ನವದೆಹಲಿ: ಗೂಗಲ್ ಪೇ ಇದೀಗ ಭಾರತದಲ್ಲಿ ಹೊಸ ಫೀಚರ್ ಒಂದನ್ನು ಜಾರಿಗೆ ತರಲಿದ್ದು ಬಳಕೆದಾರರು ತಮ್ಮ ಪಾವತಿ ವಿಧಾನದಲ್ಲಿ ಎನ್ಎಫ್ಸಿ (ನಿಯರ್ ಫೀಲ್ಡ್ ಕಮ್ಯೂನಿಕೇಶನ್) ಚಾಲಿತ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಹೊಂದಿರುವ ಬ್ಯಾಂಕ್ ಖಾತೆಯನ್ನು ಸೇರಿಸಬಹುದಾಗಿದೆ.
ಈ ಹೊಸ ಬೆಳವಣಿಗೆಯು ಟೋಕನೈಸ್ ಮಾಡಿದ ಪಾವತಿ ಕಾರ್ಡ್ ಪ್ರಾರಂಭಿಸಲು ಗೂಗಲ್ ಗೆ ಸಹಾಯ ಮಾಡುತ್ತದೆ. ಕಳೆದ ವರ್ಷ ಗೂಗಲ್ ಫಾರ್ ಇಂಡಿಯಾ, ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಬಳಸಿಕೊಂಡು ಗೂಗಲ್ ಪೇಯಲ್ಲಿ ಸುರಕ್ಷಿತ ಆನ್ ಲೈನ್ ಪೇಮೆಂಟ್ ಸೇವೆಯನ್ನು ನೀಡುವುದಾಗಿ ತಿಳಿಸಿತ್ತು. ಮಾತ್ರವಲ್ಲದೆ ಮುಂದಿನ ಕೆಲವು ವಾರಗಳಲ್ಲಿ ವಿಸಾ ಕಾರ್ಡ್ ಬಳಸಿ ಸೇವೆ ನೀಡುವುದಾಗಿ ಹೇಳಿತ್ತು. ಅದಾಗ್ಯೂ ಈ ಫೀಚರ್ ಒಂದು ವರುಷವಾದರೂ ಬಳಕೆದಾರರನ್ನು ತಲುಪಿರಲಿಲ್ಲ.
ಇದೀಗ ಆ್ಯಂಡ್ರಾಯ್ಡ್ ಪೊಲೀಸ್ ವರದಿ ಪ್ರಕಾರ, ಗೂಗಲ್ ಪೇ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಸೇರಿಸಲು ಬೆಂಬಲವನ್ನು ನೀಡುತ್ತಿದೆ. ಬಳಕೆದಾರರು ತಮ್ಮ ಕಾರ್ಡ್ ಅನ್ನು ಅಪ್ಲಿಕೇಶನ್ ಗೆ ಸೇರಿಸಲು ಬ್ಯಾಂಕಿನಿಂದ ಪಡೆಯುವ ಒಟಿಪಿಯನ್ನು ನಮೂದಿಸಿ, ಆ ಮೂಲಕ ತಮ್ಮ ಕಾರ್ಡ್ ಅನ್ನು ಪರಿಶೀಲಿಸಬೇಕಾಗುತ್ತದೆ. ಒಮ್ಮೆ ನೋಂದಾಯಿಸಿದ ನಂತರ, ಇದರ ಬಳಕೆ ಸುಲಭ ಸಾಧ್ಯವಾಗುತ್ತದೆ ಎಂದು ತಿಳಿದುಬಂದಿದೆ.
ಈ ಫೀಚರ್ ಕಳೆದೊಂದು ತಿಂಗಳಿಂದ ಆಯ್ದ ಬಳಕೆದಾರರಿಗೆ ಲಭ್ಯವಾಗುತ್ತಿದೆ ಎಂದು ವರದಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಕೂಡ ಈ ಸೇವೆ ದೊರಕಲಿದೆ.