Advertisement

ಆ್ಯಂಡ್ರಾಯ್ಡ್ “ಪಿ’ಗೆ ಪಾಯಸವೋ, ಪೇಣಿಯೋ?

06:00 AM Mar 05, 2018 | Team Udayavani |

ವಾಷಿಂಗ್ಟನ್‌: ಗೂಗಲ್‌ ಅಭಿವೃದ್ಧಿಪಡಿಸುತ್ತಿರುವ ಆ್ಯಂಡ್ರಾಯ್ಡ ಆಪರೇಟಿಂಗ್‌ ಸಿಸ್ಟಮ್‌ನ ಈ ಬಾರಿಯ ಸುಧಾರಿತ ಆವೃತ್ತಿಗೆ ದಕ್ಷಿಣ ಭಾರತದ ಸಿಹಿ ತಿನಿಸುವಿನ ಹೆಸರು ಸಿಗಲಿದೆಯೇ?

Advertisement

ಇಂಥ ದ್ದೊಂದು ಚರ್ಚೆ ಈಗಾಗಲೇ ಶುರುವಾಗಿದೆ. ಆ್ಯಂಡ್ರಾಯ್‌ “ಪಿ’ ಒಎಸ್‌ಗೆ “ಪಾಯಸಂ’,”ಪೇಣಿ’ ಅಥವಾ “ಪೇಡಾ’ ಹೆಸರಿಡುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಅಲ್ಲದೆ ಈಜಿಪ್ಟ್ನ “ಪೈ’ ಎಂಬ ಹೆಸರನ್ನೂ ಇರಿಸಬಹುದು ಎಂಬ ಚರ್ಚೆಗಳೂ ನಡೆಯುತ್ತಿವೆ.

ಮಾರ್ಚ್‌ ಎರಡನೇ ವಾರದಲ್ಲಿ ಒಎಸ್‌ ಸರಣಿಯ ಪಿ ನಾಮಾಂಕಿತ ಆವೃ ತ್ತಿಯ ಡೆವಲಪರ್‌ ಪ್ರಿವ್ಯೂ ( ಪರೀಕ್ಷೆ ಗಾಗಿ ಬಿಡುವುದು) ಅನ್ನು ಗೂಗಲ್‌ ಬಿಡುಗಡೆ ಮಾಡುತ್ತಿದ್ದು, ಇದರ ಸಂಪೂರ್ಣ ಮತ್ತು ಅಂತಿಮ ಆವೃತ್ತಿ ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಹಿಂದೆ ಅಂದರೆ, “ಒರಿಯೋ’ಗಿಂತ ಹಿಂದಿನ “ನಾಗೌಟ್‌’ನ ನಾಮಾಂಕನ ವೇಳೆ ಭಾರತದ ತಿನಿಸುವಿನ ಹೆಸರಿಡುವ ಬಗ್ಗೆ ಚರ್ಚೆಯಾಗಿತ್ತು. ಆದರೆ ಆಗ ಭಾರತೀಯರ ನಿರೀಕ್ಷೆ ಹುಸಿಯಾಗಿತ್ತು. 2015ರಲ್ಲಿ ಭಾರತಕ್ಕೆ ಬಂದಿದ್ದ ಗೂಗಲ್‌ ಸಿಇಒ ಸುಂದರ್‌ ಪಿಚೈ,”ಎನ್‌’ ಅಥವಾ “ಪಿ’ ಒಎಸ್‌ ವೇಳೆ ಭಾರತದ ತಿನಿಸುವಿನ ಹೆಸರಿಡುವ ಬಗ್ಗೆ ಸುಳಿವು ನೀಡಿದ್ದರು.

ಇಂಗ್ಲಿಷಿನ ಅಕಾರಾದಿಗೆ ಅನುಗುಣವಾಗಿ ನಾಮಕರಣ ಮಾಡುವ ಸಂಪ್ರದಾಯವನ್ನು ಗೂಗಲ್‌ ಬೆಳೆಸಿಕೊಂಡು ಬಂದಿದ್ದು, ಈ ಬಾರಿ ಇದು “ಪಿ’ ಇನಿಶಿಯಲ್‌ ಹೊಂದಿದೆ. ಇದರ ಪೂರ್ಣ ಪಾಠ ಅಂದರೆ “ಒ’ಗೆ ಒರಿಯೋ, “ಎನ್‌’ಗೆ ನಾಗೌ ಟ್‌, “ಎಂ’ಗೆ ಮಾರ್ಶ್‌ಮಲ್ಲೋ, “ಎಲ್‌’ಗೆ ಲಾಲಿಪಾಪ್‌, “ಕೆ’ಗೆ ಕಿಟ್‌ಕ್ಯಾಟ್‌ ಎಂಬ ಹೆಸರಿಡಲಾಗಿದೆ.

