Advertisement

ಗಾಂಧಿ ಮೊಮ್ಮಗ ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ

03:40 AM Jul 12, 2017 | Team Udayavani |

ಹೊಸದಿಲ್ಲಿ: ಮಹಾತ್ಮಾ ಗಾಂಧೀಜಿ ಅವರ ಮೊಮ್ಮಗ, ಪಶ್ಚಿಮ ಬಂಗಾಲದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರನ್ನು ವಿಪಕ್ಷಗಳು ಉಪರಾಷ್ಟ್ರಪತಿ ಚುನಾವಣೆಗೆ ತಮ್ಮ ಒಮ್ಮತದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿಕೊಂಡಿವೆ. 18 ಪಕ್ಷಗಳು ಮಂಗಳವಾರ ದಿಲ್ಲಿಯಲ್ಲಿ ಸಭೆ ಸೇರಿದ್ದು, ಈ ವೇಳೆ ಗಾಂಧಿ ಅವರ ಹೆಸರನ್ನು ಅಂತಿಮಗೊಳಿಸಿವೆ. ಅವರೊಬ್ಬರ ಹೆಸರೇ ಅಭ್ಯರ್ಥಿ ಸ್ಥಾನಕ್ಕೆ ಕೇಳಿಬಂದಿತ್ತು ಎಂದು ಮೂಲಗಳು ಹೇಳಿವೆ.

Advertisement

ಅಚ್ಚರಿ ಎಂದರೆ, ರಾಷ್ಟ್ರಪತಿ ಅಭ್ಯರ್ಥಿಗೆ ಬೆಂಬಲ ವಿಚಾರದಲ್ಲಿ ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್‌ ಅವರನ್ನು ಬೆಂಬಲಿಸಿದ್ದ ಜೆಡಿಯು ಪಕ್ಷ, ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ವಿಪಕ್ಷಗಳು ಕರೆದಿದ್ದ ಸಭೆಗೆ ಹಾಜರಾಗಿತ್ತು. ಜೆಡಿಯು ನಾಯಕ ಶರದ್‌ ಯಾದವ್‌ ಸಹಿತ ಕಾಂಗ್ರೆಸ್‌ ಅಧ್ಯಕ್ಷೆ ಸೋನಿ ಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಟಿಎಂಸಿಯ ಡೆರೆಕ್‌ ಒಬ್ರಿಯಾನ್‌, ಸಿಪಿಎಂನ ಸೀತಾರಾಂ ಯೆಚೂರಿ, ನ್ಯಾಶನಲ್‌ ಕಾನ್ಫರೆನ್ಸ್‌ನ ಉಮರ್‌ ಅಬ್ದುಲ್ಲಾ, ಎಸ್‌ಪಿಯ ನರೇಶ್‌ ಅಗರ್‌ವಾಲ್‌, ಬಿಎಸ್‌ಪಿಯ ಸತೀಶ್‌ ಚಂದ್ರ ಮಿಶ್ರಾ ಸಭೆಯಲ್ಲಿ ಹಾಜರಿದ್ದರು. ಅಗತ್ಯ ಬಿದ್ದರೆ ಆ.5 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಅದೇ ದಿನ ಮಧ್ಯಾಹ್ನ ಅನಂತರ ಮತ ಎಣಿಕೆ ನಡೆಯಲಿದೆ.

ಗಾಂಧಿ ಒಮ್ಮತದ ಅಭ್ಯರ್ಥಿ: ‘ಗೋಪಾಲಕೃಷ್ಣ ಗಾಂಧಿಯವರು ಉಪರಾಷ್ಟ್ರಪತಿ ಚುನಾವಣೆಗೆ ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿದ್ದಾರೆ. ನಾವೆಲ್ಲರೂ ಅವರನ್ನು ಆಯ್ಕೆ ಮಾಡಿದ್ದೇವೆ’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತ ಹೇಳಿದ್ದಾರೆ. ನಾವು ನಮ್ಮ ನಿರ್ಧಾರವನ್ನು ಗಾಂಧಿ ಅವರಿಗೆ ತಿಳಿಸಿದ್ದು, ಅವರೂ ಇದಕ್ಕೆ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ ಸೋನಿಯಾ. ಗೋಪಾಲಕೃಷ್ಣ ಗಾಂಧಿ ಅವರನ್ನು ಇದಕ್ಕೂ ಮೊದಲು ಸಿಪಿಎಂ ರಾಷ್ಟ್ರಪತಿ ಅಭ್ಯರ್ಥಿಯಾಗಿ ಶಿಫಾರಸು ಮಾಡಿತ್ತು. ಆದರೆ ಕಾಂಗ್ರೆಸ್‌ ಒಲವು ಮೀರಾ ಕುಮಾರ್‌ ಅವರ ಪರವಾಗಿ ಇದ್ದುದರಿಂದ ಅವರನ್ನೇ ಆಯ್ಕೆ ಮಾಡಲಾಗಿತ್ತು.

