Advertisement

ಪಾಳು ಬಿದ್ದ ಧಡೇಸುಗೂರು ಕೃಷಿ ತರಬೇತಿ ಕೇಂದ್ರ

12:18 PM Jan 10, 2020 | Naveen |

ಗೊರೇಬಾಳ: ರಾಯಚೂರು ಜಿಲ್ಲೆಯ ರೈತರಿಗೆ ಕೃಷಿ ಚಟುವಟಿಕೆಗೆ ಪೂರಕವಾಗಿ ಮಾಹಿತಿ ಮತ್ತು ತರಬೇತಿ ನೀಡಲು ಆರಂಭಿಸಿದ್ದ ಸಿಂಧನೂರು ತಾಲೂಕಿನ ಧಡೇಸೂಗೂರು ಗ್ರಾಮದ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಸಿಬ್ಬಂದಿ ಕೊರತೆ ಮತ್ತು ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ.

Advertisement

ಸುತ್ತಲೂ ಜಾಲಿಗಿಡಗಳು ಬೆಳೆದಿವೆ. ದಶಕಗಳ ಹಿಂದೆ ಆರಂಭಗೊಂಡ ಜಿಲ್ಲಾ ಕೃಷಿ ಕೇಂದ್ರದ ವ್ಯಾಪ್ತಿಯಲ್ಲಿ 70 ಎಕರೆಯಷ್ಟು ಭೂಮಿ ಇದೆ. ಈ ಭೂಮಿಯಲ್ಲಿ ಪ್ರಾರಂಭದಲ್ಲಿ ಭತ್ತ ಸೇರಿ ನಾನಾ ಬೆಳೆ ಬೆಳೆಯಲಾಗುತ್ತಿತ್ತು. ತಾಲೂಕುವಾರು ಕೃಷಿ ಇಲಾಖೆಯಿಂದ ಆಯ್ಕೆಯಾಗಿ ಕೇಂದ್ರಕ್ಕೆ ತರಬೇತಿಗೆಂದು ಬರುವ ರೈತರಿಗೆ, ಕೃಷಿ ಮಾದರಿ, ಬೆಳೆಯ ತಳಿಗಳ ಕುರಿತು ಪರಿಚಯಿಸುವ ಕೆಲಸ ಮಾಡಲಾಗುತ್ತಿತ್ತು. ಆದರೀಗ ರೈತರಿಗೆ ನೀಡುವ ತರಬೇತಿ ಬಾಯಿಪಾಠಕ್ಕಷ್ಟೇ ಸೀಮಿತವಾಗಿದ್ದು, ಉಳಿದಂತೆ ಭೂಮಿ ಬರಡಾಗಿ, ಜಾಲಿಬೇಲಿ ಬೆಳೆದು ನಿಂತಿದೆ.

ತರಬೇತಿ: ಕೃಷಿ ಕೇಂದ್ರಕ್ಕೆ ಬರುವ ರೈತರಿಗೆ ಸಮಗ್ರ ಕೃಷಿ ಪದ್ಧತಿ, ಕೃಷಿಯಲ್ಲಿ ಹೊಸ ತಾಂತ್ರಿಕತೆ, ಮಹಿಳೆಯರಿಗೆ ಹೈನುಗಾರಿಕೆ ತರಬೇತಿ, ಕೃಷಿಯಲ್ಲಿ ಆದಾಯ ಹೆಚ್ಚಳ ಸೇರಿದಂತೆ ವಿವಿಧ ವಿಷಯ ಕುರಿತು ತರಬೇತಿ ನೀಡಲಾಗುತ್ತಿದೆ. ತರಬೇತಿಗಾಗಿ ಕೊಠಡಿ ಸೇರಿ ಅಗತ್ಯ ಸೌಕರ್ಯಗಳಿವೆ.

ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಸಾಗಬೇಕಿದ್ದ ಕೃಷಿ ತರಬೇತಿ ಕೇಂದ್ರ ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿದೆ. ಅಗತ್ಯ ಭೂಮಿ, ನೀರು ಸೌಲಭ್ಯ ಇದ್ದರೂ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಯದೇ ಪಾಳು ಬಿದ್ದಿದೆ. ರೈತರ ಕೃಷಿ ಚಟುವಟಿಕೆಗೆ ಪೂರಕವಾಗಬೇಕಿದ್ದ ತರಬೇತಿ ಕೇಂದ್ರದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ನಿಷ್ಕಾಳಜಿ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ನದಿ ನೀರು ಬಳಕೆಗೆ ಅವಕಾಶ: ಕೃಷಿ ತರಬೇತಿ ಕೇಂದ್ರ ಪಕ್ಕದಲ್ಲಿ ತುಂಗಭದ್ರಾ ನದಿ ಹರಿಯುತ್ತಿದೆ. ಈ ನದಿ ನೀರನ್ನೇ ಬಳಕೆ ಮಾಡಿ ಭೂಮಿಯಲ್ಲಿ ಬೆಳೆ ಬೆಳೆಯಬಹುದು. ಆದರೆ ಯಾರೂ ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಲ್ಲ. ಜಾಲಿಬೇಲಿ ಬೆಳೆದಿರುವ ಭೂಮಿಯಲ್ಲಿ ಮದ್ಯ ಸೇವನೆ ಸೇರಿ, ಇಸ್ಪೀಟ್‌ ಆಡುವವರ ಹಾವಳಿಯೂ ಹೆಚ್ಚಿದೆ. ಆಗಾಗ ಪೊಲೀಸರು ದಾಳಿ ನಡೆಸಿ, ಅಕ್ರಮ ಚಟುವಟಿಕೆ ನಡೆಸುವವರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಹೀಗಾಗಿ ಜನರಲ್ಲೂ ಈ ಬಗ್ಗೆ ಜಾಗೃತಿ ಮೂಡುವ ಅವಶ್ಯಕತೆ ಇದೆ. ಕೃಷಿ ಕೇಂದ್ರದ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳು ಆರಂಭವಾಗಬೇಕಿದೆ.

