Advertisement

ವೈಭವದ ಶಂಭುಲಿಂಗೇಶ್ವರ ಸ್ವಾಮಿ ಬಂಡಿ ಉತ್ಸವ

12:58 PM Mar 27, 2019 | Team Udayavani |

ಪಾಂಡವಪುರ: ತಾಲೂಕಿನ ಜಾಗಶೆಟ್ಟಹಳ್ಳಿ ಹಾಗೂ ಮಂಡಿಬೆಟ್ಟಹಳ್ಳಿಯ ಶ್ರೀಶಂಭುಲಿಂಗೇಶ್ವರ ಸ್ವಾಮಿ ಬಂಡಿ ಉತ್ಸವ ಭಕ್ತರು ಸಂಭ್ರದಿಂದ ನೆರವೇರಿಸಿದರು.

Advertisement

ಜಾಗಶೆಟ್ಟಹಳ್ಳಿ ಹಾಗೂ ಮಂಡಿಬೆಟ್ಟಹಳ್ಳಿ ಗ್ರಾಮಸ್ಥರು ಪುರಾತನ ಕಾಲದಿಂದಲೂ ಆಚರಣೆ ಮಾಡಿಕೊಂಡು ಬರುತ್ತಿರುವ ಶ್ರೀಶಂಭುಲಿಂಗೇಶ್ವರ ಸ್ವಾಮಿ ಬಂಡಿ ಉತ್ಸವದ ಅಂಗವಾಗಿ ಎರಡು ಗ್ರಾಮಗಳಲ್ಲಿ ಸಂಭ್ರಮ ಮನೆ ಮಾಡಿತ್ತು.

ಬಂಡಿ ಉತ್ಸವದ ಅಂಗವಾಗಿ 15 ದಿನಗಳ ಹಿಂದೆ ಎರಡು ಗ್ರಾಮದಲ್ಲಿ ಕರಕು ಹಾಕಲಾಗಿತ್ತು. ಬಂಡಿ ಉತ್ಸವದ ಹಿಂದಿನ ದಿನ ಭಾನುವಾರ ಬೆಳದಿಂಗಳ ಕುಣಿತ ನಡೆಯಿತು.

ಬಳಿಕ ಸೋಮವಾರ ರಾತ್ರಿ ಎರಡು ಗ್ರಾಮದಲ್ಲಿ ಶ್ರೀಶಂಭುಲಿಂಗೇಶ್ವರ ಹಾಗೂ ಕೋಡಿಲಿಂಗೇಶ್ವರ ದೇವರ ಉತ್ಸವ ನಡೆಯಿತು. ಮಂಗಳವಾರ ಮಂಡಿಬೆಟ್ಟಹಳ್ಳಿ ಹಾಗೂ ಜಾಗಶೆಟ್ಟಹಳ್ಳಿಯ ಗ್ರಾಮಗಳಿಂದ ಎರಡು ಬಂಡಿ ಉತ್ಸವ ನೆರವೇರಿಸಲಾಯಿತು.

ಬಂಡಿ ಉತ್ಸವ: ಉತ್ಸವದ ಅಂಗವಾಗಿ ಮೊದಲು ಮಂಡಿಬೆಟ್ಟಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರ ಬಂಡಿಗೆ ಪಟೇಲ್‌ ಪುಟ್ಟಬಸವಪ್ಪನವರ ಮಹದೇವುರವರ ಎತ್ತುಗಳನ್ನು ಕಟ್ಟಲಾಯಿತು. ಬಂಡಿ ಉತ್ಸವದ ಮೇಲೆ ಮಾದಪ್ಪನವರ ಮಗ ಕಿರಣ್‌ ಕುಳಿತು ಬಂಡಿ ಚಲಾಯಿಸಿದರು.

