ಕಾಪು : ಯಡಮೊಗೆ ಉದಯ ಗಾಣಿಗ ಕೊಲೆ ಪ್ರಕರಣದ ಬಗ್ಗೆ ವಿಸ್ತ್ರತ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ನೀಡುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಒತ್ತಾಯಿಸಲಾಗಿದೆ. ಆರೋಪಿಗಳಿಗೆ ಶಿಕ್ಷೆ ಮತ್ತು ಮೃತರ ಕುಟುಂಬಕ್ಕೆ ಸೂಕ್ತ ನ್ಯಾಯ ಸಿಗುವವರೆಗೂ ನಮ್ಮ ಪ್ರಯತ್ನಗಳು ಮುಂದುವರಿಯಲಿವೆ ಎಂದು ಮಾಜಿ ಮಾಜಿ ಶಾಸಕ ಗೋಪಾಲ ಪೂಜಾರಿ ತಿಳಿಸಿದ್ದಾರೆ.
ಕಾಪುವಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಭಟ್ ಎಂಬವರನ್ನು ರಕ್ಷಿಸಲು ಬಿಜೆಪಿ ಜಿಲ್ಲಾ ಮುಖಂಡರು ಪ್ರಯತ್ನಿಸಿದ್ದಾರೆ ಎಂಬ ಬಗ್ಗೆಯೂ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆಯೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ನೀಡಿರುವ ಮನವಿಯಲ್ಲಿ ವಿನಂತಿಸಲಾಗಿದೆ ಎಂದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಉದಯ ಗಾಣಿಗ ಅವರ ಕೊಲೆ ಪ್ರಕರಣದಲ್ಲಿ ಗ್ರಾ. ಪಂ. ಅಧ್ಯಕ್ಷ, ಸ್ಥಳೀಯ ಸೊಸೈಟಿ ಅಧ್ಯಕ್ಷ ಹಾಗೂ ಬಿಜೆಪಿ ಪದಾಧಿಕಾರಿಗಳು ಪಾಲ್ಗೊಂಡಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಇಲಾಖೆಯ ತನಿಖೆಯ ಬಗ್ಗೆ ನಮಗೆ ಪೂರ್ಣ ವಿಶ್ವಾಸವಿದ್ದು, ಕೊಲೆ ಪ್ರಕರಣದ ಆರೋಪಿಗಳಿಗೆ ಸೂಕ್ತ ಶಿಕ್ಷೆಗೊಳಪಡಿಸುವುದರ ಸಹಿತವಾಗಿ ಇಲಾಖಾ ಮಟ್ಟದಲ್ಲಿ ಶಿಫಾರಸ್ಸು ಮಾಡಿ ಅವರ ಕುಟುಂಬಕ್ಕೆ ಪರಿಹಾರ ಧನವನ್ನು ಒದಗಿಸಿಕೊಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ : ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು 100 % ಟಾರ್ಗೆಟ್ ಮಾಡಲಾಗಿದೆ : ನಟಿ ರಾಗಿಣಿ
ಕಳೆದ 3-4 ವರ್ಷಗಳ ಅಂತರದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಜನಪ್ರತಿನಿಧಿಗಳ ಮಾರ್ಗದರ್ಶದಲ್ಲಿ ಮೂರು ಕೊಲೆಗಳು ನಡೆದಿವೆ. ಬ್ರಹ್ಮಾವರ ಪ್ರವೀಣ್ ಪೂಜಾರಿ, ಕೋಟ ಅವಳಿ ಕೊಲೆ ಪ್ರಕರಣ ಮತ್ತು ಯಡಮೊಗೆ ಉದಯ ಗಾಣಿಗ ಕೊಲೆ ಪ್ರಕರಣದಲ್ಲಿ ಬಿಜೆಪಿ ಪಕ್ಷದ ಮುಖಂಡರೇ ಭಾಗಿಗಳಾಗಿದ್ದು, ಅವರ ಭಾಗೀದಾರಿಕೆಯ ಬಗ್ಗೆ ತನಿಖೆಯಲ್ಲೂ ಧೃಡಪಟ್ಟಿದೆ. ಈ ಮೂಲಕ ಬಿಜೆಪಿ ಏನನ್ನು ಸಾಧಿಸಲು ಹೊರಟಿದೆ ಎನ್ನುವುದು ಜಿಲ್ಲೆಯ ಜನತೆಯ ಎದುರು ಬಹಿರಂಗಗೊಂಡಿದೆ ಎಂದರು.
ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಸಂಯೋಜಕ ಸಯ್ಯದ್ ಯಾಸಿನ್ ಹೆಮ್ಮಾಡಿ, ಎನ್.ಎಸ್.ಯು.ಐ ಜಿಲ್ಲಾ ಕಾರ್ಯದರ್ಶಿ ಸಯ್ಯದ್ ಪುರ್ಕಾನ್ ಯಾಸಿನ್ ಮೊದಲಾದವರು ಉಪಸ್ಥಿತರಿದ್ದರು.