ಕಳೆದ ಅರ್ವತ್ತು ವರ್ಷಗಳಿಂದ ಮಹಾನಗರದಲ್ಲಿನ ಹಾಗೂ ನಾಡಿನ ಪ್ರತಿಭಾವಂತ ಕನ್ನಡಿಗರ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆಯನ್ನು ಕಲ್ಪಿಸುತ್ತಾ ಬಂದಿರುವ ಮುಂಬಯಿ ಕನ್ನಡಿಗರ ನೆಚ್ಚಿನ ಸಂಘಟನೆಯಾಗಿರುವ ಗೋರೆಗಾಂವ್ ಕರ್ನಾಟಕ ಸಂಘ ಪ್ರಸ್ತುತ ವಜ್ರಮಹೋತ್ಸವದ ಸಂಭ್ರಮದಲ್ಲಿದೆ.
ವಜ್ರಮಹೋತ್ಸವದ ಉದ್ಘಾಟನ ಸಮಾರಂಭವು ಇತ್ತೀಚೆಗೆ ಮಲಾಡ್ ಪಶ್ಚಿಮದ ಬಜಾಜ್ ಹಾಲ್‌ನಲ್ಲಿ ತ್ರಿವಳಿ ಕಾರ್ಯಕ್ರಮಗಳೊಂದಿಗೆ ದಿನಪೂರ್ತಿ ಅದ್ದೂರಿಯಾಗಿ ಜರಗಿತು. ಸಾಹಿತ್ಯಕ ವಿಚಾರ ಗೋಷ್ಠಿಗಳೊಂದಿಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾಭಿಮಾನಿಗಳನ್ನು ಹಾಗೂ ಸಾಹಿತ್ಯಾಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಯುವ ನೃತ್ಯ ಕಲಾವಿದರು ವಿವಿಧತೆಯಿಂದ ಏಕತೆಯನ್ನು ಸಾರುವ ಕರ್ನಾಟಕದ ವಿವಿಧ ರೀತಿಯ ನೃತ್ಯ ಪ್ರಕಾರಗಳನ್ನು ಪ್ರಸ್ತುತಪಡಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಮಾತ್ರವಲ್ಲದೆ ಸಂಘದ ರಂಗಸ್ಥಳ ವಿಭಾಗದ ಸದಸ್ಯರು ಮತ್ತು ಉತ್ಸಾಹಿ ಮಹಿಳಾ ಕಲಾವಿದೆಯರುಗಳಿಂದ ಕಿರು ಹಾಸ್ಯ ಪ್ರಹಸನಗಳು ಸುಂದರವಾಗಿ ಮೂಡಿಬಂತು. ಸಂಘದ ಮಹಿಳಾ ಸದಸ್ಯರಿಂದ ಜಾನಪದ ಹಾಡುಗಳ ಗಾಯನ ಹಾಗೂ ಇತರ ಉಪ ವಿಭಾಗಗಳಿಂದ ವೈವಿಧ್ಯಮಯ ನೃತ್ಯಗಳು ಪ್ರದರ್ಶನಗೊಂಡಿತು.
ಸಮಾರಂಭದ ಕೊನೆಯಲ್ಲಿ ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ, ತೆಂಕು-ಬಡುಗು ತಿಟ್ಟಿನ ಯಕ್ಷಗಾನ ಭಾಗವತ, ಯಕ್ಷನೃತ್ಯ ಗುರು, ನಿರ್ದೇಶಕ ದೇವಲ್ಕುಂದ ಭಾಸ್ಕರ ಶೆಟ್ಟಿ ಇವರ ನಿರ್ದೇಶನದಲ್ಲಿ ಸಂಘದ ಮಹಿಳಾ ಸದಸ್ಯೆಯರಿಂದ ಶಶಿಪ್ರಭ ಪರಿಣಯ ಯಕ್ಷಗಾನ ತಾಳಮದ್ದಳೆಯು ವಿಶೇಷವಾಗಿ ಆಕರ್ಷಣೀಯ ಆಗಿ ನಡೆ ಯಿತು. ಮಹಿಳಾ ವಿಭಾಗದ ಕಲಾವಿದೆಯರು ಒಬ್ಬರಿಂದೊಬ್ಬರು ತಮ್ಮ ವಾಕ್ಚಾತುರ್ಯದಿಂದ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರರಾದರು. ಒಟ್ಟಿನಲ್ಲಿ ದಿನಪೂರ್ತಿ ನಡೆದ ಕಾರ್ಯಕ್ರಮವು ಹಲವು ವಿಶೇಷತೆಗಳಿಗೆ ಕಾರಣವಾಯಿತು.
ತನ್ನ ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ತುಳು- ಕನ್ನಡಿಗರ ಮನೆ- ಮನಗಳನ್ನು ಗೆದ್ದಿರುವ ಗೋರೆಗಾಂವ್ ಕರ್ನಾಟಕ ಸಂಘವು ವಜ್ರಮಹೋತ್ಸವ ಸಂಭ್ರಮದಲ್ಲಿರುವುದು ನಮಗೆಲ್ಲ ಅಭಿಮಾನದ ಸಂಗತಿಯಾಗಿದೆ. ಸಂಘವು ಸಾಹಿತ್ಯ ವಾಗಿ, ಸಾಂಸ್ಕೃತಿಕ ವಾಗಿ, ಧಾರ್ಮಿಕವಾಗಿ ಹಲವಾರು ವೈಶಿಷ್ಟÂತೆಗಳಿಗೆ ಸಾಕ್ಷಿಯಾಗಿದೆ. ಸಂಘದ ವಜ್ರಮಹೋತ್ಸವ ಸಂಭ್ರಮವು ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಇನ್ನಷ್ಟು ಕಲಾವೈವಿಧ್ಯತೆಯೊಂದಿಗೆ ನಡೆಯಲಿ ಎನ್ನುವುದು ನಮ್ಮ ಹಾರೈಕೆ.
ಈಶ್ವರ ಎಂ.ಐಲ್