ಗೊರೇಬಾಳ: ನೀರನ್ನು ವ್ಯರ್ಥವಾಗಿ ಪೋಲು ಮಾಡದೇ ಮಿತವಾಗಿ ಬಳಸಿ ಅದನ್ನು ಮುಂದಿನ ಜನಾಂಗಕ್ಕೆ ಉಳಿಸಿಕೊಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಜವಳಗೇರಾ ಗ್ರಾಪಂ ಅಧ್ಯಕ್ಷ ಮಿಯಾಸಾಬ್ ಹೇಳಿದರು.
ಜವಳಗೇರಾ ಗ್ರಾಮ ಪಂಚಾಯ್ತಿಯಲ್ಲಿ ಶಿಕ್ಷಣ ಫೌಂಡೇಶನ್ ಹಾಗೂ ಕರ್ನಾಟಕ ಪಬ್ಲಿಕ್ ಶಾಲಾ ಸಹಯೋಗದಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣದ ಭಾಗವಾಗಿ ಮಕ್ಕಳಿಗೆ ಹಮ್ಮಿಕೊಂಡಿದ್ದ ನೀರಿನ ಬಳಕೆ ಹಾಗೂ ಉಳಿತಾಯ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜವಳಗೇರಾ ಗ್ರಾಮದಲ್ಲಿ ಶುದ್ಧ ನೀರಿನ ಘಟಕಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಅವುಗಳ ಸದುಪಯೋಗ ಪಡೆಯಬೇಕು. ಬೀದಿಗಳಲ್ಲಿ ನೀರನ್ನು ಹರಿಬಿಡದೆ ಬಳಸಿದ ನೀರನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕು. ನೀರು ಅಮೂಲ್ಯ ವಸ್ತುವಾಗಿದೆ ಅದನ್ನು ಮಿತವಾಗಿ ಬಳಸಿ ಮುಂದಿನ ಜನಾಂಗಕ್ಕೆ ಉಳಿಸಬೇಕಿದೆ ಎಂದರು.
ಮಾಹಿತಿ ಪಡೆದ ಮಕ್ಕಳು: ಗ್ರಾಮದ ನೀರಿನ ಸಂಗ್ರಹಣೆ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳು, ಸದ್ಯರಿಗೆ ಮಕ್ಕಳು ಪ್ರಶ್ನೆ ಕೇಳಿ ಮಾಹಿತಿ ಪಡೆದರು. ನೀರು ಸಂಗ್ರಹಣೆ ವಿವಿಧ ಮೂಲಗಳು, ಜನರ ನೀರಿನ ಬಳಕೆ ಮಟ್ಟ, ಜನರು ನೀರು ಶೇಖರಣೆಗೆ ಅನುಸರಿಸುವ ವಿಧಾನಗಳು, ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಹಾಕಿಕೊಂಡಿರುವ ಯೋಜನೆಗಳ ಕುರಿತು ಮಾಹಿತಿ ಪಡೆದರು.
ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೋಜಕ ನಾಗರಾಜ ಎಚ್., ಪಿಡಿಒ ಪರ್ವಿನ್‌ಬಾನು ಎಸ್‌ಡಿಎಂಸಿ ಅಧ್ಯಕ್ಷ ಎಂ. ಚಂದ್ರಶೇಖರ, ದೈಹಿಕ ಶಿಕ್ಷಕ ತಿಮ್ಮಣ್ಣ ಜವಳಗೇರಾ ಮತ್ತು ಗ್ರಾಪಂ ಸದಸ್ಯರು ಹಾಜರಿದ್ದರು.