Advertisement

ಬೆಂಗಳೂರು ಬಸ್‌ಗಾಗಿ ಪ್ರಯಾಣಿಕರ ಪರದಾಟ-ಪ್ರತಿಭಟನೆ

11:02 AM Jun 24, 2019 | Naveen |

ಗೊರೇಬಾಳ: ಶನಿವಾರ ರಾತ್ರಿ ಬೆಂಗಳೂರುಗೆ ತೆರಳಲು ಬಸ್‌ಗಳಿಲ್ಲದೇ ಪರದಾಡಿದ ಸುಮಾರು 500ಕ್ಕೂ ಹೆಚ್ಚು ಪ್ರಯಾಣಿಕರು ಆಕ್ರೋಶಗೊಂಡು ಸಿಂಧನೂರು ನಗರದ ಬಸ್‌ ನಿಲ್ದಾಣ ಎದುರುಗಡೆ ದಾವಣಗೆರೆ ಹಾಗೂ ತುಮಕೂರು ಮಾರ್ಗಕ್ಕೆ ತೆರಳುವ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.

Advertisement

ಕಳೆದ ಅನೇಕ ತಿಂಗಳುಗಳಿಂದ ಬೆಂಗಳೂರಿಗೆ ಬಸ್‌ಗಳು ಕಡಿಮೆಯಾಗಿ ಪ್ರಯಾಣಿಕರು ಪರದಾಡು ವಂತಾಗಿದೆ. ಶನಿವಾರ ತಡರಾತ್ರಿ ಬೆಂಗಳೂರಿಗೆ ಗುಳೆ ಹೊರಟ ಜನರು ಸಿಂಧನೂರು ಬಸ್‌ ನಿಲ್ದಾಣದಲ್ಲಿ ಬೆಂಗಳೂರು ಬಸ್‌ಗಾಗಿ ಸಂಜೆ 6 ಗಂಟೆಯಿಂದಲೇ ಕಾಯುತ್ತಾ ಕುಳಿತಿದ್ದರು. ನಂತರ ರಾತ್ರಿ 9 ಗಂಟೆಗೆ ಒಂದು ಬಸ್‌ ಬಂದಿದ್ದು, ಅದರಲ್ಲಿ ಇಕ್ಕಟ್ಟಿನಲ್ಲಿ ತಮ್ಮ ಮಕ್ಕಳೊಂದಿಗೆ ಕುಳಿತು ಕೆಲವರು ಪ್ರಯಾಣ ಬೆಳೆಸಿದ್ದಾರೆ. ತದನಂತರ ಇನ್ನುಳಿದ ಸುಮಾರು 500ಕ್ಕೂ ಹೆಚ್ಚು ಜನರು ಬಸ್‌ ನಿಲ್ದಾಣದ ವಿಚಾರಣಾಧಿಕಾರಿಗಳಿಗೆ ಹಾಗೂ ಡಿಪೋ ಸಿಬ್ಬಂದಿಗೆ ಬೆಂಗಳೂರಿಗೆ ಬಸ್‌ ಬಿಡಲು ಮನವಿ ಮಾಡಿದ್ದಾರೆ. ಆದರೆ ಸಿಬ್ಬಂದಿ ಸಕಾರಾತ್ಮಕವಾಗಿ ಉತ್ತರಿಸಿಲ್ಲ. ಹೀಗಾಗಿ ಆಕ್ರೋಶಗೊಂಡ ಪ್ರಯಾಣಿಕರು ಬಸ್‌ ನಿಲ್ದಾಣ ಎದುರು ದಾವಣಗೆರೆ, ತುಮಕೂರು ಮಾರ್ಗವಾಗಿ ತೆರಳುವ ಬಸ್‌ಗಳನ್ನು ತಡೆದು ನಿರ್ವಾಹಕ ಹಾಗೂ ಚಾಲಕರೊಂದಿಗೆ ವಾಗ್ವಾದ ನಡೆಸಿದರು. ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ನಗರ ಠಾಣೆ ಪೇದೆಗಳು ಪ್ರಯಾಣಿಕರಿಗೆ ಸಮಜಾಯಿಷಿ ನೀಡಿ ಬಸ್‌ಗಳನ್ನು ಬಿಡುಗಡೆಗೊಳಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯ: ಕಳೆದ ಅನೇಕ ತಿಂಗಳುಗಳಿಂದ ನಗರದಲ್ಲಿ ಪ್ರಯಾಣಿಕರು ಇಂಥದ್ದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಬಸ್‌ ಓಡಿಸಲು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಬಗ್ಗೆ ಅನೇಕರು ಡಿಪೋ ವ್ಯವಸ್ಥಾಪಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲವೆಂದು ಪ್ರಯಾಣಿಕ ಶಿವಪ್ಪ ದೂರಿದ್ದಾರೆ.

ಶನಿವಾರ ಬೆಂಗಳೂರು ಮಾರ್ಗಕ್ಕೆ 5 ಬಸ್‌ಗಳನ್ನು ಬಿಡಲಾಗಿದೆ. ಅದರಂತೆ ಲಿಂಗಸೂಗುರು, ದೇವದುರ್ಗ ಇತರೆ ತಾಲೂಕುಗಳಿಂದಲೂ ಬಸ್‌ಗಳನ್ನು ಬಿಡಲಾಗಿದೆ. ಸಂಜೆ 6ಗಂಟೆಯಿಂದಲೇ ಬೆಂಗಳೂರಿಗೆ ಬಸ್‌ ಇರುತ್ತವೆ. ಆ ಸಮಯದಲ್ಲೇ ಅವರು ಪ್ರಯಾಣಿಸಬೇಕು. ಚಾಲಕರಿಗೆ ಒತ್ತಡ ಹೇರಿ ಬಸ್‌ಗಳ ವ್ಯವಸ್ಥೆ ಮಾಡಿದರೆ ನಂತರ ಅನಾಹುತ ಆದರೆ ಅದರ ಹೊಣೆ ನಾನು ಹೊರಬೇಕಾಗುತ್ತದೆ. ಪ್ರಯಾಣಿಕರು ಸಹಕರಿಸಬೇಕು.
ಸಿದ್ಧಪ್ಪ,
ಸಿಂಧನೂರು ಡಿಪೋ ವ್ಯವಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next