ಕನ್ನಡದಲ್ಲಿ ಕಥೆ, ಕಾದಂಬರಿ ಆಧಾರಿತ ಚಿತ್ರಗಳಿಗೇನೂ ಬರವಿಲ್ಲ. ಆಗಾಗ ಒಂದಷ್ಟು ಕಾದಂಬರಿ, ಕಥೆ ಆಧರಿಸಿದ ಚಿತ್ರಗಳು ಸೆಟ್ಟೇರುತ್ತಿರುತ್ತವೆ. ಈಗ ಆ ಸಾಲಿಗೆ “ಗೋಪಾಲಗಾಂಧಿ’ ಸೇರಿದೆ. ಈಗಾಗಲೇ
ಚಿತ್ರ ಪೂರ್ಣಗೊಂಡಿದ್ದು, ಇನ್ನೇನು ಬಿಡುಗಡೆಯ ಹಾದಿಯಲ್ಲಿದೆ. ಅಂದಹಾಗೆ, ಇದು “ಅನಾಮಿಕ’ ಮತ್ತು ಇತರೆ ಕಥೆಗಳು ಕಥಾಸಂಕಲನದಿಂದ ಆಯ್ದ ಕಥೆ ಚಿತ್ರ ರೂಪ ತಾಳಿದೆ. ಈ ಚಿತ್ರವನ್ನು ಎನ್.ನಾಗೇಶ್
ನಿರ್ದೇಶಿಸಿದ್ದಾರೆ. “ಅನಾಮಿಕ ಮತ್ತು ಇತರೆ ಕಥೆಗಳು’ ಪುಸ್ತಕ ಕೂಡ ಅವರೇ ಬರೆದ್ದಾರೆ. ಅಂದು
ಪುಸ್ತಕ ಬಿಡುಗಡೆ ಜೊತೆಗೆ ಚಿತ್ರದ ಹಾಡು, ಟ್ರೇಲರ್ ತೋರಿಸಲಾಯಿತು.
ಅಂದು ನಿರ್ದೇಶಕ ನಾಗೇಶ್ ಅವರ “ಅನಾಮಿಕ’ ಪುಸ್ತಕ ಬಿಡುಗಡೆ ಮಾಡುವುದರ ಜೊತೆಗೆ ಸಿನಿಮಾ ಕುರಿತು ಸುಚೇಂದ್ರ ಪ್ರಸಾದ್ ಮಾತು ಶುರುಮಾಡಿದರು. “ಇದು ಗಾಂಧೀಜಿ ಅವರ ಆದರ್ಶ, ತತ್ವ ಹೊಂದಿರುವ ಕಥೆ. ಈ ಸಿನಿಮಾ ಮೂಲಕ ಪರಿಸರ, ಶಿಕ್ಷಣ, ಸ್ವಚ್ಛತೆ, ಗ್ರಾಮ ನೈರ್ಮಲ್ಯ, ಸತ್ಯ, ಅಹಿಂಸೆ, ನ್ಯಾಯ, ಭ್ರಷ್ಟಾಚಾರ ನಿರ್ಮೂಲನೆ ವಿಷಯಗಳನ್ನು ಹೇಳಲಾಗಿದೆ. ನಾಗೇಶ್ ಅವರು ಭಾವನಾ ಜೀವಿ. ಈ ಚಿತ್ರದ ಮೂಲಕ ಅನೇಕ ವಿಷಯಗಳನ್ನು ಹೇಳುವುದರ ಜೊತೆಗೆ ಗಾಂಧೀಜಿ ಇಂದಿಗೂ ಎಷ್ಟು ಪ್ರಸ್ತುತ ಎಂದು ಸಾರುವ ಪ್ರಯತ್ನ ಮಾಡಿದ್ದಾರೆ. ಅವರ ಈ ಪ್ರಯತ್ನಕ್ಕೆ ಒಳ್ಳೆಯದಾಗಲಿ’ ಎಂದರು ಸುಚೇಂದ್ರ ಪ್ರಸಾದ್.
ಡಾ.ದೊಡ್ಡರಂಗೇಗೌಡ ಅವರಿಲ್ಲಿ ಪ್ರಮುಖ ಆಕರ್ಷಣೆ. ಸ್ವತಂತ್ರ್ಯ ಹೋರಾಟಗಾರರು, ನಿವೃತ್ತ ಮುಖ್ಯ ಶಿಕ್ಷಕರು, ಸಾಹಿತಿಗಳ ಪಾತ್ರ ಅವರದು. ತಮ್ಮ ಪಾತ್ರ ಹಾಗೂ ನಿರ್ದೇಶಕರ ಬಗ್ಗೆ ಹೇಳುವ ದೊರೆಂಗೌ, “ನಿರ್ದೇಶಕ ನಾಗೇಶ್ ನನಗೆ ಎರಡು ದಶಕದಿಂದಲೂ ಗೊತ್ತು. ಶ್ರಮಜೀವಿ. ಅವರು ಈ ಕಥೆಗಳನ್ನು ಬರೆದು ಪುಸ್ತಕ ಪ್ರಕಟಿಸುವ ಮುನ್ನವೇ ನನಗೆ ಹಸ್ತಪ್ರತಿ ಕೊಟ್ಟಿದ್ದರು. ಒಳ್ಳೆಯ ಬರಹಗಾರ ಅವರು, ಅವರು ಬರೆದ ಕನ್ನಡದ ಕಥೆ, ಬ್ಯಾರಿ ಭಾಷೆಯ ಚಿತ್ರವಾಗಿ ಕೊಲ್ಕತ್ತಾ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಈ ಚಿತ್ರ ಕೂಡ ಯಶಸ್ಸು ಪಡೆಯುವಂತಾಗಬೇಕು. ಇಲ್ಲಿ ಕೆಲಸ ಮಾಡಿರುವ ಪ್ರತಿಯೊಬ್ಬರಿಗೂ ಗೆಲುವು ಸಿಗಬೇಕು ಎಂದರು ಅವರು.
ಇಂದು ವಿಶ್ವನಾಥ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.ಅಶೋಕ್ ರಾವ್ ಹಾಗೂ ಎಸ್.ಕೆ.ಭಾನು ನಿರ್ಮಾಣವಿದೆ. ಓಂ ಸತೀಶ್ ಕಾರ್ಯಕಾರಿ ನಿರ್ಮಾಪಕರಾದರೆ, ಪಿ.ವಿ.ಆರ್.ಸ್ವಾಮಿ ಛಾಯಾಗ್ರಹಣವಿದೆ. ಅಂದು ಹೊಸ ತಂಡಕ್ಕೆ ಶುಭ ಕೋರಲು ಹಿರಿಯ ನಿರ್ದೇಶಕ ಸಾಯಿಪ್ರಕಾಶ್, ಮಾಸ್ಟರ್ ಸಂಜಯ್ ರಾವ್, ಡಾ.ರೋಹಿಣಿ ಇದ್ದರು. ಇದೇ ವೇಳೆ ಡಾ.ದೊಡ್ಡರಂಗೇಗೌಡ ಅವರು ರಚಿಸಿದ 11 ಗೀತೆಗಳಿರುವ ಗೀತ ಗಂಗೋತ್ರಿ ಹಾಡುಗಳನ್ನು ಬಿಡುಗಡೆ ಮಾಡಲಾಯಿತು.