Advertisement

ನೆಲ್ಲಿಯ ಮೆಲ್ಲಿರಿ…

07:51 PM Nov 12, 2019 | mahesh |

ನೆಲ್ಲಿಕಾಯಿಯ ರುಚಿಗೆ ಮಾರು ಹೋಗದವರಿಲ್ಲ. ವಿಟಮಿನ್‌ ಸಿ ಅನ್ನು ಹೇರಳವಾಗಿ ಹೊಂದಿರುವ, ಹುಳಿ, ಕಹಿ ರುಚಿಯ ನೆಲ್ಲಿಕಾಯಿಯನ್ನು ಯಾವ ರೂಪದಲ್ಲಿ ಸೇವಿಸಿದರೂ ಆರೋಗ್ಯಕ್ಕೆ ಒಳ್ಳೆಯದೇ. ಹಾಗೇ ತಿನ್ನಲು ಕಹಿ ಅನ್ನಿಸಿದರೆ, ಜೇನುತುಪ್ಪ ಬೆರೆಸಿ ಜ್ಯೂಸ್‌ ಮಾಡಿಕೊಂಡು ಕುಡಿಯಿರಿ. ಅಷ್ಟೇ ಅಲ್ಲ, ನೆಲ್ಲಿಕಾಯಿ ಬಳಸಿ, ಈ ಕೆಳಗಿನ ವ್ಯಂಜನಗಳನ್ನು, ತಿನಿಸುಗಳನ್ನು ತಯಾರಿಸಬಹುದು.

Advertisement

1. ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: ನೆಲ್ಲಿಕಾಯಿ -15, ನೀರು – 2 ಕಪ್‌, ಉಪ್ಪು, ಇಂಗು-1/2 ಚಮಚ, ಜೀರಿಗೆ- 1 ಚಮಚ, ಅರಿಶಿಣ- 1/2 ಚಮಚ, ಸಾಸಿವೆ-4 ಚಮಚ, ಅಚ್ಚಮೆಣಸಿನ ಪುಡಿ- 10 ಚಮಚ, ಲಿಂಬೆಹಣ್ಣು – 1, ಒಗ್ಗರಣೆಗೆ: ಎಣ್ಣೆ – 5 ಚಮಚ, ಸಾಸಿವೆ, ಇಂಗು.
ಮಾಡುವ ವಿಧಾನ: ಎರಡು ಲೋಟ ನೀರಿಗೆ ಉಪ್ಪು ಸೇರಿಸಿ, ಕುದಿಯಲು ಇಡಿ. ನೀರು ಕುದಿಯಲು ಪ್ರಾರಂಭಿಸಿದಾಗ ನೆಲ್ಲಿಕಾಯಿಯನ್ನು ಹಾಕಿ. ನೆಲ್ಲಿಕಾಯಿ ಬೇಯುವವರೆಗೆ ಕುದಿಸಿ, ಕೆಳಗೆ ಇಳಿಸಿ. ಜೀರಿಗೆ, ಸಾಸಿವೆ ಹಾಗೂ ಇಂಗನ್ನು ಎಣ್ಣೆ ಹಾಕದೆ, ಪರಿಮಳ ಬರುವಂತೆ ಹುರಿದುಕೊಳ್ಳಿ. ಕೊನೆಯಲ್ಲಿ ಅರಿಶಿನ ಸೇರಿಸಿ. ನಂತರ, ಸ್ವಲ್ಪ ಉಪ್ಪು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿ. ನೆಲ್ಲಿಕಾಯಿ ತಣ್ಣಗಾದ ನಂತರ ನೀರಿನಿಂದ ತೆಗೆದು, ಬೀಜವನ್ನು ಬೇರ್ಪಡಿಸಿ (ಹಾಗೇ ಬಿಡಬಹುದು). ಮೊದಲೇ ತಯಾರಿಸಿಟ್ಟ ಮಸಾಲೆಪುಡಿ, ಅಚ್ಚಮೆಣಸಿನಪುಡಿ ಸೇರಿಸಿ. ಜೊತೆಗೆ, ಸ್ವಲ್ಪ ಉಪ್ಪುನೀರು (ನೆಲ್ಲಿಕಾಯಿ ಬೇಯಿಸಿದ ನೀರು), ಲಿಂಬೆರಸ ಸೇರಿಸಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಇಂಗಿನ ಒಗ್ಗರಣೆ ಹಾಕಿ.

2. ಪುಳಿಯೊಗರೆ
ಬೇಕಾಗುವ ಸಾಮಗ್ರಿ: ಅನ್ನ- 1 ಕಪ್‌, ನೆಲ್ಲಿಕಾಯಿ ತುರಿ- 1/2 ಬಟ್ಟಲು, ಒಣ ಮೆಣಸಿನಕಾಯಿ- 8, ಕಡಲೆಬೇಳೆ- 1 ಚಮಚ, ಉದ್ದಿನ ಬೇಳೆ- 1 ಚಮಚ, ಶೇಂಗಾ- 2 ಚಮಚ, ಎಳ್ಳು- 1 ಚಮಚ, ಒಣ ಕೊಬ್ಬರಿ ತುರಿ- 1/4 ಕಪ್‌, ಅರಿಶಿಣ, ಎಣ್ಣೆ, ಸಾಸಿವೆ, ರುಚಿಗೆ ಉಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು.
ಮಾಡುವ ವಿಧಾನ: ನೆಲ್ಲಿಕಾಯಿ ತುರಿ, ಒಣಮೆಣಸಿನ ಕಾಯಿ, ಉಪ್ಪು ಮತ್ತು ಅರಿಶಿಣವನ್ನು ನೀರು ಸೇರಿಸದೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ, ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಕರಿಬೇವು, ಶೇಂಗಾ, ಎಳ್ಳು, ಒಣಕೊಬ್ಬರಿ ತುರಿ ಹಾಕಿ ಕೆಂಬಣ್ಣ ಬರುವವರೆಗೆ ಬಾಡಿಸಿ. ರುಬ್ಬಿದ ಮಿಶ್ರಣವನ್ನು ಬೆರೆಸಿ, ಕೊತ್ತಂಬರಿ ಸೊಪ್ಪು ಹಾಕಿ ಕೆಳಗಿಳಿಸಿ, ಅನ್ನದೊಂದಿಗೆ ಬೆರೆಸಿದರೆ ಪುಳಿಯೊಗರೆ ಸಿದ್ಧ.

