ಮುಂಬಯಿ: ಗೋರೆಗಾಂವ್ ಪಶ್ಚಿಮದ ಮೋತಿಲಾಲ್ ನಗರದ ತುಳು-ಕನ್ನಡಿಗರ ಶ್ರೀ ಶಾಂತ ದುರ್ಗಾ ಚಾರಿಟೆಬಲ್ ಟ್ರಸ್ಟ್ ಸಂಚಾಲಕತ್ವದ ಶ್ರೀ ಶಾಂತ ದುರ್ಗಾ ದೇವಿ ಮಂದಿರದಲ್ಲಿ ವಾರ್ಷಿಕ ಶರನ್ನವರಾತ್ರಿ ಉತ್ಸವ ಸಂಭ್ರಮ ಸಡಗರದಿಂದ ನಡೆಯಿತು. ಸಾತ್‌ರಸ್ತಾ ಹಾಗೂ ಸುಂಕದಕಟ್ಟೆ ಶ್ರೀಅಂಬಿಕಾ ಅನ್ನಪೂರ್ಣೆàಶ್ವರಿ ಅಮ್ಮನವರ ಆರಾಧಕರಾಗಿದ್ದು, ದೈವಕ್ಯ ಶ್ರೀ ನಿರಂಜನ ಸ್ವಾಮಿಜಿ ಅವರ ಅನುಗ್ರಹ ಮತ್ತು ದೇವಸ್ಥಾನದ ಧರ್ಮಾಧಿಕಾರಿಶ್ರೀ ಶ್ಯಾಮನಂದ ಸ್ವಾಮೀಜಿ ಮುಂದಾಳುತ್ವದಲ್ಲಿ ಶರನ್ನವರಾತ್ರಿಯು ವಿಧಿವತ್ತಾಗಿ ಆಚರಿಸಲ್ಪಟ್ಟಿತು.
ಮಂದಿರದ ವಿಶ್ವಸ್ತ ಸದಸ್ಯರಾದ ಉದಯ ಎಸ್. ಸಾಲ್ಯಾನ್ ಮತ್ತು ಸೂರಜ್ ಎಸ್. ಸಾಲ್ಯಾನ್ ಅವರ ಮುಂದಾಳತ್ವದಲ್ಲಿ ಜರಗಿದ ವಾರ್ಷಿಕ ಶರನ್ನವರಾತ್ರಿ ಉತ್ಸವದಲ್ಲಿ ಕಳೆದ ಸೆ. 29ರಂದು ಸಂಜೆ ಶ್ರೀ ಸತ್ಯನಾರಾಯಣ ಮಹಾ ಪೂಜೆ, ರಾತ್ರಿ ಕಾರ್ತಿಕ್ ಪಿಳ್ಳೈ ಹಾಗೂ ಸ್ವಾಮಿ ಪಿಳ್ಳೈ ಅವರ ಸೇವಾರ್ಥಕವಾಗಿ ಅನ್ನ ಸಂತರ್ಪಣೆ ನಡೆಯಿತು.
ವಿಜಯ ದಶಮಿಯ ದಿನ ಬೆಳಗ್ಗೆ ಘಟ ವಿಸರ್ಜನೆ, ಶ್ರೀದೇವಿಗೆ ಅಭಿಷೇಕ, ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ, ಸಂಜೆ ಭಜನೆ, ದೇವಿ ದರ್ಶನ, ಪೂಜೆ ವåತ್ತು ಅನ್ನಸಂತರ್ಪಣೆ ನೆರವೇರಿತು. ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣರಾಜ್ ತಂತ್ರಿ ಅವರ ಪೌರೋಹಿತ್ಯದಲ್ಲಿ ಪೂಜಾದಿಗಳು ನಡೆದವು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ, ಆಹಾರ ಮತ್ತು ನಾಗರಿಕ ಸರಬರಾಜು ರಾಜ್ಯ ಸಚಿವ ವಿದ್ಯಾ ಠಾಕೂರ್, ಸ್ಥಾನೀಯ ನಗರ ಸೇವಕರಾದ ಶ್ರೀಕಲಾ ಪಿಳ್ಳೈ, ದೀಪಕ್ ಠಾಕೂರ್, ಸಂದೀಪ್ ಪಾಟೇಲ್ ಪ್ರಧಾನ ಅಭ್ಯಾಗತರಾಗಿ ಉಪಸ್ಥಿತರಿದ್ದರು. ಇವರನ್ನು ಶ್ಯಾಮನಂದ ಸ್ವಾಮೀಜಿ ಅವರು ಸಮ್ಮಾನಿಸಿ ಗೌರವಿಸಿದರು. ವಾರ್ಷಿಕ ಶರನ್ನವರಾತ್ರಿ ಉತ್ಸವದಲ್ಲಿ ನಾಡಿನ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ವಿವಿಧ ಸೇವೆಗಳನ್ನು ನೆರವೇರಿಸಿ ಶ್ರೀ ಶಾಂತ
ದುರ್ಗಾದೇವಿ ಕೃಪೆಗೆ ಪಾತ್ರರಾದರು.
ಚಿತ್ರ- ವರದಿ: ರೋನ್ಸ್ ಬಂಟ್ವಾಳ್