ಗೊರೇಬಾಳ: ಈ ಹಿಂದೆ ಶಾಸಕರಾಗಿದ್ದಾಗ ಕೆ.ವಿರೂಪಾಕ್ಷಪ್ಪ ಹಾಗೂ ಹಂಪನಗೌಡ ಬಾದರ್ಲಿ ತಮ್ಮ ಹಿಂಬಾಲಕರಿಗೆ ಉಪ ಗುತ್ತಿಗೆ ಕೊಡಿಸಿಲ್ಲವೇ ಎಂದು ಪ್ರಶ್ನಿಸಿದ ಸಚಿವ ವೆಂಕಟರಾವ್ ನಾಡಗೌಡ, ಅವರು ನಡೆದು ಬಂದ ದಾರಿಯಲ್ಲಿ ತಾವು ನಡೆಯುತ್ತಿರುವುದಾಗಿ ಹೇಳಿ, ಗೊರೇಬಾಳ ಪಿಕಪ್ ಡ್ಯಾಂ ಆಧುನೀಕರಣ ಕಾಮಗಾರಿಯನ್ನು ಜೆಡಿಎಸ್ ಕಾರ್ಯಕರ್ತರಿಗೆ ನೀಡಿದ್ದನ್ನು ಸಮರ್ಥಿಸಿಕೊಂಡರು.
ಗೊರೇಬಾಳ ಗ್ರಾಮದ ಹತ್ತಿರ 14.30 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಗೊರೇಬಾಳ ಪಿಕಪ್ ಡ್ಯಾಂ ಆಧುನೀಕರಣ ಕಾಮಗಾರಿ ವೀಕ್ಷಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಗೊರೇಬಾಳ ಪಿಕಪ್ ಡ್ಯಾಂ ಸುಮಾರು 20 ವರ್ಷಗಳ ಹಿಂದಿನ ಯೋಜನೆ ಆಗಿದೆ. ಹಂಪನಗೌಡ ಬಾದರ್ಲಿ ಶಾಸಕರಿದ್ದಾಗ ಯೋಜನೆ ಉದ್ಘಾಟಿಸಲಾಗಿತ್ತು. ಆದರೆ ರೈತರ ಹೊಲಗಳಿಗೆ ಹನಿ ನೀರು ತಲುಪಲಿಲ್ಲ. ಲೆವೆಲ್ ಇಲ್ಲದ್ದರಿಂದ ಕಾಲುವೆಗೆ ನೀರು ಬಿಟ್ಟರೆ ವಾಪಸ್ಸು ಬರುತ್ತಿತ್ತು. ತಾವು ಶಾಸಕರಾಗಿದ್ದಾಗ ಕಾಲುವೆಯನ್ನು ಸಂಪೂರ್ಣವಾಗಿ ಲೆವೆಲ್ ಮಾಡಿ ಬೂದಿವಾಳ ಹಾಗೂ ಬೂದಿವಾಳ ಕ್ಯಾಂಪ್ ರೈತರಿಗೆ ನೀರು ಒದಗಿಸಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಉಂಟಾದ ನೆರೆಹಾವಳಿಗೆ ಕಾಲುವೆಗಳೆಲ್ಲಾ ಕೊಚ್ಚಿ ಹೋದವು. ಪಿಕಪ್ ಡ್ಯಾಂ ಮತ್ತೆ ಹಂಪನಗೌಡರ ಕಾಲದಲ್ಲಿ ನನೆಗುದಿಗೆ ಬಿತ್ತು. ಈಗ ಅದಕ್ಕೆ ಅನುದಾನ ಕೊಟ್ಟು ಪುನಃ ಚಾಲನೆ ನೀಡಲಾಗಿದೆ ಎಂದರು.
ಗುಣಮಟ್ಟ: ಎಲ್ಲ ಕಾಮಗಾರಿಗಳನ್ನು ಗುತ್ತಿಗೆದಾರರು ಮಾಡಲು ಆಗುವುದಿಲ್ಲ. ಅವರು ಉಪಗುತ್ತಿಗೆ ನೀಡಿದ್ದಾರೆ. ಕೆಲಸ ಯಾರು ಮಾಡುತ್ತಾರೆ ಎನ್ನುವುದು ಮುಖ್ಯವಲ್ಲ. ಸದ್ಯ ಕಾಮಗಾರಿ ಗುಣಮಟ್ಟದಿಂದ ನಡೆಯುತ್ತಿದೆ. ವಿರೂಪಾಕ್ಷಪ್ಪ ಅವರು ಬೇಕಾದರೆ ಗುಣಮಟ್ಟ ವೀಕ್ಷಣೆ ಮಾಡಲಿ. ಟೀಕೆ ಮಾಡಬೇಕು ಎಂದು ಮಾಡಿದರೆ ತಾವು ಉತ್ತರ ಕೊಡುವುದಿಲ್ಲ. ಇಲಾಖೆಯಿಂದಲೂ ನಿವೃತ್ತ ಅಭಿಯಂತರರನ್ನು ನೇಮಕ ಮಾಡಲಾಗಿದೆ. ಅವರು ಸ್ಥಳದಲ್ಲಿದ್ದು, ಲೆವೆಲ್ ಹಾಗೂ ಗುಣಮಟ್ಟ ಪರಿಶೀಲನೆ ಮಾಡುತ್ತಾರೆ ಎಂದು ತಿರುಗೇಟು ನೀಡಿದರು. ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಈರಣ್ಣ, ಎಇಇ ಹನುಮಂಗಪ್ಪ, ಜೆಇ ನಾಗಪ್ಪ, ತಾಪಂ ಸದಸ್ಯ ಗುರುರಾಜ, ಜೆಡಿಎಸ್ ಅಧ್ಯಕ್ಷ ಲಿಂಗಪ್ಪ ದಡೇಸ್ಗೂರು, ವಕ್ತಾರ ಬಸವರಾಜ ನಾಡಗೌಡ, ಮುಖಂಡರಾದ ಚಂದ್ರಭೂಪಾಲ ನಾಡಗೌಡ, ಜಿ.ಸತ್ಯನಾರಾಯಣ, ನಾಗೇಶ ಹಂಚಿನಾಳ ಕ್ಯಾಂಪ್, ಸಣ್ಣ ಶಿವನಗೌಡ, ವೆಂಕೋಬ ಕಲ್ಲೂರು, ಮಲ್ಲನಗೌಡ, ಎನ್ ಸಿದ್ದಲಿಂಗೇಶ ಗೌಡ, ಅಮರಯ್ಯಸ್ವಾಮಿ ಮಲ್ಕಾಪುರ, ಶರಣಬಸವ ಗೊರೇಬಾಳ, ಕೋಟೇಶ್ವರರಾವ್ ಸೇರಿದಂತೆ ಅನೇಕರು ಇದ್ದರು.
28ರಂದು ಕರಡಿಗುಡ್ಡದಲ್ಲಿ ಸಿಎಂ ಎಚ್‌ಡಿಕೆ ವಾಸ್ತವ್ಯ
ಮಾನ್ವಿ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಜೂ.28 ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಸೋಮವಾರ ಜಿಲ್ಲಾಡಳಿತದೊಂದಿಗೆ ಭೇಟಿ ನೀಡಿ ತಾವು ಪರಿಶೀಲಿಸುವುದಾಗಿ ಸಚಿವ ವೆಂಕಟರಾವ್ ನಾಡಗೌಡ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.