Advertisement
“ನೆಲ್ಲಿಕಾಯಿ’ ಎಂಬ ಪದ ಕೇಳುತ್ತಲೇ ಬಾಯಿಯಲ್ಲಿ ನೀರೂರುವುದು ಸಹಜ. ಅತೀ ಹೆಚ್ಚು “ಸಿ’ ವಿಟಮಿನ್ ಹೊಂದಿರುವ ಹಣ್ಣು- ತರಕಾರಿಗಳಲ್ಲಿ ಬೆಟ್ಟದ ನೆಲ್ಲಿ ಮುಂಚೂಣಿಯಲ್ಲಿದೆ. ಆರೋಗ್ಯವರ್ಧಕ, ಶಕ್ತಿವರ್ಧಕ ಔಷಧಿಯಾಗಿ ಪ್ರಸಿದ್ಧವಾಗಿರುವ ಬೆಟ್ಟದ ನೆಲ್ಲಿಗೆ “ರಸಾಯನ ಆಯುರ್ವೇದ’ ಪದ್ದತಿಯಲ್ಲಿ ವಿಶೇಷ ಸ್ಥಾನವಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗದ ಅಖೀಲ್ ಸರದೇಶಪಾಂಡೆಯವರು, ವರ್ಷಗಳಿಂದ ಬೆಟ್ಟದ ನೆಲ್ಲಿ ಕೃಷಿಯಲ್ಲಿ ತೊಡಗಿದ್ದಾರೆ. ಅವರದು ಕೃಷಿ ಕುಟುಂಬ. ಅಖೀಲ್, ಪದವಿ ಪಡೆದ ನಂತರ ಹಳ್ಳಿಗೆ ಮರಳಿ ತಂದೆಯ ದಾರಿಯಲ್ಲಿಯೇ ಮುನ್ನಡೆದರು. ಇವರ ಮಗ ಸಮೀರ ಸರದೇಶಪಾಂಡೆಯವರೂ ಕೂಡಾ ತೋಟಗಾರಿಕೆ ವಿಷಯದಲ್ಲಿ ಪದವೀಧರರು. ಅವರೂ ನೌಕರಿ ಹಿಡಿಯದೆ ಕೃಷಿಯಲ್ಲಿ ತೊಡಗಿಕೊಂಡಿರುವುದು ವಿಶೇಷ.
ಬಾಳೆಹಣ್ಣು, ಚಿಕ್ಕೂ ಹಣ್ಣುಗಳನ್ನು ತಿನ್ನುವಂತೆ ಯಾರೂ ನೆಲ್ಲಿಕಾಯಿ ತಿನ್ನುವುದಿಲ್ಲ. ಅದರ ಔಷಧೀಯ ಗುಣಗಳನ್ನು ಬಲ್ಲವರು ಮಾತ್ರ ತಿನ್ನುತ್ತಾರೆ. ಹಸಿ ನೆಲ್ಲಿಕಾಯಿ ಮಾರಾಟಕ್ಕೆ ಮಾರುಕಟ್ಟೆ ಹುಡುಕುವ ಕಷ್ಟ ಅನುಭವಿಸಿದ ನಂತರ ನೆಲ್ಲಿಯ ಸಿದ್ಧವಸ್ತು ತಯಾರಿಕೆಯತ್ತ ಗಮನ ಹರಿಸಿದರು. 2003ರಲ್ಲಿ “ಅಲಕಾ ಆರ್ಯುವೇದ’ ಎಂಬ ಆಹಾರ ಉತ್ಪನ್ನ ಸಂಸ್ಕರಣಾ ಘಟಕ ಪ್ರಾರಂಭಿಸಿದರು. ನೆಲ್ಲಿಕಾಯಿಯಿಂದ ನೆಲ್ಲಿ ಅಡಕೆ, ಗುಳಂಬ, ಸಿರಪ್, ಜ್ಯೂಸ್, ಪೌಡರ್ ಹಾಗೂ ಉಪ್ಪಿನಕಾಯಿ ಮುಂತಾದ ಉತ್ಪನ್ನಗಳನ್ನು ತಯಾರಿಸುತ್ತಾರೆ. ಅದಕ್ಕಾಗಿ ಅಗತ್ಯವಿರುವ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡಿದ್ದಾರೆ.
