ಗೊರೇಬಾಳ: ಸಿಂಧನೂರ ತಾಲೂಕಿನ ಗೊರೇಬಾಳ ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ವಿವಿಧ ಇಲಾಖೆ ಅಧಿಕಾರಿಗಳು ಕೊರೊನಾ ವೈರಸ್ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.
ಪಿಡಿಒ ಪೂರ್ಣಿಮಾ ಮಾತನಾಡಿ, ಚೀನಾ ದೇಶದಲ್ಲಿ ಹರಡಿದ ಕೊರೊನಾ ರೋಗ ಭಾರತ ಸೇರಿದಂತೆ 114 ದೇಶಗಳಲ್ಲಿ ಹರಡಿದೆ. ಕಳೆದ ಒಂದು ವಾರದಿಂದ ನಮ್ಮ ರಾಜ್ಯದಲ್ಲಿ ವ್ಯಾಪಿಸಿದೆ. ಈ ರೋಗ ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದರು.
ಗೊರೇಬಾಳ ಗ್ರಾಮದ ಪ್ರಾಥಮಿಕ ಉಪ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಚಾಂದಬಾಷಾ ಮಾತನಾಡಿ, ನೆಗಡಿ, ಕೆಮ್ಮು, ಜ್ವರ, ಉಸಿರಾಟದ ತೊಂದರೆ ಕೊರೊನಾ ರೋಗದ ಲಕ್ಷಣಗಳಾಗಿವೆ. ಇಂತಹ ಲಕ್ಷಣ ಕಂಡುಬಂದರೆ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳಬೇಕು. ಕೆಮ್ಮುವಾಗ, ಸೀನುವಾಗ,ಮುಖಕ್ಕೆ ಮಾಸ್ಕ್ ಅಥವಾ ಕರವಸ್ತ್ರ, ಇಲ್ಲವೇ ಬಟ್ಟೆ ಬಳಸಬೇಕು ಎಂದು ಸಲಹೆ ನೀಡಿದರು.
ಗ್ರಾಮ ಲೆಕ್ಕಾ ಧಿಕಾರಿ ಶ್ರೀನಿವಾಸ ಮಾತನಾಡಿ, ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ನಡೆಯುವ ವಾರದ ಸಂತೆ, ಜಾತ್ರೆ, ಮದುವೆ ಸೇರಿದಂತೆ ನೂರಾರು ಜನ ಸೇರುವ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಇದಕ್ಕೆ ಗ್ರಾಮಸ್ಥರು ಸಹಕರಿಸಬೇಕು ಎಂದರು.
ಕಿರಿಯ ಆರೋಗ್ಯ ಸಹಾಯಕ ವೆಂಕಟೇಶ, ಸ.ಹಿ.ಪ್ರಾ. ಶಾಲೆ ಹಿರಿಯ ಶಿಕ್ಷಕ ನಾಗನಗೌಡ, ಎಪಿಎಂಸಿ ಮಾಜಿ ನಿರ್ದೇಶಕರಾದ ಎಂ.ರಂಗನಗೌಡ, ಎನ್.ಶರಣೇಗೌಡ, ಸರಕಾರಿ ಪ್ರೌಢಶಾಲೆ ಎಸ್‌ಡಿಎಂಸಿ ಉಪಾಧ್ಯಕ್ಷ ಆರ್.ಬಸನಗೌಡ, ಸ.ಹಿ.ಪ್ರಾ.ಶಾಲೆ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಎನ್.ಬಸವರಾಜಪ್ಪಗೌಡ, ನಿವೃತ ಗ್ರಂಥಪಾಲಕ ಚಂದ್ರಪ್ಪಗೌಡ ಗಾಣದಾಳ, ಶರಣೇಗೌಡ ಪೊಲೀಸ್ ಪಾಟೀಲ, ಆರ್. ವೀರೇಶಗೌಡ ಸೇರಿದಂತೆ ಇತರರು ಇದ್ದರು.