ಈಗಾಗಲೇ ಗೂಗಲ್‌ ಈ ಸಂಬಂಧ ಆನ್‌ಲೈನ್‌ ಸರ್ವೆ ನಡೆಸಿದೆ. ಆದರೆ ಮಾರ್ಚ್‌ನಲ್ಲೇ ಹೆಸರು ಬಹಿರಂಗಗೊಳಿಸುವುದು ಅನಿಶ್ಚಿತ. ಪಾಯಸ, ಪೇಡಾ, ಪೇಣಿ ಸೇರಿದಂತೆ “ಪ’ದಿಂದ ಆರಂಭವಾಗುವ ಎಲ್ಲ ಸಿಹಿತಿನಿಸುಗಳ ಹೆಸರುಗಳೂ ಅಂತರ್ಜಾಲದಲ್ಲಿ ಸುತ್ತಾಡಿವೆ. ಈ ಹಿಂದೆ ಭಾರತಕ್ಕೆ ಆಗಮಿಸಿದ್ದಾಗ ಪಿಚೈರನ್ನು ಪಿ ಆವೃತ್ತಿಗೆ ಭಾರತೀಯ ತಿನಿಸುಗಳ ಹೆಸರಿಡುತ್ತೀರಾ ಎಂದು ಕೇಳಿದ್ದಕ್ಕೆ, ಈ ಬಗ್ಗೆ ನನ್ನ ಅಮ್ಮನ ಬಳಿ ಸಲಹೆ ಪಡೆಯಬೇಕು ಎಂದು ಹೇಳಿದ್ದರು.

Advertisement

ಮಾರ್ಚ್‌ನಲ್ಲೇ ಯಾಕೆ?:
ಗೂಗಲ್‌ ಸಾಮಾನ್ಯವಾಗಿ ಮಾರ್ಚ್‌ನಲ್ಲೇ ಹೊಸ ಆಂಡ್ರಾಯ್ಡ ಆವೃತ್ತಿಯನ್ನು ಬಿಡುಗಡೆ ಮಾಡುವ ಸಂಪ್ರದಾಯ ಹೊಂದಿದೆ. ಕಳೆದ ವರ್ಷ ಮಾರ್ಚ್‌ 21ರಂದು ಒ ಡೆವಲಪರ್‌ ಪ್ರಿವ್ಯೂ ಬಿಡುಗಡೆ ಮಾಡಿತ್ತು. ನಂತರ ಕೆಲವು ತಿಂಗಳುಗಳವರೆಗೆ ಹಲವು ಆವೃತ್ತಿಗಳನ್ನು ಬಿಡುಗಡೆ ಮಾಡಿ, ಆಗಸ್ಟ್‌ನಲ್ಲಿ ಅಂತಿಮ ಆವೃತ್ತಿಯನ್ನು ಅನಾವರಣಗೊಳಿಸಲಿದೆ. ಆರಂಭದಲ್ಲಿ ಗೂಗಲ್‌ನ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವೇ ಹೊಸ ಆವೃತ್ತಿ ಬಳಕೆಯಾಗಲಿದ್ದು, ನಂತರದ ದಿನಗಳಲ್ಲಿ ಇತರ ಕಂಪನಿಗಳ ಹಾಗೂ ಇತರ ಮಾದರಿಯ ಪಿ ಅಳವಡಿಕೆಯಾಗಲಿದೆ.

ಏನಿರಲಿದೆ ಹೊಸ ಸೌಲಭ್ಯ?
ಸದ್ಯ ಸ್ಮಾರ್ಟ್‌ಫೋನ್‌ ಯುಐ ಗೂಗಲ್‌ ಅಸಿಸ್ಟೆಂಟ್‌ ಸಪೋರ್ಟ್‌ ಮಾಡುತ್ತದೆಯಾದರೂ, ಸ್ಮಾರ್ಟ್‌ಫೋನ್‌ನಲ್ಲಿರುವ ಅಪ್ಲಿಕೇಶನ್‌ಗಳು ಗೂಗಲ್‌ ಅಸಿಸ್ಟೆಂಟ್‌ ಕಮಾಂಡ್‌ಗಳಿಗೆ ಸ್ಪಂದಿಸುವುದಿಲ್ಲ. ಈ ಸಮಸ್ಯೆಯು ಪಿಯಲ್ಲಿ ನಿವಾರಣೆಯಾಗುವ ಸಾಧ್ಯತೆಯಿದೆ. ಅಲ್ಲದೆ ಈಗಾಗಲೇ ಕೆಲವು ಸುಧಾರಿತ ಆವೃತ್ತಿಯ ಯುಐಗಳಲ್ಲಿರುವ ಹಲವು ಸ್ಕ್ರೀನ್‌ಗಳು, ನಾಚ್‌ಗಳನ್ನೂ ಇದು ಒಳಗೊಂಡಿರಲಿದೆ. ಈ ಹಿಂದಿನ ಆವೃತ್ತಿಗಳಲ್ಲಿ ವಿನ್ಯಾಸವನ್ನು ಸ್ವಲ್ಪವೇ ಬದಲಾವಣೆ ಮಾಡಲಾಗಿದ್ದು, ಈ ಆವೃತ್ತಿಯಲ್ಲೂ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ.

ಅಪ್ಲಿಕೇಶನ್‌ಗಳು ಬ್ಯಾಕ್‌ಗ್ರೌಂಡ್‌ನ‌ಲ್ಲಿ ಕ್ಯಾಮೆರಾ ಅಥವಾ ಮೈಕ್ರೋಫೋನ್‌ ಅಕ್ಸೆಸ್‌ ಮಾಡುವುದನ್ನು ತಡೆಯುವುದೂ ಹೊಸ ಆವೃತ್ತಿಯಲ್ಲಿರಲಿದೆ ಎಂದು ಹೇಳಲಾಗಿದೆ. ಅಲ್ಲದೆ ಇತರ ನೂರಾರು ಸೌಲಭ್ಯಗಳು, ಕಸ್ಟಮೈಸೇಶನ್‌ಗಳೂ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಲಭ್ಯವಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next