ಗೊರೇಬಾಳ: ನೈಸರ್ಗಿಕವಾಗಿ ಸಿಗುವ ಮರಳನ್ನು ಕೆಲವರು ಲಾಭಿಯನ್ನಾಗಿಸಿಕೊಂಡು ಮರಳು ಸಾಗಾಣಿಕೆ ಕಠಿಣಗೊಳಿಸುತ್ತಿರುವುದು ಖಂಡನೀಯ. ಸರ್ಕಾರ ಮರಳು ಸಾಗಾಣಿಕೆಯನ್ನು ಸಾರ್ವತ್ರೀಕರಣ ಮತ್ತು ಸರಳೀಕರಣಗೊಳಿಸಬೇಕೆಂದು ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ. ಪಾಟೀಲಗೆ ಒತ್ತಾಯಿಸಲಾಗಿದೆ ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮ್ಮಿಶ್ರ ಸರ್ಕಾರದಲ್ಲಿ ಸಚಿವನಾಗಿದ್ದಾಗ ಈ ಬಗ್ಗೆ ಮಂತ್ರಿ ಮಂಡಲದ ಸಭೆಯಲ್ಲಿ ಚರ್ಚಿಸಲಾಗಿತ್ತು. ಆಂಧ್ರ ಮತ್ತು ತಮಿಳುನಾಡಿನಲ್ಲಿ ಮರಳು ಸಾಗಾಣಿಕೆ ಸಾರ್ವತ್ರೀಕರಣದಲ್ಲಿದೆ. ಅದರಂತೆ ಈಗಿನ ಬಿಜೆಪಿ ಸರ್ಕಾರ ಗಮನಹರಿಸಿ ಮರಳು ಸಾಗಾಣಿಕೆಯನ್ನು ಸಡಿಲಗೊಳಿಸಬೇಕೆಂದು ಆಗ್ರಹಿಸಿದರು.
ಈ ಹಿಂದೆ ಎಪಿಎಂಸಿಯಲ್ಲಿ ಕುರಿ ಸಂತೆ ನಡೆಯುವ ಜಾಗವನ್ನು ಟಿಎಪಿಸಿಎಂಎಸ್‌ನಿಂದ ವಿಸಿಬಿ ಶಿಕ್ಷಣ ಸಂಸ್ಥೆಗೆ ಲೀಜ್ ಪಡೆದುಕೊಂಡಿದ್ದರು. ಇದರಿಂದ ರೈತರಿಗೆ ತೊಂದರೆಯಾಗಿತ್ತು. ವಿಷಯ ತಿಳಿದ ತಕ್ಷಣವೇ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಂತ್ರಿಯಾಗಿದ್ದಾಗ ಸ್ವಕ್ಷೇತ್ರದಲ್ಲಿರುವ ಜೆಡಿಎಸ್ ಕಾರ್ಯಕರ್ತರನ್ನು ಖುದ್ದು ಭೇಟಿ ಮಾಡಿ ಮಾತನಾಡಲು ಸಾಧ್ಯವಾಗಿಲ್ಲ. ಆ ಬೇಸರ ನನಗೂ ಇದೆ. ಈಗ ಶಾಸಕನಿದ್ದೇನೆ ಮತಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡಿ ಕಾರ್ಯಕರ್ತರೊಡನೆ ಕೂಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಮುಂದಾಗುತ್ತೇನೆ ಎಂದರು.
1ಕೋಟಿ ಅನುದಾನ ಮಂಜೂರು: ವೀರಶೈವ ಸಮಾಜ ಅಭಿವೃದ್ಧಿಗಾಗಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ 1 ಕೋಟಿ ಅನುದಾನ ಮಂಜೂರು ಮಾಡಿದ್ದು, ಇನ್ನುಳಿದ ಅನುದಾನವನ್ನು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ಬಿಡುಗಡೆಗೊಳಿಸಲಾಗುವುದು ಎಂದರು.
ಜೆಡಿಎಸ್ ಮುಖ್ಯ ಸಂಚಾಲಕ ಬಿ.ಹರ್ಷ, ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ಲಿಂಗಪ್ಪ ದಢೇಸೂಗುರು, ನಗರ ಅಧ್ಯಕ್ಷ ಎಂ.ಡಿ.ನದೀಮುಲ್ಲಾ, ನಗರಸಭೆ ಸದಸ್ಯ ಖಾಜಿ ಜಿಲಾನಿಪಾಷಾ, ಮುಖಂಡರಾದ ಅಯ್ಯನಗೌಡ ಆಯನೂರು, ವೆಂಕೋಬ ಕಲ್ಲೂರು, ವೆಂಕಟೇಶ ನಂಜಲದಿನ್ನಿ ಇತರರು ಇದ್ದರು.