂಪ್‌ವೆಲ್‌ ಕಡೆಯಿಂದ ಎಕ್ಕೂರು ಕಡೆಗೆ ಸಾಗುವ ಸರ್ವಿಸ್‌ ರಸ್ತೆ ಗೋರಿಗುಡ್ಡೆಗಿಂತ ಮೊದಲೇ ಅರ್ಧಕ್ಕೆ ಸ್ಥಗಿತಗೊಂಡಿದೆ. ಈ ಸರ್ವಿಸ್‌ ರಸ್ತೆಯಿಂದ ಹೆದ್ದಾರಿ ಪ್ರವೇಶಿಸುವ ಸ್ಥಳ ಅಪಾಯಕಾರಿಯಾಗಿದೆ. ಸರ್ವಿಸ್‌ ರಸ್ತೆ ಕೆಳಮಟ್ಟದಲ್ಲಿದ್ದು, ಅಲ್ಲಿಂದ ಹೆದ್ದಾರಿ ಪ್ರವೇಶಿಸುವಾಗ ವಾಹನಗಳು ವೇಗ ಹೆಚ್ಚಿಸಿ ಕೊಳ್ಳುತ್ತವೆ.

ಇತ್ತ ಪಂಪ್‌ವೆಲ್‌ ಕಡೆಯಿಂದ ಹೆದ್ದಾರಿಯಲ್ಲಿ ಬರುವ ವಾಹನಗಳು ಕೂಡ ಸಹಜವಾಗಿಯೇ ವೇಗವಾಗಿ ಧಾವಿಸುತ್ತವೆ. ಈ ಎರಡೂ ರಸ್ತೆಗಳು ಸಂಧಿಸುವ ಸ್ಥಳದಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಹೆದ್ದಾರಿಯಲ್ಲಿ ಬಂದು ಗೋರಿಗುಡ್ಡೆ, ನೆಕ್ಕರೆಮಾರ್‌, ಗುರುಪ್ರಸಾದ್‌ ಲೇನ್‌, ವೆಲೆನ್ಸಿಯಾ ಮೊದಲಾದ ಕಡೆಗಳಿಗೆ ಹೋಗುವವರು ಹೆದ್ದಾರಿಯ ಎಡ ಭಾಗಕ್ಕೆ ಬರುತ್ತಾರೆ. ಅತ್ತ ಸರ್ವಿಸ್‌ ರಸ್ತೆ ಯಿಂದ ಹೆದ್ದಾರಿ ಪ್ರವೇಶಿಸುವವರು ಏಕಾಏಕಿ ಮೇಲೆ ಬಂದು ಹೆದ್ದಾರಿಯ ಎಡಭಾಗದಲ್ಲೇ ಸಂಚರಿಸುತ್ತಾರೆ. ಹಾಗಾಗಿ ಈ ಸ್ಥಳ ಭಾರೀ ಅಪಾಯಕಾರಿಯಾಗಿದೆ. ಹೆದ್ದಾರಿಯ ಮೇಲೆಯೇ ಗುಡ್ಡವಿದ್ದು ಇದು ಕುಸಿಯುವ ಭೀತಿಯೂ ಇದೆ.

ನಗರ ಪ್ರವೇಶಿಸುವ ಸ್ಥಳವೂ ಅಪಾಯಕಾರಿ

Advertisement

ಎಕ್ಕೂರು ಕಡೆಯಿಂದ ಹೆದ್ದಾರಿಯಲ್ಲಿ ಬಂದು ಕಂಕನಾಡಿ ಮೂಲಕ ಸರ್ವಿಸ್‌ ರಸ್ತೆಯಲ್ಲಿ ನಗರ ಸಂಪರ್ಕಿಸಲು ಇರುವ ಜಾಗ ಭಾರೀ ಅಪಾಯಕಾರಿಯಾಗಿದೆ. ಹೆದ್ದಾರಿಯಲ್ಲಿ ಸಾಗುವ ಹೊಸಬರಿಗೆ ಈ ಸ್ಥಳದಲ್ಲಿ ಸರ್ವಿಸ್‌ ರಸ್ತೆಗೆ ಸಂಪರ್ಕ ಇದೆ ಎಂಬುದು ಗೊತ್ತಾಗುವುದಿಲ್ಲ. ಸರ್ವಿಸ್‌ ರಸ್ತೆ ಕಂಡಾಗ ಹಠಾತ್‌ ಬ್ರೇಕ್‌ ಹಾಕುತ್ತಾರೆ. ಇದರಿಂದಾಗಿ ಹಿಂದಿನಿಂದ ಬರುವ ವಾಹನಗಳು ಢಿಕ್ಕಿ ಹೊಡೆಯುತ್ತಿವೆ. ಇಲ್ಲಿ  ಎಕ್ಕೂರು ಕಡೆಯಿಂದ ಬರುವಾಗ ಸಾಕಷ್ಟು ಮುಂಚಿತವಾಗಿಯೇ ಸ್ಪಷ್ಟವಾಗಿ ಕಾಣುವಂತೆ ಮಾರ್ಗಸೂಚಿಯನ್ನು ಅಳವಡಿಸಬೇಕು. ಅಗತ್ಯ ಎಚ್ಚರಿಕೆ ಫ‌ಲಕಗಳನ್ನು ಹಾಕಬೇಕು ಎಂಬುದು ಸ್ಥಳೀಯರ ಆಗ್ರಹ.

ಗೋರಿಗುಡ್ಡೆ ಪ್ರದೇಶದ ಗುಡ್ಡವನ್ನು ತೆರವುಗೊಳಿಸಿ ಸರ್ವಿಸ್‌ ರಸ್ತೆ ನಿರ್ಮಿಸುವ ಕಾಮಗಾರಿಗಾಗಿ ಈಗಾಗಲೇ ಗುಡ್ಡವನ್ನು ಹೆದ್ದಾರಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿದೆ. ಆದರೆ ಇದುವರೆಗೂ ಕಾಮಗಾರಿ ನಡೆಸಿಲ್ಲ. ಹಲವಾರು ಬಾರಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆ ದಾರರೊಂದಿಗೆೆ ಮಾತನಾಡಿ ಕೂಡಲೇ ಕಾಮಗಾರಿ ಆರಂಭಿಸುವಂತೆ ಸೂಚಿಸಿದ್ದೇನೆ.  –ಸಂದೀಪ್‌, ಸ್ಥಳೀಯ ಕಾರ್ಪೋರೆಟರ್‌

ಗೋರಿಗುಡ್ಡೆ ಪ್ರದೇಶದಲ್ಲಿ ವಾಹನಗಳ ಸುರಕ್ಷಿತ ಸಂಚಾರ ಕಷ್ಟವಾಗಿದೆ. ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಸರ್ವಿಸ್‌ ರಸ್ತೆ ನಿರ್ಮಿಸಿದರೆ ಸಮಸ್ಯೆಗೆ ಪರಿಹಾರ ದೊರೆಯಬಹುದು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು.ಅನುಪಮಾ, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next