Advertisement

ಕಾರ್ಮಿಕರ ವ್ಯವಸ್ಥಿತ ಶೋಷಣೆ

03:49 PM Jun 23, 2019 | Team Udayavani |

ಗೊರೇಬಾಳ: ವಿವಿಧ ಕೈಗಾರಿಕೆಗಳು, ಸಾರ್ವಜನಿಕ ವಲಯಗಳು, ರೈತರು, ಕೃಷಿ ಕಾರ್ಮಿಕರು ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಂಪತ್ತು ಸೃಷ್ಟಿ ಮಾಡುವ ಶ್ರಮಿಕರನ್ನು ವ್ಯವಸ್ಥಿತವಾಗಿ ಶೋಷಿಸಲಾಗುತ್ತಿದೆ ಎಂದು ಭಾರತ ಕಮ್ಯುನಿಸ್ಟ ಪಕ್ಷದ ರಾಜ್ಯ ಘಟಕ ಸಹ ಕಾರ್ಯದರ್ಶಿ ಡಾ| ಜನಾರ್ದನ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ದಢೇಸುಗೂರು ಗ್ರಾಮದಲ್ಲಿ ಎಐಟಿಯುಸಿ ಜಿಲ್ಲಾ ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರದಲ್ಲಿ ಐದು ವರ್ಷ ಆಡಳಿತ ನಿರ್ವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಐದಾರು ದಶಕಗಳ ಕಾಲ ಹೋರಾಡಿ ಪಡೆದ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಶ್ರಮಿಕ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ. ಈಗ ಪುನಃ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಸರ್ಕಾರದಿಂದ ದುಡಿಯುವ ಜನರ ಮೇಲೆ ಸರಣಿ ಪ್ರಹಾರಗಳು ನಡೆಯಲಿವೆ. ಆದ್ದರಿಂದ ಕಾರ್ಮಿಕರು, ರೈತರು, ಮಹಿಳೆಯರು, ವಿದ್ಯಾರ್ಥಿ-ಯುವಜನರು ಐಕ್ಯತೆಯಿಂದ ಹೋರಾಟಕ್ಕೆ ಸಿದ್ಧರಾಗಬೇಕಾಗಿದೆ ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಮಿಕ ಮುಖಂಡ ಇಸ್ಮಾಯಿಲ್ ಮಾತನಾಡಿ, ಕಾರ್ಮಿಕರು ಆತ್ಮವಿಶ್ವಾಸದಿಂದ ಹೋರಾಡಿದರೆ ಉದ್ದೇಶಿತ ಗುರಿ ಮಟ್ಟುವುದರಲ್ಲಿ ಅನುಮಾನವಿಲ್ಲ. ವಿನಾಕಾರಣ ಸೇವೆಯಿಂದ ಅಮಾನ್ಯಗೊಳಿಸಿದ ಹಟ್ಟಿ ಚಿನ್ನದಗಣಿ ಕಾರ್ಮಿಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕಾನೂನುಬದ್ಧವಾಗಿ ಹೋರಾಡುವ ಮೂಲಕ ನ್ಯಾಯ ಪಡೆದ ಸಂಗತಿಯನ್ನು ಉದಾಹರಿಸಿದರು.

ಅಧ್ಯಕ್ಷತೆ ವಹಿಸಿದ್ದ ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಶಫಿ ಮಾತನಾಡಿ, ದುಡಿಯುವ ಜನರ ಸಂಕಷ್ಟ ವಿಮೋಚನೆಗೆ ಹೋರಾಟವೇ ಮಾರ್ಗ. ಆದ್ದರಿಂದ ಕಾರ್ಮಿಕ ವರ್ಗ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಡಿ ಸರ್ಕಾರವನ್ನು ಎಚ್ಚರಿಸಬೇಕಿದೆ ಎಂದರು.

ಅಂಗನವಾಡಿ ಫೆಡರೇಶನ್‌ ಜಿಲ್ಲಾ ಅಧ್ಯಕ್ಷ ಡಿ.ಎಚ್.ಕಂಬಳಿ ಮಾತನಾಡಿ, ಕಾರ್ಮಿಕರು ತಮ್ಮ ನ್ಯಾಯೋಚಿತ ಬೇಡಿಕೆಗಳ ಈಡೇರಿಕೆಗಾಗಿ ಬೀದಿಗಿಳಿದು ಹೋರಾಟ ಮಾಡಿದರೂ ಸಹ ಸರ್ಕಾರ ಸ್ಪಂದಿಸುತ್ತಿಲ್ಲ. ಬದಲಾಗಿ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದರು.

Advertisement

ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಬಾಷುಮಿಯಾ, ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಸಂಘದ ಅಧ್ಯಕ್ಷ ಶಾಂತಪ್ಪ ಅನ್ವರಿ, ಅಂಗನವಾಡಿ ಫೆಡರೇಶನ್‌ ಮಾನ್ವಿ ಘಟಕದ ಅಧ್ಯಕ್ಷೆ ಚನ್ನಮ್ಮ, ರಾಜ್ಯ ಸಮಿತಿ ಸದಸ್ಯರಾದ ತಿಪ್ಪಯ್ಯಶೆಟ್ಟಿ, ಗಿರಿಜಮ್ಮ, ಹಮಾಲರ ಸಂಘದ ಗೌರವಾಧ್ಯಕ್ಷ ವೆಂಕನಗೌಡ ಗದ್ರಟಗಿ, ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ ಯೂನಿಯನ್‌ ವಿಭಾಗೀಯ ಅಧ್ಯಕ್ಷ ಪೀರಸಾಬ್‌ ಮಾತನಾಡಿದರು. ಲಕ್ಷ್ಮೀ ದಢೇಸುಗೂರು, ಶಾಂತಾ ಗೊರೇಬಾಳ, ತ್ರಿವೇಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next