ಗೊರೇಬಾಳ: ಸರ್ಕಾರಿ ನೌಕರರು ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ನೌಕರರ ಶ್ರೇಯೋಭಿವೃದ್ಧಿಗೆ ತಾವು ಸದಾ ಶ್ರಮಿಸುವುದಾಗಿ ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ಸಿಂಧನೂರು ನಗರದ ತಾಲೂಕು ಪಂಚಾಯಿತಿ ಆವರಣದ ಕಟ್ಟಡದಲ್ಲಿ ಆರಂಭಿಸಿದ ತಾಲೂಕು ಸರ್ಕಾರಿ ನೌಕರರ ತಾತ್ಕಾಲಿಕ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ನಗರಸಭೆಯಿಂದ ನಿವೇಶನ ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಅನುದಾನ ನೀಡುವುದಾಗಿ ಹೇಳಿದರು. ನೌಕರರ ಸಂಘದ ಅಧ್ಯಕ್ಷರು ಈಗಾಗಲೇ ತಮಗೆ ಎನ್‌ಪಿಎಸ್ ರದ್ದುಗೊಳಿಸಿ, ಒಪಿಎಸ್ ಜಾರಿಗೊಳಿಸಲು ಒತ್ತಾಯಿಸಿದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸದನದಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸರ್ಕಾರಿ ನೌಕರರು ಸ್ವಂತ ಕಟ್ಟಡವಿಲ್ಲದೆ ಸಭೆ, ಸಮಾರಂಭಗಳನ್ನು ನಡೆಸಲು ತೊಂದರೆ ಆಗಿತ್ತು. ತಾವು ಸಂಸದನಿದ್ದಾಗ ನೌಕರರ ಸಂಘಕ್ಕೆ ಕಟ್ಟಡ ಮಂಜೂರು ಮಾಡಿಸಲು ಪ್ರಯತ್ನ ನಡೆಸಿದ್ದೆ. ಈಗ ತಾಲೂಕು ಅಧ್ಯಕ್ಷ ಚಂದ್ರಶೇಖರ ಹಿರೇಮಠ ಅವರು ತಾಪಂ ಅಧ್ಯಕ್ಷರ ಹಾಗೂ ಇಒ ಅವರ ಸಹಕಾರದಿಂದ ತಾತ್ಕಾಲಿಕವಾಗಿ ತಾಪಂ ಆವರಣದಲ್ಲಿ ನೌಕರರ ಕಚೇರಿ ಆರಂಭಿಸಿರುವುದು ಸ್ವಾಗತಾರ್ಹವಾಗಿದೆ.
ಸಂಘದ ತಾಲೂಕು ಘಟಕದಿಂದ ಸಮಾಜಮುಖೀ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಒತ್ತು ನೀಡಬೇಕು. ತಾವೂ ಕೂಡ ಸಹಾಯ, ಸಹಕಾರ ಸಲ್ಲಿಸುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಮುಖಂಡ ಅಮರೇಶ ಗುರಿಕಾರ ವಕೀಲ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಮಾತನಾಡಿ, ಸಂಘದ ಬೆಳೆವಣಿಗೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಸಂಘದ ಹೆಸರಿನಲ್ಲಿ ನಿವೇಶನ ಮಂಜೂರಾಗಿದೆ. ಸಂಘದ ಪದಾಧಿಕಾರಿಗಳು ಹಾಗೂ ಮಾತೃ ಇಲಾಖೆಗಳ ಎಲ್ಲ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ತಾಲೂಕಿನ ಎಲ್ಲ ಸರ್ಕಾರಿ ನೌಕರರಿಗೆ ಒಂದು ದಿನದ ವೇತನ ನೀಡಿ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ವಿನಂತಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹೆಬೂಬ್‌ಪಾಷಾ ಮೂಲಿಮನಿ, ತಹಶೀಲ್ದಾರ್ ಶಿವಾನಂದ ಸಾಗರ, ತಾಪಂ. ಇಒ ಬಾಬುರಾಠೊಡ್, ನೌಕರರ ಸಂಘದ ಪದಾಧಿಕಾರಿಗಳಾದ ಬಸವರಾಜ ವಿ., ಭರತಕುಮಾರ, ಶಶಿಧರ ಹಳ್ಳಿ, ಶಿವುಕುಮಾರ
ಸಗರಮಠ, ಹನುಮಂತಪ್ಪ ನಾಯಕ ಸೇರಿದಂತೆ ಅನೇಕರು ಇದ್ದರು.