ನವದೆಹಲಿ : ಕೋವಿಡ್‍ನ ಎರಡನೇ ಅಲೆಗೆ ಸಿಲುಕಿ ನಲಗುತ್ತಿರುವ ಭಾರತಕ್ಕೆ ಗೂಗಲ್ ಸಿಇಒ ಸುಂದರ್ ಪಿಚೈ ನೆರವಿನ ಹಸ್ತ ಚಾಚಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸುಂದರ್ ಪಿಚೈ ಅವರು, ಭಾರತದಲ್ಲಿನ ಕೋವಿಡ್-19 ಸಾಂಕ್ರಾಮಿಕದ ಪರಿಸ್ಥಿತಿ ನೋಡಿ ಮನಸ್ಸು ಒಡೆದುಹೋದಂತಾಗಿದೆ. ಗೂಗಲ್ ಈ ಕೂಡಲೇ ಭಾರತಕ್ಕೆ ವೈದ್ಯಕೀಯ ಸರಬರಾಜು, ಹೆಚ್ಚಿನ ಅಪಾಯದಲ್ಲಿರುವ ಸಮುದಾಯಗಳನ್ನು ಬೆಂಬಲಿಸುವ ಉದ್ದೇಶದಿಂದ ಮತ್ತು ನಿರ್ಣಾಯಕ ಮಾಹಿತಿಯನ್ನು ಹರಡಲು ಸಹಾಯ ಮಾಡುವ ಉದ್ದೇಶದಿಂದ 135 ಕೋಟಿ ರೂ ಅನುದಾನ ನೀಡಲಿದೆ ಎಂದಿದ್ದಾರೆ.
ಕೋವಿಡ್-19 2ನೇ ಅಲೆಯಿಂದಾಗಿ ತತ್ತರಿಸಿ ಹೋಗಿರುವ ಭಾರತದಲ್ಲಿನ ಪರಿಸ್ಥಿತಿ ಕುರಿತು ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾಡೆಲ್ಲ ಟ್ವೀಟ್ ಮಾಡಿದ ಬೆನ್ನಲ್ಲೇ ಗೂಗಲ್ ಸಿಇಒ ಭಾರತ ಮೂಲದ ಸುಂದರ್ ಪಿಚೈ ಅವರೂ ಕೂಡ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಪ್ರತಿನಿತ್ಯ 3.50ಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ದೇಶಾದ್ಯಂತ ಚಿಕಿತ್ಸೆಗಾಗಿ ಸೋಂಕಿತರು ಪರದಾಡುತ್ತಿದ್ದು, ಆಸ್ಪತ್ರೆಗಳ ಬೆಡ್ ಗಳು ಸಂಪೂರ್ಣ ಭರ್ತಿಯಾಗಿದ್ದು, ಬೆಡ್ ಗಳಿಲ್ಲದೆ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡುತ್ತಿದ್ದಾರೆ. ಅಂತೆಯೇ ಇತ್ತ ಅಸ್ಪತ್ರೆಗೆ ದಾಖಲಾದ ಸೋಂಕಿತರೂ ಕೂಡ ಆಮ್ಲಜನಕ ಕೊರತೆಯಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದು, ಸಾಕಷ್ಟು ರೋಗಿಗಳು ಆಮ್ಲಜನಕ ಇಲ್ಲದೇ ಸಾವನ್ನಪ್ಪುತ್ತಿದ್ದಾರೆ.