Advertisement

ಮೂರು ದಶಕದ ರೈತರ ಕನಸು ಸಾಕಾರ

06:32 PM Sep 16, 2019 | Naveen |

ಗೊರೇಬಾಳ: ಸಿಂಧನೂರು ತಾಲೂಕಿನ ಗೊರೇಬಾಳ ಗ್ರಾಮದ ಹತ್ತಿರ ನಿರ್ಮಿಸಿದ ಪಿಕಪ್‌ ಡ್ಯಾಂ ಕಾಮಗಾರಿ ಪೂರ್ಣಗೊಂಡಿದ್ದು, ರೈತರ ಹೊಲಗಳಿಗೆ ನೀರುಣಿಸಲು ಮುನ್ನುಡಿ ಬರೆಯುವ ಮೂಲಕ ಮೂರು ದಶಕಗಳ ರೈತರ ಕನಸು ಕೊನೆಗೂ ಸಾಕಾರಗೊಂಡಿದೆ.

Advertisement

ಬೂದಿವಾಳ ಕ್ಯಾಂಪ್‌, ಸಾಲಗುಂದಾ, ಬೂದಿಹಾಳ, ದಢೇಸುಗೂರು, ಉಪ್ಪಳ, ಸೋಮಲಾಪುರ, ಕೆಂಗಲ್, ಕನ್ನಾರಿ, ಬೆಳಗುರ್ಕಿ, ಕಾತರಕಿ ಗ್ರಾಮಗಳ ಸುಮಾರು 4,400 ಎಕರೆ ಜಮೀನಿಗೆ ನೀರು ಒದಗಿಸುವ ಜಲಸಂಪನ್ಮೂಲ ಇಲಾಖೆಯ ಈ ಪಿಕಪ್‌ ಡ್ಯಾಂ ಕಾಮಗಾರಿ ಪ್ರಾರಂಭದಿಂದ ಕುಂಟುತ್ತಲೇ ಸಾಗಿತ್ತು. 1979ರಲ್ಲಿ ಅಣೆಕಟ್ಟು, ಫೀಡರ್‌ ಹಾಗೂ ಚಾನಲ್ಗಳ ನಿರ್ಮಾಣಕ್ಕಾಗಿ 1.92 ಕೋಟಿ ಮಂಜೂರಾಗಿತ್ತು. ಭೂ ಪರಿಹಾರಕ್ಕಾಗಿ 89 ಲಕ್ಷ ರೂ. ಅನುದಾನ ಒದಗಿಸಲಾಗಿತ್ತು. ತುಂಗಭದ್ರಾ ಎಡದಂಡೆ ನಾಲೆಯ 36ನೇ ಉಪ ಕಾಲುವೆಯ ಕೊನೆ ಭಾಗದ ರೈತರಿಗೆ ಅನುಕೂಲವಾಗಲೆಂಬ ದೃಷ್ಟಿಯಿಂದ ಕೈಗೊಂಡ ಯೋಜನೆ ಈಗ ಪೂರ್ಣಗೊಂಡಿದೆ. ತಮ್ಮ ಹೊಲಗಳಿಗೆ ನೀರು ಒದಗಬಹುದೆಂಬ ರೈತರ ಕನಸು ಕೊನೆಗೂ ಈಡೇರಿದೆ.

