ಕಾಪು: ಮಾಜಿ ಶಾಸಕ ಗೋಪಾಲ ಭಂಡಾರಿ ಅವರು ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕರಾಗಿದ್ದು ಬಡವರ, ದುರ್ಬಲರ, ನಿರ್ಗತಿಕರ ಪರ ಧ್ವನಿಯೆತ್ತುವ ಜನಪರ ನಿಲುವಿನ ಜನಸೇವಕರಾಗಿದ್ದರು. ಪಕ್ಷದ ಕಾರ್ಯಕರ್ತರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ, ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಅವರು ಸಮರ್ಪಣಾ ಮನೋಭಾವದ ಧೀಮಂತ ನಾಯಕರಾಗಿ ಗುರುತಿಲ್ಪಟ್ಟಿದ್ದರು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಕಾಂಗ್ರೆಸ್ ನಾಯಕ, ಕಾರ್ಕಳ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಎಚ್. ಗೋಪಾಲ್ ಭಂಡಾರಿಯವರಿಗೆ ಸಂತಾಪ ಸೂಚಿಸುವ ಸಲುವಾಗಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದ) ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿ-ನಮನ ಸಲ್ಲಿಸುತ್ತಾ ಮಾತನಾಡಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು , ಉಡುಪಿ ಜಿಲ್ಲಾ ಅಲ್ಪಸಂಖ್ಯಾಕಘಟಕದ ಮಾಜಿ ಅಧ್ಯಕ್ಷ ಎಂ. ಪಿ. ಮೈದಿನಬ್ಬ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಹಿರಿಯ ಮುಖಂಡರಾದ ಸರಸು ಡಿ. ಬಂಗೇರ, ಇಗ್ನೇಶಿಯಸ್ ಡಿಸೋಜ ಮೊದಲಾದವರು ನುಡಿ-ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ಕಾಂಗ್ರೆಸಿಗ, ಮಾಜಿ ಮಂಡಲ ಪಂಚಾಯತ್ ಸದಸ್ಯ ರಾಮ ಬಂಗೇರ ಅವರಿಗೂ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಪಕ್ಷದ ಮುಖಂಡರಾದ ದೇವಪುತ್ರ ಕೋಟ್ಯಾನ್, ಶಿವಾಜಿ ಸುವರ್ಣ ಬೆಳ್ಳೆ, ಮೊಹಮ್ಮದ್ ಸಾದಿಕ್, ಪ್ರಭಾ ಶೆಟ್ಟಿ, ಇಬ್ರಾಹಿಂ ಮನಹರ್, ಐಡ ಗಿಬ್ಬ ಡಿ’ಸೋಜ, ಪ್ರಶಾಂತ್ ಜತನ್ನ, ಸುನಿಲ್ ಬಂಗೇರ, ನವೀನ್ ಎನ್. ಶೆಟ್ಟಿ, ದಿನೇಶ್ ಕೋಟ್ಯಾನ್, ಹರೀಶ್ ನಾಯಕ್, ನಾಗೇಶ್ ಸುವರ್ಣ, ಎಚ್. ಅಬ್ದುಲ್ಲಾ, ಕೆ. ಎಚ್. ಉಸ್ಮಾನ್, ದೀಪಕ್ ಎರ್ಮಾಳ್,ಜಿತೇಂದ್ರ ಫುರ್ತಾದೋ ಮತ್ತಿತರ ನಾಯಕರು, ಬ್ಲಾಕ್ ಸಮಿತಿಯ ಪದಾಧಿಕಾರಿಗಳು, ಸ್ಥಳೀಯಾಡಳಿತ ಸಂಸ್ಥೆಯ ಹಾಲಿ ಹಾಗೂ ಮಾಜಿ ಅಧ್ಯಕ್ಷರುಗಳು ಮತ್ತು ಸದಸ್ಯರುಗಳು, ಪಕ್ಷದ ವಿವಿಧ ಘಟಕ ಮತ್ತು ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನಚಂದ್ರ ಸುವರ್ಣ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಮೀರ್ ಮೊಹಮ್ಮದ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.