Advertisement

ಸಿಬ್ಬಂದಿ ಕೊರತೆ
ತರಬೇತಿ ಕೇಂದ್ರದಲ್ಲಿ ಸಹಾಯಕ ನಿರ್ದೇಶಕರು-1, ಸಹಾಯಕ ಕೃಷಿ ರೈತ ಮಹಿಳೆ-1, ಕೃಷಿ ಅಧಿಕಾರಿ-3, ಅಧೀಕ್ಷಕರು-1, ಪ್ರಥಮ ದರ್ಜೆ ಸಹಾಯಕರು-2, ಬಾಣಸಿಗ-1, ಗ್ರೂಪ್‌ ಡಿ-2 ಹುದ್ದೆ ಸೇರಿ ಒಟ್ಟು 12 ಹುದ್ದೆಗಳು ಇವೆ. ಆದರೀಗ ಸಹಾಯಕ ಕೃಷಿ ನಿರ್ದೇಶಕರು, ಬಾಣಸಿಗ, ಪ್ರದಸ-1, ಡಿ ಗ್ರೂಪ್‌-2 ನೌಕರರು ಮಾತ್ರ ಸೇವೆಯಲ್ಲಿದ್ದು, ಉಳಿದ ಅಧಿ ಕಾರಿ, ಸಿಬ್ಬಂದಿ ಇಲ್ಲ. ಮುಖ್ಯವಾಗಿ ಕೃಷಿ ಅಧಿಕಾರಿಗಳ ಹುದ್ದೆ ಖಾಲಿ ಇರುವುದರಿಂದ ಮೇಲಾಧಿಕಾರಿಗಳಿಗೂ ಸಮಸ್ಯೆಯಾಗುತ್ತಿದೆ. ಅಗತ್ಯ ಸಿಬ್ಬಂದಿ ಇದ್ದಿದ್ದರೆ ಮಾದರಿ ಕೃಷಿ ತರಬೇತಿ ಕೇಂದ್ರ ನಿರ್ಮಾಣ ಸಾಧ್ಯ ಎಂಬ ಅಭಿಪ್ರಾಯ ಅಧಿಕಾರಿಗಳದ್ದಾಗಿದೆ.

ಕೃಷಿ ತರಬೇತಿ ಕೇಂದ್ರವನ್ನು ಅಭಿವೃದ್ಧಿಪಡಿಸುವ ಚಿಂತನೆ ಇದೆ. ನಾನು ಹೊಸದಾಗಿ ಬಂದಿದ್ದೇನೆ. ಲಭ್ಯ ಭೂಮಿಯಲ್ಲಿ ಜಾಲಿ ಬೆಳೆದಿದ್ದು, ಮುಂದಿನ ದಿನಗಳಲ್ಲಿ ಅದನ್ನು ಸ್ವಚ್ಛಗೊಳಿಸಲಾಗುವುದು. ಈ ಕುರಿತಾಗಿ ಮೇಲಾಧಿಕಾರಿಗಳಿಗೆ ವರದಿ ನೀಡಲಾಗುವುದು. ಮುಂದಿನ ಆರ್ಥಿಕ ವರ್ಷದಲ್ಲಿ ಅಭಿವೃದ್ಧಿ ಆಗುವ ವಿಶ್ವಾಸವಿದೆ. ಇಲ್ಲಿ ತುಂಬಾ ಒಳ್ಳೆಯ ವಾತಾವರಣವಿದ್ದು, ನಾನಾ ತಳಿಯ ಬೆಳೆ ಪದ್ದತಿ ಸೇರಿ ರೈತರಿಗೆ ಅನುಕೂಲವಾಗುವಂತಹ ಕಾರ್ಯಕ್ರಮ ರೂಪಿಸಲಾಗುವುದು.
ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕರು,
ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಸಿಂಧನೂರು.

Advertisement

Udayavani is now on Telegram. Click here to join our channel and stay updated with the latest news.

Next