ಇದೇ ವೇಳೆ, 18 ವಿಪಕ್ಷಗಳು ತಿಂಗಳಿಗೊಮ್ಮೆ ಸಭೆ ಸೇರಿ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲು ನಿರ್ಧರಿಸಿವೆ. ಸರ್ಕಾರವನ್ನು ಒಗ್ಗಟ್ಟಾಗಿ ಎದುರಿಸಲು ಹಾಗೂ ಸಮನ್ವಯತೆ ಕಾಪಾಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟಿಎಂಸಿ ನಾಯಕ  ಒಬ್ರಿಯಾನ್‌ ತಿಳಿಸಿದ್ದಾರೆ.

ಯಾರಿವರು ಗೋಪಾಲಕೃಷ್ಣ ಗಾಂಧಿ?
ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ 71ರ ಹರೆಯದ ಗೋಪಾಲಕೃಷ್ಣ ದೇವದಾಸ್‌ ಗಾಂಧಿ ಅವರು ಮಹಾತ್ಮಾ ಗಾಂಧಿ ಮತ್ತು ಸಿ.ರಾಜಗೋಪಾಲಾಚಾರಿ (ತಾಯಿಯ ತಂದೆ) ಅವರ ಮೊಮ್ಮಗರಾಗಿದ್ದು, ತಮ್ಮ ಸ್ವಂತ ವ್ಯಕ್ತಿತ್ವದಿಂದ ಮಿಂಚಿದವರು. ಇವರು ಚಿಂತಕರಾಗಿ, ಬರಹಗಾರರಾಗಿಯೂ ಪ್ರಸಿದ್ಧರು. ನಿವೃತ್ತ‌ ಐಎಎಸ್‌ ಅಧಿಕಾರಿಯಾಗಿರುವ ಗಾಂಧಿ ಬಹುಕಾಲ ತಮಿಳುನಾಡಿನಲ್ಲಿ ಸೇವೆ ಸಲ್ಲಿಸಿದ್ದು, ಭಾರತದ ರಾಯಭಾರಿಯಾಗಿ ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಲೆಸೆತೋ, ನಾರ್ವೆ, ಐಸ್‌ಲ್ಯಾಂಡ್‌ಗಳಲ್ಲಿ ಕೆಲಸ ಮಾಡಿದ್ದಾರೆ. 1985-87ರ ಹೊತ್ತಿನಲ್ಲಿ ಉಪರಾಷ್ಟ್ರಪತಿಗಳಿಗೆ ಕಾರ್ಯದರ್ಶಿಯಾಗಿ, 1987-92ರ ಅವಧಿಯಲ್ಲಿ ರಾಷ್ಟ್ರಪತಿಯವರ ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. 2004-09ರ ಅವಧಿಯಲ್ಲಿ ಪಶ್ಚಿಮ ಬಂಗಾಲದ ರಾಜ್ಯಪಾಲರಾಗಿದ್ದರು.

Advertisement

ಉಪರಾಷ್ಟ್ರಪತಿ ಅಭ್ಯರ್ಥಿಯಾಗುವಂತೆ ಕೇಳುವಾಗ ಎಲ್ಲ 18 ವಿಪಕ್ಷಗಳು ತೋರಿದ ಒಗ್ಗಟ್ಟು ಮತ್ತು ಬದ್ಧತೆಯನ್ನು ನಾನು ಶ್ಲಾ ಸುತ್ತೇನೆ. ಬಹಳ ಗಂಭೀರವಾಗಿ ನಾನು ಈ ನಾಮನಿರ್ದೇಶನವನ್ನು ಒಪ್ಪಿಕೊಂಡಿದ್ದೇನೆ.
– ಗೋಪಾಲಕೃಷ್ಣ ಗಾಂಧಿ

Advertisement

Udayavani is now on Telegram. Click here to join our channel and stay updated with the latest news.

Next