ಗೊರೇಬಾಳ: ತುಂಗಭದ್ರಾ ಜಲಾಶಯದಿಂದ 2.5 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಿದ ಪರಿಣಾಮ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಡಳಿತ ಸಿಂಗಾಪುರ ಗ್ರಾಮದ 150ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಿದ್ದು, 2 ಗಂಜಿ ಕೇಂದ್ರ ಆರಂಭಿಸಿದೆ.
ಶನಿವಾರ ತಡರಾತ್ರಿ 2.5 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದ್ದು, ಇನ್ನೂ 1 ಲಕ್ಷ ಕ್ಯೂಸೆಕ್ ಹೆಚ್ಚು ನೀರು ಬಿಡುವ ಸಂಭವವಿದ್ದು, ನದಿ ಪಾತ್ರದ ಜನರು ಎಚ್ಚರದಿಂದ ಇರಬೇಕೆಂದು ಲಿಂಗಸುಗೂರು ಸಹಾಯಕ ಆಯುಕ್ತ ರಾಜಶೇಖರ ಡಂಬಳ ಎಚ್ಚರಿಕೆ ನೀಡಿದ್ದಾರೆ.
ಸಹಾಯಕ ಆಯುಕ್ತ ರಾಜಶೇಖರ ಡಂಬಳ ಹಾಗೂ ತಹಶೀಲ್ದಾರ್ ನೇತೃತ್ವದ ತಂಡ ತಾಲೂಕಿನ ಸಿಂಗಾಪುರ, ಒಳಬಳ್ಳಾರಿ, ಹೆಡಗಿನಾಳ, ಚಿತ್ರಾಲಿ, ಚಿಂತಮಾನದೊಡ್ಡಿ, ಪುಲಮೇಶ್ವರ ದಿನ್ನಿ, ಸಾಂಬಾರೆಡ್ಡಿ ಕ್ಯಾಂಪ್, ಕೆಂಗಲ್, ಬಾಲಾಜಿ ಕ್ಯಾಂಪ್, ಬೈರೇಶ್ವರ ಕ್ಯಾಂಪ್ ಹಾಗೂ ದಢೇಸುಗೂರು ಗ್ರಾಮಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಅಧಿಕಾರಿಗಳ ತಂಡ ರಚನೆ: ನದಿ ಪಾತ್ರಗಳಲ್ಲಿ ಬರುವ ಪ್ರತಿಯೊಂದು ಹಳ್ಳಿಗಳಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಮಿತಿ ರಚನೆ ಮಾಡಿ ನೇಮಿಸಲಾಗಿದೆ. ಈಗಾಗಲೇ ತೀವ್ರ ಪ್ರವಾಹಕ್ಕೆ ತುತ್ತಾಗುವ ಸಂಭವ ಇರುವ ಸಿಂಗಾಪುರ ಹಾಗೂ ದಢೇಸುಗೂರು ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಯಿಂದ ಡಂಗೂರ ಸಾರಿ ನದಿ ದಂಡೆಗೆ ತೆರಳದಂತೆ ಜನರಿಗೆ ಸೂಚಿಸಲಾಗಿದೆ.
ಸಿಂಗಾಪುರ ಮತ್ತು ದಢೇಸುಗೂರಿನ ಸಮುದಾಯ ಭವನ, ಗೋದಾಮು ಹಾಗೂ ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ಪ್ರಾರಂಭಕ್ಕೆ ತಹಶೀಲ್ದಾರ್‌ಗೆ ಸೂಚಿಸಲಾಗಾಇದೆ. ಜನರಿಗೆ ಅಗತ್ಯ ಸೌಕರ್ಯ, ವಿದ್ಯುತ್, ಕುಡಿಯುವ ನೀರು, ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಹಾಯಕ ಆಯುಕ್ತ ರಾಜಶೇಖರ ಡಂಬಳ ತಿಳಿಸಿದ್ದಾರೆ.
ಪಂಪ್‌ಸೆಟ್ ಮುಳುಗಡೆ: ತಾಲೂಕಿನ ತುಂಗಭದ್ರಾ ನದಿಗೆ ಹೆಚ್ಚಿನ ನೀರು ಬಂದ ಹಿನ್ನೆಲೆಯಲ್ಲಿ ಮುಕ್ಕುಂದಾ, ಸಿಂಗಾಪುರ, ದಢೇಸುಗೂರು, ಸಾಲಗುಂದಾ, ಉಪ್ಪಳ ಸೇರಿದಂತೆ ನದಿಪಾತ್ರದ ಗ್ರಾಮಗಳ ರೈತರು ಗದ್ದೆಗಳಲ್ಲಿ ಹಾಕಿದ್ದ ಪಂಪ್‌ಸೆಟ್‌ಗಳು ನದಿ ನೀರಿಗೆ ಮುಳುಗಡೆ ಆಗಿವೆ.
ಶಾಸಕ ನಾಡಗೌಡ ಭೇಟಿ: ತಾಲೂಕಿನ ಸಿಂಗಾಪುರ ಗ್ರಾಮಕ್ಕೆ ಶಾಸಕ ವೆಂಕಟರಾವ್ ನಾಡಗೌಡ ರವಿವಾರ ಸಂಜೆ ಭೇಟಿ ನೀಡಿ ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗಿದೆ. ಗ್ರಾಮಸ್ಥರು ಜಾಗ್ರತೆಯಿಂದ ಇರಬೇಕು. ಈಗಾಗಲೇ ತಾಲೂಕು ಆಡಳಿತದಿಂದ ಸುರಕ್ಷಿತ ಸ್ಥಳಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಜನರು ಅಲ್ಲಿಗೆ ಹೋಗಬೇಕೆಂದು ವಿನಂತಿಸಿದರು.
ವೀಕ್ಷಣೆ: ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ದಢೇಸುಗೂರು ಗ್ರಾಮದ ಪಕ್ಕದಲ್ಲಿ ತುಂಬಿ ಹರಿಯುತ್ತಿರುವ ನದಿ ನೋಡಲು ಬಂದ ಜನ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.