ಗೊರೇಬಾಳ: ನಾಡಗೌಡ ಸಚಿವರಾಗಿ ಮತ್ತು ಐಸಿಸಿ ಅಧ್ಯಕ್ಷರಾಗಿ 14 ತಿಂಗಳು ಕಾಲಹರಣ ಮಾಡಿದ ಪರಿಣಾಮ ಸಿಂಧನೂರು ಮತ್ತಿತರ ಭಾಗದ ಭತ್ತ ಬೆಳೆಯುವ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಆರೋಪಿಸಿದರು.
ತುಂಗಭದ್ರಾ ಎಡದಂಡೆ ಕಾಲುವೆಗೆ ಸೋಮನಾಳ ಬಳಿ ಬಿದ್ದ ಬೋಂಗಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ತುಂಗಭದ್ರಾ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾದರೂ ಕಾಲುವೆ ಭಾಗದ ರೈತರು ಸಮರ್ಪಕ ನೀರು ಬಾರದೇ ಪರಿತಪಿಸುತ್ತಿದ್ದಾರೆ. ನೀರು ಬಿಟ್ಟ ಕೆಲವೇ ದಿನಗಳಲ್ಲಿ ಎಡದಂಡೆ ಕಾಲುವೆ ಮೂರು ಬಾರಿ ಬಿರುಕು ಬಿಟ್ಟಿದೆ. ಇದರ ಹೊಣೆ ಹೊರಲು ಯಾರೂ ಸಿದ್ಧರಿಲ್ಲ. ಹಿಂದಿನ 14 ತಿಂಗಳ ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದ ನಮ್ಮ ಭಾಗದ ಶಾಸಕ ವೆಂಕಟರಾವ್ ನಾಡಗೌಡ 14 ತಿಂಗಳ ಅಧಿಕಾರದಲ್ಲಿ ಕಾಲಹರಣ ಮಾಡಿದ್ದು ಇಂದಿನ ಕಾಲುವೆ ದುಸ್ಥಿತಿಗೆ ಕಾರಣ ಎಂದು ವಾಗ್ಧಾಳಿ ನಡೆಸಿದರು.
ಸ್ಪೀಕರ್ ಆಗಿದ್ದ ರಮೇಶಕುಮಾರ ಅವರು ಕೋಲಾರದಲ್ಲಿ ನೀರು ಹರಿಸಲು ಯಾವ ರೀತಿ ಶ್ರಮಿಸಿದ್ದಾರೆ ಎಂಬುದನ್ನು ಈ ಭಾಗದ ಜನಪ್ರತಿನಿಧಿಗಳು ಒಮ್ಮೆ ಹೋಗಿ ನೋಡಬೇಕು. ಸಮಾನಾಂತರ ಜಲಾಶಯದ ಬಗ್ಗೆ ಗಂಭೀರ ಚಿಂತನೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ರೈತರು ಸಾಕಷ್ಟು ಸಂಕಷ್ಟದಲ್ಲಿ ಸಿಲುಕುತ್ತಾರೆ. ಐಸಿಸಿ ಮಂಡಳಿ ಅಧ್ಯಕ್ಷರಾಗಿ ಖುರ್ಚಿಗೆ ಅಂಟಿಕೊಂಡು ಕೂಡದೇ ಯಾವ ರೀತಿ ಕೆಲಸ ಮಾಡಬೇಕೆಂದು ಚಿಂತನೆ ನಡೆಸಬೇಕು. ಕನಿಷ್ಠ ನೀರಿನ ಲಭ್ಯತೆಗನುಗುಣವಾಗಿ ರೈತರು ಯಾವ ಬೆಳೆ ಬೆಳೆಯಬೇಕೆಂಬ ಸಲಹೆ ಕೂಡಾ ಕೊಡದೆ ಮೌನ ವಹಿಸಿರುವುದು ಖೇದಕರ ಸಂಗತಿಯಾಗಿದೆ. ಎಲ್ಲ ಹಾಲಿ, ಮಾಜಿ ಶಾಸಕರುಗಳು, ರೈತರು ಈಗಲಾದರೂ ಎಚ್ಚೆತ್ತುಕೊಂಡು ಸಮಸ್ಯೆಗೆ ಪರಿಹಾರ ಹುಡುಕಬೇಕಿದೆ. ಈ ಕುರಿತು ಸರಕಾರವೂ ಇತ್ತ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ರೌಡಕುಂದ ಜಿಪಂ ಸದಸ್ಯ ಬಸವರಾಜ ಹಿರೇಗೌಡ್ರ, ಮುಖಂಡ ಸಣ್ಣ ಭೀಮನಗೌಡ, ಮಲ್ಲಿಕಾರ್ಜುನಗೌಡ, ಭವಾನಿ ವೀರೇಶ, ರಂಗನಾಥ ಗೌಡನಬಾವಿ, ತುಂಗಭದ್ರಾ ಹೋರಾಟ ಸಮಿತಿ ಸಂಚಾಲಕ ಮಲ್ಲಿಕಾರ್ಜುನಗೌಡ ಹೊಸಮನಿ ಮತ್ತಿತರು ಇದ್ದರು.