Advertisement

ಕರೆ, ಸಂದೇಶ ಓದುವ ಆ್ಯಪ್ ಗಳಿಗೆ ಕಡಿವಾಣ

12:30 AM Jan 17, 2019 | |

ಹೊಸದಿಲ್ಲಿ: ಮೋಸದ ಜಾಹೀರಾತು ಮತ್ತು ಮಾಲ್ವೇರ್‌ಗಳನ್ನು ಹೊಂದಿರುವ ಆ್ಯಪ್‌ಗ್ಳನ್ನು ತನ್ನ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿರುವ ಗೂಗಲ್‌ ಈಗ ಇನ್ನೊಂದು ಹೆಜ್ಜೆ ಮುಂದಿಟ್ಟು ಅನಗತ್ಯವಾಗಿ ಫೋನ್‌ ಕಾಲ್‌ ಮತ್ತು ಎಸ್‌ಎಂಎಸ್‌ ಓದುವ ಆ್ಯಪ್‌ಗ್ಳನ್ನು ಪ್ಲೇಸ್ಟೋರ್‌ನಿಂದ ತೆಗೆದುಹಾಕಲು ನಿರ್ಧರಿಸಿದೆ. ಕಳೆದ ಅಕ್ಟೋಬರ್‌ನಲ್ಲೇ ಈ ಬಗ್ಗೆ ಪ್ರಕಟನೆ ಹೊರಡಿಸಿದ್ದ ಗೂಗಲ್‌, ಇನ್ನು ಈ ಪ್ರಕ್ರಿಯೆಗೆ ಚಾಲನೆ ನೀಡಲಿದೆ.

Advertisement

ಕೆಲವು ಅಪ್ಲಿಕೇಶನ್‌ಗಳ ಕಾರ್ಯನಿರ್ವಹಣೆಗೆ ಕರೆ ಮತ್ತು ಎಸ್‌ಎಂಎಸ್‌ ಮಾಹಿತಿಯನ್ನು ಓದುವ ಅಗತ್ಯ ಇರುವುದಿಲ್ಲವಾದರೂ ಅಂತಹ ಅಪ್ಲಿಕೇಶನ್‌ಗಳು ಈ ದತ್ತಾಂಶವನ್ನು ಬಳಕೆದಾರರ ಫೋನ್‌ನಿಂದ ಪಡೆದುಕೊಂಡು ತಮ್ಮ ಸರ್ವರ್‌ಗಳಲ್ಲಿ ಸಂಗ್ರಹಿಸುತ್ತಿದ್ದವು. ಇದರಿಂದ ಡೇಟಾ ಕಳ್ಳತನ ಮತ್ತು ದುರ್ಬಳಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಗೂಗಲ್‌ ಈ ನಿರ್ಧಾರ ಕೈಗೊಂಡಿದೆ. ಗೂಗಲ್‌ನ ಹೊಸ ನಿಯಮಕ್ಕೆ ಬದ್ಧವಾಗಲು ಅಪ್ಲಿಕೇಶನ್‌ ಡೆವಲಪರ್‌ಗಳು ತಮ್ಮ ಆ್ಯಪ್‌ ಅಭಿವೃದ್ಧಿಪಡಿಸಬೇಕು ಎಂದು ಗೂಗಲ್‌ ತಾಕೀತು ಮಾಡಿದೆ.

ಈ ಸೌಲಭ್ಯವನ್ನು “ಎಪಿಐ 26′ ಎಂದು ಗುರುತಿಸಲಾಗಿದ್ದು, ಹೊಸ ನಿಯಮಾವಳಿಗೆ ಎಲ್ಲ ಅಪ್ಲಿಕೇಶನ್‌ ಡೆವಲಪರ್‌ಗಳೂ ಬದ್ಧವಾಗಬೇಕು ಎಂದು ಗೂಗಲ್‌ ಸೂಚಿಸಿದೆ. ಒಂದು ವೇಳೆ ಬದಲಾವಣೆ ಮಾಡುವ ಬಗ್ಗೆ ಅಪ್ಲಿಕೇಶನ್‌ ಡೆವಲಪರ್‌ಗಳು ಗೂಗಲ್‌ಗೆ ಘೋಷಣೆ ಪತ್ರವನ್ನು ನೀಡದಿದ್ದರೆ ಅಪ್ಲಿಕೇಶನ್‌ ಅನ್ನು ಆ್ಯಪ್‌ಸ್ಟೋರ್‌ನಿಂದ ತೆಗೆದುಹಾಕಲಾಗುತ್ತದೆ. ಆದರೆ ಹೀಗೆ ಮಾಡುವ ಮುನ್ನ, ನಿಜವಾಗಿಯೂ ಅಪ್ಲಿಕೇಶನ್‌ನ ಕಾರ್ಯನಿರ್ವಹಣೆಗೆ ಕರೆ ಮತ್ತು ಎಸ್‌ಎಂಎಸ್‌ ಡೇಟಾ ಬಳಕೆ ಅಗತ್ಯವಿದೆಯೇ ಎಂದು ಗೂಗಲ್‌ ಪರಾಮರ್ಶಿಸಲಿದೆ.

ಬಳಕೆದಾರರಿಗೆ ನಿರಾಳ 
ಪ್ರಸ್ತುತ ಹಲವು ಆ್ಯಪ್‌ಗ್ಳು ಕರೆ ಮತ್ತು ಎಸ್‌ಎಂಎಸ್‌ ದತ್ತಾಂಶಗಳ ಅನುಮತಿಯನ್ನೂ ಕೇಳುತ್ತವೆ. ಆ್ಯಪ್‌ ಕಾರ್ಯನಿರ್ವಹಣೆಯ ಮೂಲ ಉದ್ದೇಶಕ್ಕೆ ಈ ಡೇಟಾ ಅಗತ್ಯವಿಲ್ಲದಿದ್ದರೂ ಇವುಗಳನ್ನು ಬಳಕೆ ಮಾಡುವ ಮೂಲಕ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದವು. ಅಷ್ಟೇ ಅಲ್ಲ, ಈ ಡೇಟಾಗಳ ಬಳಕೆಯ ಬಗ್ಗೆಯೂ ಬಳಕೆದಾರರಲ್ಲಿ ಆತಂಕ ಮೂಡಿಸುತ್ತಿದ್ದವು. ಆದರೆ ಈಗ ಗೂಗಲ್‌ನ ಈ ಕಠಿನ ನೀತಿಯಿಂದಾಗಿ ಆ್ಯಪ್‌ ಡೆವಲಪರ್‌ಗಳು ಇಂಥ ಅನಗತ್ಯ ಡೇಟಾವನ್ನು ಬಳಕೆದಾರರ ಸ್ಮಾರ್ಟ್‌ಫೋನ್‌ನಿಂದ ಕದಿಯುವಂತಿಲ್ಲ.

90 ದಿನಗಳ ಕಾಲಾವಕಾಶ ಮುಗಿದಿದ್ದರಿಂದ ಕ್ರಮ
ಆ್ಯಪ್‌ ಡೆವಲಪರ್‌ಗಳಿಗೆ ಎಚ್ಚರಿಕೆ ನೀಡಿದ ಗೂಗಲ್‌

 

Advertisement
Advertisement

Udayavani is now on Telegram. Click here to join our channel and stay updated with the latest news.

Next