ಸಾಗರ: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ. ಐದು ವರ್ಷ ಅಭಾಧಿತವಾಗಿ ಬಡವರಿಗೆ ರಾಜ್ಯ ಸರ್ಕಾರದ ಐದೂ ಗ್ಯಾರಂಟಿಗಳು ತಲುಪಬೇಕು ಎನ್ನುವುದು ನನ್ನ ಅಭಿಲಾಷೆ ಎಂದು ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿಲ್ಲ. ನಮ್ಮ ಕ್ಷೇತ್ರಗಳಿಗೆ ಅಭಿವೃದ್ಧಿ ಅನುದಾನಗಳು ಎಂದಿನಂತೆ ಬರುತ್ತಿದೆ ಎಂದು ಹೇಳಿದರು.
ಗ್ಯಾರಂಟಿಗಾಗಿ 55,000 ಕೋಟಿ ರೂ. ಮೀಸಲಿರಿಸಲಾಗಿದೆ. ಪೆಟ್ರೋಲ್ ಡಿಸೇಲ್ ದರ ಹೆಚ್ಚಳ ಮಾಡಿರುವುದು ಸಮಗ್ರ ಅಭಿವೃದ್ಧಿಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾಡುವ ಉದ್ದೇಶದಿಂದಲೇ ವಿನಾ ಜನರ ಮೇಲೆ ಕೋಪ ತೀರಿಸಿಕೊಳ್ಳಲು ಅಲ್ಲ. ಬಿಜೆಪಿಯವರು ನೀಡುತ್ತಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದರು.
ನಮ್ಮ ಸರ್ಕಾರ 3 ರೂ. ಪೆಟ್ರೋಲ್‌ಗೆ, 3.50 ರೂ. ಡಿಸೇಲ್‌ಗೆ ಜಾಸ್ತಿ ಮಾಡಿದೆ. ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿಯೇ ಇಂಧನ ಬೆಲೆ ಕಡಿಮೆ ಇದೆ. ಹಿಂದೆ 60 ರೂ. ಇದ್ದ ಇಂಧನ ಬೆಲೆಯನ್ನು 90 ರೂ.ಗೆ ಹೆಚ್ಚಿಸಿದ್ದು, 400 ರೂ. ಇದ್ದ ಅಡುಗೆ ಅನಿಲವನ್ನು 1000 ರೂ.ಗೆ ಹೆಚ್ಚಿಸಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಎನ್ನುವುದನ್ನು ಬಹುಶ್ಯಃ ಬಿಜೆಪಿಯವರು ಮರೆತಂತೆ ಕಾಣುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರ ಕಡಿಮೆ ಆಗಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡುತ್ತಿಲ್ಲ ಎಂದರು.
ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು ರಾಜ್ಯ ಸರ್ಕಾರಕ್ಕೆ ಹಣ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದೆ. ಸುಪ್ರೀಂಕೋರ್ಟ್ ತೀರ್ಪಿನ ನಂತರ ಅಲ್ಪ ಪ್ರಮಾಣದ ಹಣ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರದ ಪಾಲಿನ ೧೮ ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಿದ್ದರೆ ಸರ್ಕಾರಕ್ಕೆ ಅನುಕೂಲವಾಗುತಿತ್ತು. ಬಿಜೆಪಿಯವರು ರಾಜ್ಯ ಸರ್ಕಾರಕ್ಕೆ ಹಣ ಬಿಡುಗಡೆ ಮಾಡಿ ಎಂದು ಕೇಂದ್ರದಲ್ಲಿ ಹೋಗಿ ಪ್ರತಿಭಟನೆ ಮಾಡಬೇಕಾಗಿತ್ತು. ಇಲ್ಲಿ ಪ್ರತಿಭಟನೆ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.