ಉದ್ಘಾಟನೆ ಆದರೂ ಹರಿಯಲಿಲ್ಲ ನೀರು: ಕಳೆದ ಮೂರು ದಶಕದಲ್ಲಿ ಕಾಂಗ್ರೆಸ್‌ ಪಕ್ಷದವರು ಎರಡು ಬಾರಿ ಉದ್ಘಾಟಿಸಿದರೆ, ಜೆಡಿಎಸ್‌ ಶಾಸಕರು ಒಂದು ಬಾರಿ ಉದ್ಘಾಟನೆ ಮಾಡಿದ್ದರು. ಉದ್ಘಾಟನೆಯಾದರೂ ರೈತರ ಹೊಲಗಳಿಗೆ ಮಾತ್ರ ನೀರು ಹರಿದು ಬರಲಿಲ್ಲ. ರಾಜಕೀಯ ನೇತಾರರಿಗೆ ಈ ಪಿಕಪ್‌ ಡ್ಯಾಂ ಅಕ್ಷಯಪಾತ್ರೆಯಂತಾಗಿತ್ತು. ಹೊಸ ಕಾಲುವೆಯಾಗಿದ್ದರಿಂದ ಹಾಗೂ ಕಳಪೆ ಕಾಮಗಾರಿಯಿಂದ ನೀರು ಹರಿಸಿದಾಗ ಕಾಲುವೆಗೆ ಬೋಂಗಾ ಬಿದ್ದು ಹೊಲಗಳಿಗೆ ನೀರು ನುಗ್ಗುತ್ತಿತ್ತು. ಆದರೂ ಬೆನ್ನು ಬಿಡದ ಬೇತಾಳದಂತೆ ಅಧಿಕಾರಿಗಳು ಮತ್ತೆ ಮತ್ತೆ ರಿಪೇರಿ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಅಭಿವೃದ್ಧಿ ಹೆಸರಲ್ಲಿ ಬಿಡುಗಡೆಯಾದ ಕೋಟಿಗಟ್ಟಲೇ ಹಣ ಸಮರ್ಪಕ ಬಳಸದೇ ವ್ಯಯ ಮಾಡಲಾಗಿತ್ತು ಎಂಬ ಆರೋಪಗಳು ಕೇಳಿಬರುತ್ತಿದ್ದವು.

ಪೂರ್ಣ: ಗೊರೇಬಾಳ ಪಿಕಪ್‌ ಡ್ಯಾಂ ಆಧುನೀಕರಣಕ್ಕೆ ಕಳೆದ ಕಾಂಗ್ರೆಸ್‌ ಅಧಿಕಾರದ ಕೊನೆ ಅವಧಿಯಲ್ಲಿ ಶಾಸಕರಾಗಿದ್ದ ಹಂಪನಗೌಡ ಬಾದರ್ಲಿ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರ ಮನವೊಲಿಸಿ ಸುಮಾರು 15 ಕೋಟಿ ರೂ. ಮಂಜೂರು ಮಾಡಿಸಿದ್ದರು. ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕರಾಗಿ ಸಚಿವರಾದ ವೆಂಕಟರಾವ್‌ ನಾಡಗೌಡ ಈ ಯೋಜನೆ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿದ್ದರು. ಆದರೆ ಕಾಮಗಾರಿಯನ್ನು ತಮ್ಮ ಕಾರ್ಯಕರ್ತರಿಗೆ ನೀಡಿದ್ದರಿಂದ ಕಾಮಗಾರಿ ಗುಣಮಟ್ಟದ ಬಗ್ಗೆ ಸಾಕಷ್ಟು ದೂರುಗಳು ಸಹ ಕೇಳಿ ಬಂದವು. ಆದರೂ ಈಗ ಕಾಮಗಾರಿ ಪೂರ್ಣಗೊಂಡಿದೆ.

ಹೆಚ್ಚು ಮುತುವರ್ಜಿ ವಹಿಸಿ ಕಾಮಗಾರಿ ಪೂರ್ಣಗೊಳಿಸಿದ ಶಾಸಕ ನಾಡಗೌಡರೇ ಸದ್ಯ ಈ ಭಾಗದ ರೈತರಿಗೆ ಭಗೀರಥರಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಾವಿರಾರು ಎಕರೆ ಪ್ರದೇಶಕ್ಕೆ ಈ ಪಿಕಪ್‌ ಡ್ಯಾಂ ನೀರು ಒದಗಿಸುವ ಮೂಲಕ ಅನ್ನದಾತರ ಬದುಕಿಗೆ ಆಶಾಕಿರಣವಾಗಲಿ ಎಂಬುದು ಎಲ್ಲರ ಆಶಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next