ಗೊರೇಬಾಳ: ಕಲಿತ ಶಾಲೆಗೆ ನೀವು ಏನು ಕೊಡಬಹುದು? ಮಕ್ಕಳಿಗೆ ಕುಳಿತುಕೊಳ್ಳಲಿಕ್ಕೆ ಚೇರ್, ಶಿಕ್ಷಕರಿಗಾಗಿ ಮೇಜು, ಶುದ್ಧ ನೀರು ಕುಡಿಯಲೆಂದು ಫಿಲ್ಟರ್, ಪುಸ್ತಕಗಳನ್ನಿಡಲಿಕ್ಕೆ ತಿಜೂರಿ, ಅಬ್ಬಬ್ಟಾ ಎಂದರೆ ಕಲಿಸಿದ ಗುರುಗಳನ್ನು ಒಂದೆಡೆ ಸೇರಿಸಿ ಸನ್ಮಾನಿಸಿ, ಗೌರವಿಸಿ ಶಾಲು-ಹಣ್ಣು ಹಂಪಲ-ಒಂದಿಷ್ಟು ಕಾಣಿಕೆ ಕೊಡಬಹುದು. ಆದರೆ ಇಲ್ಲೊಬ್ಬರು ಕಲಿತ ಶಾಲೆ ಹಾಗೂ ಸ್ವಗ್ರಾಮದ ನೆನಪಿಗಾಗಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಸರಕಾರಿ ಶಾಲೆಯನ್ನು ನಿರ್ಮಿಸಿಕೊಟ್ಟು ಸರ್ವರ ಶ್ಲಾಘನೆಗೆ ಪಾತ್ರನಾಗಿದ್ದಾರೆ.
ಹೌದು. ಸಿಂಧನೂರು ತಾಲೂಕಿನ ರಂಗಾಪುರ ಕ್ಯಾಂಪ್‌ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿ, ಸದ್ಯ ಅಮೃತಾ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪಿ.ವೆಂಕಟೇಶ್ವರರಾವ್ ಸುಸಜ್ಜಿತ ಶಾಲೆಯನ್ನೇ ನಿರ್ಮಿಸಿಕೊಟ್ಟಿದ್ದಾರೆ.
ರಂಗಾಪುರ ಕ್ಯಾಂಪ್‌ನಲ್ಲಿ ಆರಂಭದಲ್ಲಿ ಈ ಶಾಲೆ ಗುಡಿಸಲಿನಲ್ಲಿ ನಡೆಯುತ್ತಿತ್ತು. ನಂತರದ ದಿನಗಳಲ್ಲಿ ಅಂದರೆ ದಶಕಗಳ ಹಿಂದೆ ಶಾಲೆ ನಿರ್ಮಿಸಲಾಗಿತ್ತು. ಕಾಲುವೆ ಹಾಗೂ ರಸ್ತೆ ಪಕ್ಕದಲ್ಲಿ ಶಾಲೆ ಇದ್ದುದರಿಂದ ಅಗತ್ಯ ಸೌಕರ್ಯಗಳು ಇರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಶಾಲಾ ಕಟ್ಟಡ ಶಿಥಿಲಗೊಂಡಿತ್ತು. ಶಿಕ್ಷಕರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ವೆಂಕಟೇಶ್ವರರಾವ್ ಅವರಿಗೆ ಈ ಕುರಿತು ಗಮನಕ್ಕೆ ತಂದಿದ್ದರು. ಆಗ ತಾವು ಕಲಿತ ಶಾಲೆಯನ್ನು ತಾವೇ ನಿರ್ಮಿಸಬೇಕೆಂಬ ತೀರ್ಮಾನಕ್ಕೆ ಬಂದರು.
ಗ್ರಾಮದ ಪ್ರಮುಖರೂ ಬೆಂಬಲಿಸಿದರು. ಗ್ರಾಮದ ಹೊರವಲಯದಲ್ಲಿ ಭೂಮಿ ಖರೀದಿಸಿ ಸುಸಜ್ಜಿತ ಶಾಲೆಯನ್ನು ನಿರ್ಮಿಸಿದ್ದು, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಶಾಲಾ ಕಟ್ಟಡ ನಿರ್ಮಾಣಗೊಂಡಿದ್ದು, ಹೈಟೆಕ್ ಸೌಲಭ್ಯಗಳನ್ನು ಒಳಗೊಂಡಿದೆ. ಫೆ.23ರಂದು ಉದ್ಘಾಟನೆ ಆಗಲಿದೆ.
ಶಾಲೆಯಲ್ಲಿ ಏನಿದೆ: ಶಾಲೆಯಲ್ಲಿ ಕೊಠಡಿಗಳು, ಗ್ರಂಥಾಲಯ, ಊಟದ ಕೋಣೆ, ಅಡುಗೆ ಕೋಣೆ, ಶುದ್ಧ ನೀರಿನ ಘಟಕ, ಹೈಟೆಕ್ ಶೌಚಾಲಯ, ವಿಶಾಲ ಮೈದಾನ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ. 1ರಿಂದ 8ನೇ ತರಗತಿವರೆಗೆ ಇದ್ದು, ಆರು ಜನ ಶಿಕ್ಷಕರು, 122 ವಿದ್ಯಾರ್ಥಿಗಳು ಇದ್ದಾರೆ. ಒಟ್ಟು 10 ಕೊಠಡಿಗಳು ಇಲ್ಲಿವೆ. ಅವಶ್ಯಕತೆ ಬಿದ್ದರೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ಕೊಠಡಿ ನಿರ್ಮಿಸಿಕೊಡುವುದಾಗಿಯೂ ವೆಂಕಟೇಶ್ವರರಾವ್ ಅವರು ಭರವಸೆ ನೀಡಿದ್ದಾರೆ. ಈ ಶಾಲೆಯನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರೂ ಆಗಮಿಸುತ್ತಿದ್ದಾರೆ.
ನಾನು ಓದುವ ಸಮಯದಲ್ಲಿ ಶಾಲೆ ಜೋಪಡಿಯಲ್ಲಿ ನಡೆಯುತ್ತಿತ್ತು. ಇದೀಗ ಎಲ್ಲರ ಸಹಕಾರದೊಂದಿಗೆ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ.
ಪಿ. ವೆಂಕಟೇಶ್ವರರಾವ್,
ವ್ಯವಸ್ಥಾಪಕ ನಿರ್ದೇಶಕ, ಅಮೃತಾ
ಫೌಂಡೇಶನ್
ಡಿ. ಶರಣೇಗೌಡ