3. ತೊಕ್ಕು
ಬೇಕಾಗುವ ಸಾಮಗ್ರಿ: ನೆಲ್ಲಿಕಾಯಿ- 15, ಹುಣಸೆ ಹಣ್ಣು- ಲಿಂಬೆ ಗಾತ್ರದಷ್ಟು, ಬೆಲ್ಲ- ಒಂದು ಸಣ್ಣ ಉಂಡೆ, ಒಣಮೆಣಸು-10, ಇಂಗು, ಮೆಂತ್ಯೆ- 2 ಚಮಚ, ಸಾಸಿವೆ, ಎಣ್ಣೆ, ಉಪ್ಪು.
ಮಾಡುವ ವಿಧಾನ: ನೆಲ್ಲಿಕಾಯಿಯನ್ನು ಹಬೆಯಲ್ಲಿ ಬೇಯಿಸಿ, ಬೀಜ ತೆಗೆದಿಡಿ. ಮೆಣಸು, ಮೆಂತ್ಯೆ, ಇಂಗನ್ನು ಹುರಿಯಿರಿ. ಜೊತೆಗೆ ನೆಲ್ಲಿಕಾಯಿ ಹೋಳುಗಳನ್ನು ಸೇರಿಸಿ ರುಬ್ಬಿ. ಬಾಣಲೆಯಲ್ಲಿ ಸಾಸಿವೆ, ಎಣ್ಣೆ ಹಾಕಿ ಒಗ್ಗರಣೆ ಹಾಕಿ ರುಬ್ಬಿದ ಮಿಶ್ರಣ, ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಲೇಹದಂತಾಗುವಾಗ ಉರಿ ನಿಲ್ಲಿಸಿ.

4. ಚೂರ್ಣ
ಬೇಕಾಗುವ ಸಾಮಗ್ರಿ: ನೆಲ್ಲಿಕಾಯಿ, ಸೈಂಧವ ಲವಣ, ಓಂ ಕಾಳಿನ ಪುಡಿ, ಒಣ ಶುಂಠಿ ಪುಡಿ, ಕರಿಮೆಣಸಿನ ಪುಡಿ, ಇಂಗು.
ಮಾಡುವ ವಿಧಾನ: ನೆಲ್ಲಿಕಾಯಿಯನ್ನು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಕತ್ತರಿಸಿ, ಅದಕ್ಕೆ ಸ್ವಲ್ಪ ಸೈಂಧವ ಲವಣ, ಓಂಕಾಳಿನ ಪುಡಿ, ಒಣ ಶುಂಠಿ ಪುಡಿ, ಕರಿಮೆಣಸಿನ ಪುಡಿ ಹಾಗೂ ಸ್ವಲ್ಪ ಇಂಗು ಹಾಕಿ ಚೆನ್ನಾಗಿ ಕಲಸಿ, ಒಂದು ರಾತ್ರಿ ಇಡಿ. ನಂತರ ಅದನ್ನು ನೆರಳಿನಲ್ಲಿ ಒಣಗಿಸಿ, ತೆಗೆದಿಟ್ಟುಕೊಂಡರೆ, ಊಟದ ನಂತರ ಅಡಕೆಯ ಬದಲು ಬಾಯಿಗೆ ಹಾಕಿಕೊಳ್ಳಬಹುದು. ಇದು ಸಿ ಜೀವಸತ್ವವನ್ನು ಒದಗಿಸುವುದಲ್ಲದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Advertisement

5. ಲೇಹ್ಯ
ಬೇಕಾಗುವ ಸಾಮಗ್ರಿ: ಬೆಟ್ಟದ ನೆಲ್ಲಿಕಾಯಿ-20, ಬೆಲ್ಲ- 5 ಉಂಡೆ, ನೀರು-2 ಕಪ್‌.
ಮಾಡುವ ವಿಧಾನ: ನೆಲ್ಲಿಕಾಯಿಗಳನ್ನು ತುರಿದು, ನೀರಿನಲ್ಲಿ ಬೇಯಿಸಿ. ಬೆಲ್ಲವನ್ನು ಕರಗಿಸಿ, ಸೋಸಿ, ಅದನ್ನು ಬೆಂದ ನೆಲ್ಲಿಕಾಯಿ ತುರಿಗೆ ಹಾಕಿ ಸಣ್ಣ ಉರಿಯಲ್ಲಿ ಗಟ್ಟಿಯಾಗುವವರೆಗೆ ತಿರುವುತ್ತ, ಬೇಯಿಸಿ ಕೆಳಗಿಳಿಸಿ. ಈ ಮಿಶ್ರಣ ಆರಿದ ಮೇಲೆ ಡಬ್ಬಿಗೆ ಹಾಕಿಡಿ.

Advertisement

Udayavani is now on Telegram. Click here to join our channel and stay updated with the latest news.

Next