Advertisement

ಬಳಿಕ ಗ್ರಾಮದ ಬಸವೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಂಡಿ ಉತ್ಸವಕ್ಕೆ ಬೇಬಿ ಗ್ರಾಮದ ದುರ್ದಂಡೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿ ಚಾಲನೆ ನೀಡಿದರು.

ಆ ಬಳಿಕ ದೇವಸ್ಥಾನದ ಆವರಣದಲ್ಲಿ ಮೂರು ಸುತ್ತು ಬಂಡಿ ಉತ್ಸವ ನಡೆಯಿತು. ನಂತರ ಅಲ್ಲಿಂದ ಚಾಗಶೆಟ್ಟಹಳ್ಳಿ ಗ್ರಾಮಕ್ಕ ಹೊರಟಿತು. ಚಾಗಶೆಟ್ಟಹಳ್ಳಿ ಗ್ರಾಮದಲ್ಲಿ ಗಂಡುವಳಿ ಪಾಲು ಬಂಡಿಗೆ ಹೆಣ್ಣುವಳಿ ಪಾಲುದಾರರ ಎತ್ತುಗಳನ್ನು ಕಟ್ಟಲಾಯಿತು.

ಬಂಡಿ ಉತ್ಸವದ ಮೇಲೆ ಗ್ರಾಮದ ರಾಜೇಂದ್ರ ಕುಳಿತಿದ್ದರು. ಮಂಡಿಬೆಟ್ಟಹಳ್ಳಿ ಗ್ರಾಮದ ಬಂಡಿ ಬರುತ್ತಿದ್ದಂತೆಯೇ ಜಾಗಶೆಟ್ಟಹಳ್ಳಿ ಗ್ರಾಮದ ಬಂಡಿಯೂ ಬಂಡಿ ಉತ್ಸವದ ಹಿಂದೆ ಹೊರಟಿತು.

ಅಲ್ಲಿಂದ ಗ್ರಾಮದ ಹೊರವಲಯದಲ್ಲಿರುವ ಶ್ರೀಶಂಭುಲಿಂಗೇಶ್ವರಸ್ವಾಮಿ ದೇವಸ್ಥಾನಕ್ಕೆ ತೆರಳಿದವು. ಶ್ರೀಶಂಭುಲಿಂಗೇಶ್ವರ ಸ್ವಾಮಿ ದೇವಸ್ಥಾನದ ಸುತ್ತಲು ಪೂಜಾ ಕುಣಿತಗಳು ಮೂರು ಸುತ್ತು ಪ್ರದಕ್ಷಿಣೆ ಹಾಕಿದರು.

ಪ್ರದಕ್ಷಿಣೆಯಲ್ಲಿ ಅರಕೆ ಹೊತ್ತು ಬಾಯಿಬೀಗದ ಮಹಿಳೆಯರು ದೇವರ ಸುತ್ತ ಸುತ್ತುವ ಮೂಲಕ ಹರಕೆ ತೀರಿಸಿದರು. ಬಳಿಕ ಎರಡು ಗ್ರಾಮದ ಬಂಡಿಗಳು ಸಹ ದೇವಸ್ಥಾನದ ಸುತ್ತಲು ಮೂರು ಸುತ್ತು ಪ್ರದಕ್ಷಿಣೆ ಹಾಕಿದರು.

ಬಂಡಿಗಳನ್ನು ನಿಯಂತ್ರಿಸಲು ಬಂಡಿಯ ಸುತ್ತಲು ಯುವಕರು ನೆರೆದಿದ್ದರು. ಬಂಡಿ ಉತ್ಸವ ಹೋಗುವಾಗ ಭಕ್ತರು ಹರಹರ ಮಹದೇವ… ಹರಹರ ಮಹದೇವ ಎಂದು ಜೈಕಾರ ಕೂಗುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಬಳಿಕ ದೇವಸ್ಥಾನದ ಆವರಣದಲ್ಲಿ ಭಕ್ತರಿಂದ ರಂಗಕುಣಿತ ಪ್ರದರ್ಶನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next