Related Articles
ಒಂದು ವರ್ಷದಲ್ಲಿ 5-6 ಕ್ವಿಂಟಾಲ್ ನೆಲ್ಲಿ ಅಡಕೆಯನ್ನು ತಯಾರಿಸುತ್ತಾರೆ. 5 ಕಿಲೋ ಹಸಿ ನೆಲ್ಲಿಕಾಯಿಗೆ ಒಂದು ಕಿಲೋ ಒಣ ನೆಲ್ಲಿ ಅಡಕೆ ತಯಾರಾಗುತ್ತದೆ. ನೆಲ್ಲಿ ಅಡಕೆಯನ್ನು ಪಾಲಿ ಕಾರ್ಬನೇಟ್ ಶೀಟ್‌ಗಳಿಂದ ಆವರಿಸಿದ ಹೊದಿಕೆಯಲ್ಲಿ ಹಾಗೂ ಉಚ್ಚ ದರ್ಜೆಯ ಸ್ಟೀಲ್ ಜಾಳಿಗೆಯಿಂದ ಕೂಡಿದ 30 ಟ್ರೇಗಳಲ್ಲಿ ಒಣಗಿಸಲಾಗುವುದು. ಕತ್ತರಿಸಿದ ನೆಲ್ಲಿ ಕಾಯಿಗೆ ಬ್ಲ್ಯಾಕ್ ಉಪ್ಪು, ರಾಕ್ ಉಪ್ಪು ಹಾಗೂ ಇಂಗು, ಇವಿಷ್ಟನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಿ, ಶುಚಿಯಾದ ನೆಲ್ಲಿ ಅಡಕೆಯನ್ನು ತಯಾರಿಸುತ್ತಾರೆ. ಅಲ್ಲದೇ ನೆಲ್ಲಿ ಕಾಯಿಯಿಂದ 2- 3 ಕ್ವಿಂಟಾಲ್ ಗುಳಂಬವನ್ನು ತಯಾರಿಸುತ್ತಾರೆ. ನೆಲ್ಲಿಕಾಯಿಯಿಂದ ಸಕ್ಕರೆ ರಹಿತ ಸಿರಪ್ ಹಾಗೂ 400 ಲೀಟರ್ ಹಾಗೂ 200 ಲೀಟರ್ ಜ್ಯೂಸ್ ತಯಾರಿಸುತ್ತಾರೆ. ಸಕ್ಕರೆ ರಹಿತ ಜ್ಯೂಸ್, ಮಧುಮೇಹ ರೋಗಿಗಳಿಗೆ ಅತ್ಯುತ್ತಮ ಔಷಧಿಯಾಗಿದೆ. ಅಲ್ಲದೆ 5 ಕ್ವಿಂಟಾಲ್ ಉಪ್ಪಿನಕಾಯಿ ಹಾಗೂ 1 ಕ್ವಿಂಟಾಲ್ ನೆಲ್ಲಿ ಪೌಡರನ್ನು ತಯಾರಿಸುತ್ತಾರೆ. ನೆಲ್ಲಿಯ ಸಂಸ್ಕರಣಾ ಘಟಕದಲ್ಲಿ 20- 25 ಮಹಿಳೆಯರು ಉದ್ಯೋಗ ನಿರ್ವಹಿಸುತ್ತಿದ್ದಾರೆ.
Advertisement
ರಾಮದುರ್ಗ ನಗರದ ಬೆಳಗಾವಿ ರಸ್ತೆಯಲ್ಲಿರುವ ತಾಲ್ಲೂಕು ಪಂಚಾಯತ್ ಕಾಂಪ್ಲೆಕ್ಸ್‌ನಲ್ಲಿ ಅವರ ಅಧಿಕೃತ “ಅಲಕಾ ಆಮ್ಲಾ ಪ್ರಾಡಕ್ಟ್’ ಅಂಗಡಿ ಮಳಿಗೆ ಇದೆ. ಅಲ್ಲಿ ಅಖೀಲ್ ಸರದೇಶಪಾಂಡೆಯವರು ತಾವು ಬೆಳೆದ ನೆಲ್ಲಿಯ ಮೌಲ್ಯವರ್ಧಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ.ಸಂಪರ್ಕ: 9972218328(ಸಮೀರ) 40 ಲಕ್ಷ ಲೀ. ನೀರಿನ ಹೊಂಡ
ಧಾರವಾಡ, ಹುಬ್ಬಳ್ಳಿ, ವಿಜಯಪುರ, ಬಾಗಲಕೋಟೆ, ಮಹಾರಾಷ್ಟ್ರ, ಗೋವಾ ಮುಂತಾದ ಸ್ಥಳಗಳಿಗೆ ಇವರ ಉತ್ಪನ್ನಗಳು ಸರಬರಾಜಾಗುತ್ತಿವೆ. ಅಖೀಲ್ ಅವರ ಪತ್ನಿ ಅಶ್ವಿನಿ ಸರದೇಶಪಾಂಡೆ ಮತ್ತು ಸೊಸೆ ಪ್ರಿಯಾ ಸರದೇಶಪಾಂಡೆ ತಯಾರಿಕೆ, ಗುಣಮಟ್ಟ, ಪ್ಯಾಕಿಂಗ್ ವ್ಯವಸ್ಥೆಗಳ ನಿಗಾ ವಹಿಸುತ್ತಾರೆ. ಸಮೀರ ಅವರು ಮಾರಾಟದ ವ್ಯವಸ್ಥೆ ನೋಡಿಕೊಳ್ಳುತ್ತಾರೆ. ಸರದೇಶಪಾಂಡೆಯವರ ಇಡೀ ಕುಟುಂಬ ನೆಲ್ಲಿ ಕೃಷಿಯಾಧಾರಿತ ಉತ್ಪನ್ನ ತಯಾರಿಕೆಯಲ್ಲಿ ತೊಡಗಿಕೊಂಡಿದೆ. ನೆಲ್ಲಿ ಕೃಷಿಯ ಜೊತೆಗೆ ವಾರ್ಷಿಕ 35- 40 ಟನ್ ಚಿಕ್ಕೂ ಹಣ್ಣಿನ ಇಳುವರಿ ಹಾಗೂ 120 ಟನ್ ಬಾಳೆ ಹಣ್ಣಿನ ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಹೊಲದಲ್ಲಿ 40 ಲಕ್ಷ ಲೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯದ ಕೃಷಿ ಹೊಂಡವಿದ್ದು, ಒಂದು ಬೋರ್‌ವೆಲ್ ಸಹ ಇದೆ. -ಸುರೇಶ ಗುದಗನವರ