Advertisement

ನವಭಾರತ ನಿರ್ಮಾಣಕ್ಕೆ ಗೋಪಾಲಕೃಷ್ಣನ್‌ ಕರೆ

12:33 AM Nov 16, 2019 | mahesh |

ಉಡುಪಿ: ಮುಂಬರುವ ದಶಕದಲ್ಲಿ ಜಾಗತಿಕ ಮತ್ತು ಆರ್ಥಿಕತೆಯಲ್ಲಿ ದೇಶವನ್ನು ಮುನ್ನಡೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದಕ್ಕೆ ಬೇಕಿರುವ ಎಲ್ಲ ಕೌಶಲ ಮತ್ತು ಸಾಮರ್ಥ್ಯ ಇಂದಿನ ವಿದ್ಯಾರ್ಥಿಗಳಲ್ಲಿವೆ. ಈ ಮೂಲಕ ಯುವ ಸಮುದಾಯ ನವ ಭಾರತವನ್ನು ನಿರ್ಮಿಸ ಬೇಕಾಗಿದೆ ಎಂದು ಬೆಂಗಳೂರಿನ ಆ್ಯಕ್ಸಿಲರ್‌ ವೆಂಚರ್ ಪೈ.ಲಿ.ನ ಚೇರ್ಮನ್‌ ಎಸ್‌. ಗೋಪಾಲಕೃಷ್ಣನ್‌ (ಕ್ರಿಸ್‌) ಹೇಳಿದರು.  ಕೆಎಂಸಿ ಗ್ರೀನ್ಸ್‌ನಲ್ಲಿ ಶುಕ್ರವಾರ ನಡೆದ ಮಣಿಪಾಲ ಮಾಹೆ ವಿಶ್ವವಿದ್ಯಾಲಯದ 27ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

Advertisement

ತಂತ್ರಜ್ಞಾನದ ಫ್ಯೂಶನ್‌
ಇದು ನಾಲ್ಕನೇ ಕೈಗಾರಿಕಾ ಕ್ರಾಂತಿಯ ಯುಗವಾಗಿದ್ದು, ನಾವಿಂದು ಪ್ರತಿಯೊಂದಕ್ಕೂ ತಂತ್ರಜ್ಞಾನಗಳ ಮೊರೆ ಹೊಗುತ್ತಿದ್ದೇವೆ. ಭೌತಿಕ, ಡಿಜಿಟಲ್‌ ಮತ್ತು ಜೈವಿಕ ಕ್ಷೇತ್ರ ಗಳ ನಡುವೆ ತಂತ್ರಜ್ಞಾನದ ಫ್ಯೂಶನ್‌ ಕಂಡುಬರುತ್ತಿದೆ. ಡಿಜಿಟಲ್‌ ಕಂಪ್ಯೂಟರಿಂಗ್‌, ಹೈಸ್ಪೀಡ್‌ ಇಂಟರ್‌ನೆಟ್‌, ಮೊಬೈಲ್‌ ಫೋನ್‌, ಸಾಮಾಜಿಕ ಜಾಲತಾಣಗಳು, ಡ್ರೋನ್‌, ನ್ಯಾನೋ ತಂತ್ರಜ್ಞಾನಗಳನ್ನು ಒಳಗೊಂಡ ತಾಂತ್ರಿಕ ಯುಗ ಎಂದು ವ್ಯಾಖ್ಯಾನಿ ಸಲಾಗುತ್ತಿದೆ ಎಂದರು.

ಹೊಸ ತಂತ್ರಜ್ಞಾನಗಳ ಆವಿಷ್ಕಾರ
ತಂತ್ರಜ್ಞಾನದ ಮೂಲಕ ಹೊಸ ಆವಿಷ್ಕಾರಗಳನ್ನು ಮಾಡಿದ ಮೈಕ್ರೋಸಾಫ್ಟ್, ಅಮೆಜಾನ್‌, ಆ್ಯಪಲ…, ಆಲ್ಫಾಬೆಟ್‌, ಫೇಸ್‌ಬುಕ್‌ ಸಹಿತ ಎಲ್ಲ ಸ್ಟಾರ್ಟ್‌ಅಪ್‌ಗ್ಳು ಇಂದು ವಿಶ್ವದಲ್ಲಿ ಅತಿದೊಡ್ಡ ಮಾರುಕಟ್ಟೆ ಬಂಡವಾಳ ಹೊಂದಿವೆ. ವೇಗದ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಲು ಕೃತಕ ಬುದ್ಧಿಮತ್ತೆ ಅಗತ್ಯ. ಪದವೀಧರರು ತಂತ್ರಜ್ಞಾನ ಮತ್ತು ಉದ್ಯಮದ ಬದಲಾವಣೆಗಳನ್ನು ತಮ್ಮ ವೃತ್ತಿಜೀವನವನ್ನು ನಿರ್ಮಿಸುವ ಅವಕಾಶಗಳಾಗಿ ನೋಡಬೇಕು ಎಂದು ಅವರು ಸಲಹೆ ನೀಡಿದರು.

