ಗೊರೇಬಾಳ: ಸಿಂಧನೂರು ನಗರದ ಬಸ್ ನಿಲ್ದಾಣದಲ್ಲಿ ಸೆಫ್ಟಿಕ್ ಟ್ಯಾಂಕ್ ಒಡೆದು ಮಲಮೂತ್ರ ರಸ್ತೆ ತುಂಬ ಹರಿದು ದುರ್ವಾಸನೆ ತಾಳದೇ ಸಾರ್ವಜನಿಕರು ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಬೆಳಗ್ಗೆ ಜರುಗಿದೆ.
ಸಿಂಧನೂರು ನಗರದ ಕೇಂದ್ರ ಬಸ್ ನಿಲ್ದಾಣದ ಸೆಫ್ಟಿಕ್ ಟ್ಯಾಂಕ್ ಒಡೆದು 8ನೇ ವಾರ್ಡಿನ ಮುಖ್ಯರಸ್ತೆಯಲ್ಲಿನ ಅಂಗಡಿ ಮುಂಗಟ್ಟು, ಮನೆ ಮುಂದೆ ಮಲಿನ ನೀರು ಹರಿಯಿತು. ದುರ್ವಾಸನೆ ತಾಳದೇ ನಿವಾಸಿಗಳು ನಗರಸಭೆ ಸದಸ್ಯರೊಂದಿಗೆ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ, ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಬಸ್ ನಿಲ್ದಾಣದಲ್ಲಿರುವ ಮಳಿಗೆಗಳು ಹಾಗೂ ಹೋಟೆಲ್ಗಳ ತ್ಯಾಜ್ಯವನ್ನು ಒಂದೆಡೆ ಶೇಖರಿಸದೇ ನಿಲ್ದಾಣದ ಸುತ್ತಮುತ್ತ ಹಾಕುತ್ತಾರೆ. ಬಸ್ ನಿಲ್ದಾಣ ಶೌಚಾಲಯದ ಸೆಫ್ಟಿಕ್ ಟ್ಯಾಂಕ್ ತುಂಬಿ ನೀರು ಹೊರಗಡೆ ಹರಿಯುತ್ತಿದೆ. ಸ್ವಚ್ಛಗೊಳಿಸುವಂತೆ ಹಲವು ಬಾರಿಗೆ ಸಾರಿಗೆ ಅಧಿಕಾರಿಗಳಿಗೆ ಸಾರ್ವಜನಿಕರು, ಪೌರಾಯುಕ್ತರು ಕೋರಿದ್ದರೂ ಸಾರಿಗೆ ಸಂಸ್ಥೆ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರಿಂದ ಸ್ವಚ್ಛತೆ: ಸೆಫ್ಟಿಕ್ ಟ್ಯಾಂಕ್ ತುಂಬಿ ಮಲಮೂತ್ರವನ್ನು ಹೊರಗಡೆ ಹರಿಯುತ್ತಿರುವುದನ್ನು ತಡೆಗಟ್ಟುವಂತೆ ನಗರಸಭೆ ಸದಸ್ಯರು ಸಾರಿಗೆ ಅಧಿಕಾರಿಗಳ ಗಮನಕ್ಕೆ ತಂದಾಗ ಯಂತ್ರಗಳಿಂದ ಸ್ವಚ್ಛಗೊಳಿಸದೆ ಕಾರ್ಮಿಕರನ್ನು ಸೆಫ್ಟಿಕ್ ಟ್ಯಾಂಕ್ ಒಳಗಡೆ ಇಳಿಸಿ ಸ್ವಚ್ಛಗೊಳಿಸಲಾಯಿತು. ಸೆಫ್ಟಿಕ್ ಟ್ಯಾಂಕ್ ಕಾರ್ಮಿಕರಿಂದ ಸ್ವಚ್ಛಗೊಳಿಸಬಾರದು ಎಂದು ಸರ್ಕಾರದ ಆದೇಶದವಿದ್ದರೂ ಗುತ್ತಿಗೆದಾರ ಕಾರ್ಮಿಕರಾದ ಶಿವಪ್ಪ ಹಾಗೂ ಈರಪ್ಪ ಅವರನ್ನು ಟ್ಯಾಂಕ್ ಒಳಗಡೆ ಇಳಿಸಿ ಸ್ವಚ್ಛಗೊಳಿಸಲಾಯಿತು. ಕಾರ್ಮಿಕರನ್ನು ಸೆಫ್ಟಿಕ್ ಟ್ಯಾಂಕ್‌ಗೆ ಇಳಿಸಿದ ಗುತ್ತಿಗೆದಾರ, ಸಾರಿಗೆ ಸಂಸ್ಥೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.