ವೃತ್ತಿಪರರು ಅಥವಾ ಉದ್ಯಮಿಯಾಗ ಬೇಕೆಂದು ನೀವು ಬಯಸಿದಲ್ಲಿ ಸಮರ್ಪಣೆ, ಶಿಸ್ತು, ಉತ್ಸಾಹ, ನಾಯಕತ್ವ, ಸಂವಹನ, ನೆಟ್‌ವರ್ಕಿಂಗ್‌ ಮತ್ತು ಪರಾನುಭೂತಿಯ ಮೂಲ ಗುಣಲಕ್ಷಣಗಳು ಅತೀ ಅಗತ್ಯ ಎಂದರು.

ಕುಲಪತಿ ಡಾ| ಎಚ್‌. ವಿನೋದ ಭಟ್‌ ಸ್ವಾಗತಿಸಿದರು. ಮಾಹೆಯ ಬಗ್ಗೆ ಅವಲೋಕನ ಮಾಡಿದರು. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಘಟಿಕೋತ್ಸವವನ್ನು ಘೋಷಿ ಸಿದರು. ಮಾಹೆಯ ಟ್ರಸ್ಟಿ ವಸಂತಿ ಆರ್‌. ಪೈ, ಎಂಇಎಂಜಿ ಚೇರ್ಮನ್‌ ಡಾ| ರಂಜನ್‌ ಆರ್‌. ಪೈ, ರಿಜಿಸ್ಟ್ರಾರ್‌ ಡಾ| ನಾರಾಯಣ ಸಭಾಹಿತ್‌, ಸಹಕುಲಪತಿಗಳಾದ ಡಾ| ತಮ್ಮಯ್ಯ, ಡಾ| ಪೂರ್ಣಿಮಾ ಬಾಳಿಗ, ಡಾ| ವಿ. ಸುರೇಂದ್ರ ಶೆಟ್ಟಿ, ಡಾ| ಪಿಎಲ್‌ಎನ್‌ಜಿ ರಾವ್‌, ವಿದ್ಯಾರ್ಥಿ ವ್ಯವಹಾರ ನಿರ್ದೇಶಕಿ ಡಾ| ಗೀತಾ ಮಯ್ಯ, ಕೆಎಂಸಿ ಡೀನ್‌ ಡಾ| ಶರತ್‌ ರಾವ್‌, ಪ್ರಮುಖರಾದ ಡಾ| ವಿನೋದ್‌ ಥೋಮಸ್‌, ಡಾ| ಶ್ಯಾಮಲಾ ಹಂದೆ ಮೊದಲಾದವರು ಉಪಸ್ಥಿತರಿದ್ದರು.

Advertisement

ಮೂವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ
ಮಂಗಳೂರಿನ ಮಣಿಪಾಲ ಡೆಂಟಲ್ಸ್‌ ಸೈನ್ಸ್‌ ಕಾಲೇಜಿನ ಗೌರವ್‌ ರಾವತ್‌ ಮತ್ತು ರಾಧಿಕಾ, ಮಣಿಪಾಲ ಸ್ಕೂಲ್‌ ಆಫ್ ಲೈಫ್ ಸೈನ್ಸ್‌ನ ಸರಸ್ವತಿ ಸಂಜೀವ್‌ ಚಾವಾx ಅವರು ಡಾ| ಟಿಎಂಎ ಪೈ ಚಿನ್ನದ ಪದಕವನ್ನು ಪಡೆದರು. 1,389 ಪ.ಪೂ.ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವೀಧರರು, ಸೂಪರ್‌ ಸ್ಪೆಷಾಲಿಟಿ ಮತ್ತು ಸಂಶೋಧನ ವಿದ್ವಾಂಸರಿಗೆ ಪದವಿಗಳನ್ನು ಪ್ರದಾನ ಮಾಡಲಾಯಿತು. ಘಟಿಕೋತ್ಸವ ಇನ್ನೂ ಎರಡು ದಿನ ನಡೆಯಲಿದ್ದು, ಒಟ್ಟು ಮೂರು ದಿನಗಳಲ್ಲಿ ಒಟ್ಟು 4,177 ಪದವೀಧರರು ತಮ್ಮ ಪದವಿಗಳನ್ನು ವೈಯಕ್ತಿಕವಾಗಿ ಸ್ವೀಕರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next